ನವದೆಹಲಿ: ದೇಶಾದ್ಯಂತ ಜನವರಿಯಿಂದ ಎಟಿಎಂ ನಗದು ಸೇವೆ ದುಬಾರಿಯಾಗಲಿದೆ. ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್ ಎಟಿಎಂನಿಂದ ನಗದು ಹಣ ಪಡೆಯುವ ತಿಂಗಳ ಮಿತಿ ಮೀರಿ ಅನ್ಯ ಎಟಿಎಂನಿಂದ ಹಣ ನಗದೀಕರಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಎಟಿಎಂ ಯಂತ್ರ ಸ್ಥಾಪನೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಕಾರಣ ಎಟಿಎಂ ಇಂಟರ್ಚೇಂಜ್ ಶುಲ್ಕ ಹೆಚ್ಚಳಕ್ಕೆ ಆರ್ಬಿಐ ಈ ವರ್ಷ ಮಧ್ಯಭಾಗದಲ್ಲಿ ಸಮ್ಮತಿ ಸೂಚಿಸಿತ್ತು.
ಇದರಂತೆ, ಆ.1ರಿಂದ ಪ್ರತಿ ವಹಿವಾಟಿನ ಶುಲ್ಕ 15ರಿಂದ 17 ರೂ.ಗೆ ಏರಿಕೆ ಆಗಿದೆ. ಇದಲ್ಲದೆ, ಹಣಕಾಸೇತರ ವಹಿವಾಟಿನ ಶುಲ್ಕ 5ರಿಂದ 6 ರೂ.ಗೆ ಏರಿಕೆ ಆಗಿದೆ. ಅನ್ಯ ಬ್ಯಾಂಕ್ ಎಟಿಎಂನಲ್ಲಿ ಕಾರ್ಡ್ ಬಳಕೆ ಆಗಿದ್ದಕ್ಕೆ ವಿಧಿಸುವ ಶುಲ್ಕ ಇದಾಗಿದೆ. ಗ್ರಾಹಕರಿಗೆ ನಿಶ್ಚಿತ ಸಂಖ್ಯೆಯ ಉಚಿತ ವಹಿವಾಟಿಗೆ ಅವಕಾಶ ಇದ್ದು, ಇದಾದ ಬಳಿಕ ಪ್ರತಿ ವಹಿವಾಟಿಗೆ ಗ್ರಾಹಕರು 20 ರೂ. ಬ್ಯಾಂಕಿಗೆ ಪಾವತಿಸಬೇಕಾಗಿದೆ. ಇದು ಕೂಡ 1 ರೂ. ಹೆಚ್ಚಾಗುತ್ತಿದ್ದು. 2022ರ ಜನವರಿ 1ರಿಂದ ಚಾಲ್ತಿಗೆ ಬರಲಿದೆ ಎಂದು ಆರ್ಬಿಐ ತಿಳಿಸಿದೆ.