ನ್ಯೂಸ್

ಪಕ್ಕದ ಮನೆಯ ವಿವಾಹಿತೆ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಯುವಕ ದುರಂತ ಸಾವು

ಬೆಳಗಾವಿ: ಪತ್ನಿಯ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪಕ್ಕದ ಮನೆಯ ಯುವಕನನ್ನು ವ್ಯಕ್ತಿಯೊಬ್ಬ ಬರ್ಬರ ಹತ್ಯೆ ಮಾಡಿರುವ ಅಮಾನುಷ ಘಟನೆ ಯರಗಟ್ಟಿ ತಾಲೂಕಿನ ಹಲಕಿ ಗ್ರಾಮದ ಬಳಿ ನಡೆದಿದೆ.

ರಮೇಶ್ ಗುಂಜಗಿ (24) ಕೊಲೆಯಾದ ಯುವಕ. ಈತ ಬೈಲಹೊಂಗಲ ತಾಲೂಕಿನ ವನ್ನೂರ ಗ್ರಾಮದ ನಿವಾಸಿ. ಎರಡು ತಿಂಗಳ ಹಿಂದೆ ಮನೆ ಪಕ್ಕದ ಸಾವಾಂಕ್ಕಾ ಎಂಬಾಕೆಯ ಜತೆಗೆ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ಆಕೆಯ ಗಂಡ ಯಲ್ಲಪ್ಪ ಕಸೊಳ್ಳಿಗೆ ಗೊತ್ತಾಗಿ, ಗೆಳೆಯರೊಂದಿಗೆ ಸೇರಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ರಮೇಶ್​ನನ್ನು ಕೊಲೆ ಮಾಡಿದ್ದಾರೆ.

ಅನೈತಿಕ ಸಂಬಂಧ ಗೊತ್ತಾದ ಬಳಿಕ ಒಂದು ತಿಂಗಳ ಹಿಂದಷ್ಟೇ ಗ್ರಾಮದಲ್ಲಿ ರಾಜಿ ಪಂಚಾಯಿತಿ ನಡೆದಿತ್ತು. ಮೃತ ರಮೇಶ್ ತಾನು ಮಾಡಿದ ತಪ್ಪಿಗೆ ಯಲ್ಲಪ್ಪನಿಗೆ ಎರಡೂವರೆ ಲಕ್ಷ ರೂ. ದಂಡ ಕೊಟ್ಟಿದ್ದ. ಈ ವೇಳೆ ಗಂಡನನ್ನು ಬಿಟ್ಟು ಸಾವಾಂಕ್ಕಾ ರಮೇಶ್ ಮನೆಗೆ ಬಂದಿದ್ದಳು. ಇದಾದ ಹದಿನೈದು ದಿನಕ್ಕೆ ಮತ್ತೆ ಗಂಡನ ಜತೆಗೆ ಸಂಪರ್ಕಕ್ಕೆ ಬಂದು ತವರು ಮನೆ ಸೇರಿದ್ದಳು.

ರಮೇಶ್​ನನ್ನು ಬಿಟ್ಟು ಬಂದ ಬಳಿಕ ಗಂಡನ ಜತೆಗೆ ಸೇರಿಕೊಂಡು ಕೊಲೆ ಮಾಡಿಸಿದ್ದಾಳೆ ಎಂಬ ಆರೋಪ ಸಾವಂಕ್ಕಾ ವಿರುದ್ಧವೂ ಕೇಳಿಬಂದಿದೆ. ಕೊಲೆಯಾದ ರಮೇಶ್ ಕುಟುಂಬಸ್ಥರು ಈ ಆರೋಪ ಮಾಡಿದ್ದಾರೆ. ಗಂಡ ಯಲ್ಲಪ್ಪ, ಹೆಂಡತಿ ಸಾವಂಕ್ಕಾ ಮತ್ತು ಆರು ಜನರಿಂದ ಕೊಲೆ ನಡೆದಿದೆ ಎನ್ನಲಾಗಿದೆ. ಬೆಳಗಾವಿಯಲ್ಲಿ ಕೆಲಸಕ್ಕೆ ಇದ್ದ ರಮೇಶ್​ನನ್ನು ಗೆಳೆಯನ ಮೂಲಕ ಕರೆಯಿಸಿಕೊಂಡು. ಹಲಕಿ ಬಳಿ ಜಮೀನಿನಲ್ಲಿ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)