ಶ್ರೀಲಂಕಾದ ಕಾರ್ಮಿಕನಿಗೆ ಸೌದಿಯಲ್ಲಿ ಮರಣದಂಡನೆ
ಫೇಸ್‌ಬುಕ್ ಕಾಮೆಂಟ್ ಪ್ರಕರಣದಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಳ
ಆರಂಭದಲ್ಲಿ 5 ವರ್ಷ ಜೈಲು, 30 ಲಕ್ಷ ಸೌದಿ ರಿಯಾಲ್ ದಂಡ
Saudi Arabia death sentence: ಸೌದಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಲಂಕಾ ತಮಿಳು ಕಾರ್ಮಿಕನಿಗೆ ಫೇಸ್‌ಬುಕ್ ಕಾಮೆಂಟ್ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ ಆರೋಪದಲ್ಲಿ ಮೊದಲು 5 ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು.
ಶ್ರೀಲಂಕಾದ ಧಾರ್ಮಿಕ ವಿಚಾರವೊಂದರ ಬಗ್ಗೆ ನಡೆದ ಸಾಮಾಜಿಕ ಜಾಲತಾಣದ ಚರ್ಚೆಯಲ್ಲಿ ಅನೋಜನ್ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿದ್ದರು ಎನ್ನಲಾಗಿದೆ. ಅದನ್ನು ಸೌದಿ ಅಧಿಕಾರಿಗಳು ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸುವಂತದ್ದು ಎಂದು ಪರಿಗಣಿಸಿದ್ದಾರೆ. ಬಳಿಕ ಅನೋಜನ್ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದರು ಎಂದು ವರದಿಯಾಗಿದೆ.
ಅಲ್-ಅಹ್ಸಾ ಕೋರ್ಟ್ ಅನೋಜನ್‌ಗೆ ಮೊದಲು 5 ವರ್ಷ ಜೈಲು ಹಾಗೂ 30 ಲಕ್ಷ ಸೌದಿ ರಿಯಾಲ್ ದಂಡ ವಿಧಿಸಿತ್ತು. ಬಳಿಕ ಸೌದಿ ಪ್ರಾಸಿಕ್ಯೂಷನ್ ಹೆಚ್ಚಿನ ಶಿಕ್ಷೆ ಕೋರಿ ಮೇಲ್ಮನವಿ ಸಲ್ಲಿಸಿದ್ದು, ಸೆಪ್ಟೆಂಬರ್ 17ರಂದು ಶಿಕ್ಷೆಯನ್ನು ಮರಣದಂಡನೆಗೆ ಹೆಚ್ಚಿಸಲಾಗಿದೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವ ವಿಜಯಿತ ಹೆರತ್ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಶ್ರೀಲಂಕಾ ವಿದೇಶಾಂಗ ಸಚಿವಾಲಯ ಗಮನ ಹರಿಸಿದ್ದು, ರಿಯಾದ್‌ನಲ್ಲಿರುವ ರಾಯಭಾರ ಕಚೇರಿ ಮೂಲಕ ಸೌದಿ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದೆ. ಅನೋಜನ್‌ಗೆ ಕಾನೂನು ಮತ್ತು ರಾಜತಾಂತ್ರಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಸೆಪ್ಟೆಂಬರ್ 20ರಂದು ಸೌದಿ ನ್ಯಾಯಾಲಯದ ಲಿಖಿತ ತೀರ್ಪು ಶ್ರೀಲಂಕಾ ಸರ್ಕಾರಕ್ಕೆ ಸಿಕ್ಕಿದೆ. ಇದರ ಆಧಾರದ ಮೇಲೆ ಮುಂದಿನ ಕಾನೂನು ಮತ್ತು ರಾಜತಾಂತ್ರಿಕ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)