Hafiz Saeed : ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಮುಖ್ಯಸ್ಥ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಅಡಗುತಾಣವನ್ನು ಇಂಡಿಯಾ ಟುಡೇ ಪತ್ತೆಹಚ್ಚಿದ್ದು, ಪಾಕಿಸ್ತಾನ ಸರ್ಕಾರದ ಬಿಗಿ ಭದ್ರತೆಯಲ್ಲಿ ಲಾಹೋರ್‌ನಲ್ಲಿ ವಾಸಿಸುತ್ತಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ಮೋಸ್ಟ್ ವಾಂಟೆಡ್ ಉಗ್ರ ಎನಿಸಿಕೊಂಡಿರುವ ಸಯೀದ್, ಏಪ್ರಿಲ್ 22 ರಂದು 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಹತ್ಯಾಕಾಂಡದ ಹಿಂದಿನ ಮಾಸ್ಟರ್ ಮೈಂಡ್ ಎಂದು ನಂಬಲಾಗಿದೆ. ಆತನ ಭಯೋತ್ಪಾದಕ ಸಂಘಟನೆಯಾದ ಎಲ್‌ಇಟಿಯ ಅಂಗಸಂಸ್ಥೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ಅತ್ಯುನ್ನತ ಮಟ್ಟದ ರಾಜತಾಂತ್ರಿಕ ಉದ್ವಿಗ್ನತೆಗೆ ಕಾರಣವಾಗಿದೆ.
ಸಯೀದ್ ಯಾವುದೇ ನಿರ್ಜನ ಪ್ರದೇಶದಲ್ಲಿ ವಾಸಿಸುತ್ತಿಲ್ಲ. ಬದಲಾಗಿ ಜನನಿಬಿಡ ನಗರದ ಕೇಂದ್ರ ಭಾಗದಲ್ಲೇ ಸಾಮಾನ್ಯ ಜನರ ನಡುವೆ ಆರಾಮಾಗಿ ವಾಸಿಸುತ್ತಿದ್ದಾನೆ. ಭಾರತಕ್ಕೆ ಬೇಕಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹೇಗೆ ಅಡಗಿಕೊಂಡಿದ್ದಾನೆ ಎಂಬುದನ್ನು ತೋರಿಸುವ ಉಪಗ್ರಹ ಚಿತ್ರಗಳು ಮತ್ತು ವಿಡಿಯೋಗಳನ್ನು ಇಂಡಿಯಾ ಟುಡೇ ಪಡೆದುಕೊಂಡಿದೆ. ಹಫೀಜ್‌ನನ್ನು ರಕ್ಷಿಸಲು ಅವರ ಮನೆಯ ಸುತ್ತ ಸೈನಿಕರನ್ನು ನಿಯೋಜಿಸಲಾಗಿದೆ. ಆ ಸ್ಥಳವು 24x7 ಭದ್ರತೆಯಲ್ಲಿದೆ.
ಇಂಡಿಯಾ ಟುಡೇಗೆ ಲಭ್ಯವಿರುವ ಉಪಗ್ರಹ ಚಿತ್ರವು ಮೂರು ಆಸ್ತಿಗಳನ್ನು ತೋರಿಸುತ್ತದೆ. ಸಯೀದ್ ನಿವಾಸ, ಮಸೀದಿ ಮತ್ತು ಮದರಸಾವನ್ನು ಹೊಂದಿರುವ ದೊಡ್ಡ ಕಟ್ಟಡ ಮತ್ತು ಹಫೀಜ್‌ಗಾಗಿ ವೈಯಕ್ತಿಕ ಸೌಲಭ್ಯಗಳೊಂದಿಗೆ ಹೊಸದಾಗಿ ರಚಿಸಲಾದ ಖಾಸಗಿ ಉದ್ಯಾನವನವೂ ಇದೆ. ಅಡಗುತಾಣದಲ್ಲಿನ ವಿಡಿಯೋಗಳು, ಪಾಕಿಸ್ತಾನ ಸರ್ಕಾರದ ಭದ್ರತೆಯಲ್ಲಿರುವ ಭಯೋತ್ಪಾದಕ ಆರಾಮದಾಯಕ ಜೀವನವನ್ನು ನಡೆಸುತ್ತಿರುವುದನ್ನು ತೋರಿಸುತ್ತವೆ.
ಆತ ಜೈಲಿನಲ್ಲಿದ್ದಾನೆ ಎಂಬ ಪಾಕಿಸ್ತಾನ ಸರ್ಕಾರದ ಹೇಳಿಕೆಗಳಿಗೆ ವಿರುದ್ಧವಾಗಿದೆ. ಭಯೋತ್ಪಾದನೆಗೆ ಹಣಕಾಸು ಒದಗಿಸಿದ್ದಕ್ಕಾಗಿ ಸಯೀದ್ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ ಎಂದು ಪಾಕಿಸ್ತಾನ ಹೇಳುತ್ತಲೇ ಇದೆ. ಆದರೆ, ಅದು ಸುಳ್ಳು. ಆರಾಮಾಗಿ ಹೊರಗಡೆಯೇ ಇದಾನೆ.
ಹಫೀಜ್ ಸಯೀದ್ ಅಡಗುತಾಣದಲ್ಲಿರುವ ಬಗ್ಗೆ ಭಾರತೀಯ ಸಂಸ್ಥೆಗಳಿಗೆ ಮಾಹಿತಿ ತಿಳಿದಿದೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಕಳೆದ ತಿಂಗಳು, ಹಫೀಜ್ ಸಯೀದ್ ಆಪ್ತ ಸಹಾಯಕ ಅಬು ಕತಾಲ್ ಹತ್ಯೆಯ ನಂತರ ಪಾಕಿಸ್ತಾನವು ಆತನ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಿದೆ. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿತ್ತು. ದೇಶದ ಗುಪ್ತಚರ ಸಂಸ್ಥೆ ಐಎಸ್‌ಐ ಕೂಡ ಸಯೀದ್‌ನ ಭದ್ರತೆಯನ್ನು ಪರಿಶೀಲಿಸಿದ್ದು, ಅವನ ನಿವಾಸವನ್ನು ಉಪ-ಜೈಲಾಗಿ ಪರಿವರ್ತಿಸಲಾಗಿದೆ.
ಪಹಲ್ಗಾಮ್‌ನಲ್ಲಿ ದಾಳಿ ನಡೆಸಲು ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಸಹಾಯ ಮಾಡುವಲ್ಲಿ ಲಷ್ಕರ್-ಇ-ತೊಯ್ಬಾದ ಉನ್ನತ ಕಮಾಂಡರ್ ಫಾರೂಕ್ ಅಹ್ಮದ್‌ನ ಜಾಲವು ಪ್ರಮುಖ ಪಾತ್ರ ವಹಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಈ ಅಹ್ಮದ್, ಪ್ರಸ್ತುತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಇದ್ದಾನೆ ಎನ್ನಲಾಗಿದೆ. ಈತ ಕಳೆದ ಎರಡು ವರ್ಷಗಳಲ್ಲಿ ತನ್ನ ಸ್ಲೀಪರ್ ಸೆಲ್ ಜಾಲದ ಮೂಲಕ ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)