ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಪ್ರಯಾಣಿಕರಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ರಸ್ತೆ ಮಾಳಗಾಳ ನಿವಾಸಿ ನಂಜುಂಡ, ಪಟ್ಟೇಗಾರಪಾಳ್ಯದ ಗಿರೀಶ್ ಮತ್ತು ನವೀನ್ ಬಂಧಿತರು. ಇವರಿಂದ 3 ಮೊಬೈಲ್, 10 ಸಾವಿರ ರೂ. ಜಪ್ತಿ ಮಾಡಲಾಗಿದೆ. ಸೆ.2ರಂದು ಮುಂಜಾನೆ 5.15ರಲ್ಲಿ ಮಾಗಡಿಗೆ ತೆರಳಲು ಸುಮನಹಳ್ಳಿ ಜಂಕ್ಷನ್ ಬಳಿ ಬಸ್‌ಗೆ ವ್ಯಕ್ತಿಯೊಬ್ಬರು ಕಾಯುತ್ತಿದ್ದರು.
ಅಲ್ಲಿಗೆ ಕಾರಿನಲ್ಲಿ ಬಂದ ಆರೋಪಿಗಳು, ಮಾಗಡಿ ಕಡೆ ಹೋಗುತ್ತಿರುವುದಾಗಿ ಕೂಗಿದಾಗ ಹತ್ತಿದ್ದರು. ಮಾರ್ಗಮಧ್ಯೆ ಪ್ರಯಾಣಿಕನಿಗೆ ಡಾೃಗರ್‌ನಿಂದ ಬೆದರಿಸಿ ಹಣ ವಸೂಲಿ ಮಾಡಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ್ವಯ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಸುಲಿಗೆಕೋರರ ತಂಡವನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ವೃತ್ತಿಪರ ಕ್ರಿಮಿನಲ್ ನಂಜುಂಡ, ತನ್ನ ಸ್ನೇಹಿತರಾದ ಆಟೋ ಚಾಲಕ ಗಿರೀಶ್, ಕ್ಯಾಬ್ ಚಾಲಕ ನವೀನ್ ಜತೆ ಸೇರಿ ಮುಂಜಾನೆ ನಾಗರಬಾವಿ ಹೊರವರ್ತುಲ ರಸ್ತೆ ಮತ್ತು ಮಾಗಡಿ ರಸ್ತೆಗಳಲ್ಲಿ ಸುತ್ತಾಡಿ ಬಸ್‌ಗೆ ಕಾಯುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.