Delhi : ದೆಹಲಿ ಕೆಂಪು ಕೋಟೆ ಬಳಿ ನಡೆದ ಸ್ಫೋಟದ (Delhi Blast) ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಬೆಳವಣಿಗೆಯೊಂದರಲ್ಲಿ, ಹುಂಡೈ ಐ20 ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಡಾ. ಉಮರ್ ಉನ್ ನಬಿ ಎನ್ನುವುದು ವಿಧಿವಿಜ್ಞಾನ ಪರೀಕ್ಷೆಯ ವರದಿ ದೃಢಪಡಿಸಿವೆ ಎಂದು ಗುರುವಾರ( ನ 13) ವರದಿಯಾಗಿದೆ.
ಡಾ. ಉಮರ್ ಅವರ ತಾಯಿಯ ಡಿಎನ್ಎ ಮಾದರಿಗಳು, ಸ್ಫೋಟದ ಸ್ಥಳದಿಂದ ವಶಪಡಿಸಿಕೊಂಡ ಮೂಳೆಗಳು ಮತ್ತು ಹಲ್ಲುಗಳಿಂದ ಹೊರತೆಗೆಯಲಾದ ಡಿಎನ್ಎ ಮಾದರಿಗಳೊಂದಿಗೆ ಹೊಲಿಕೆಯಾದ ಬಳಿಕ ಈ ವಿಷಯ ದೃಢಪಟ್ಟಿದ್ದು, ಈ ಮಾದರಿಗಳನ್ನು ಏಮ್ಸ್ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವಿಶ್ಲೇಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಕಾರು ಸ್ಫೋಟ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿದ್ದು, ಜೈಶ್-ಎ-ಮೊಹಮ್ಮದ್ ಮಾಡ್ಯೂಲ್ ನಡೆಸಿದ ಭಯೋತ್ಪಾದಕ ದಾಳಿಯನ್ನು ಭಾರತೀಯ ತನಿಖಾ ಸಂಸ್ಥೆಗಳು ಬಯಲು ಮಾಡಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಗುಂಪಿನಲ್ಲಿ ಒಂಬತ್ತರಿಂದ ಹತ್ತು ಸದಸ್ಯರು ಸೇರಿದ್ದಾರೆ ಎಂದು ಹೇಳಲಾಗುತ್ತದೆ, ಅವರಲ್ಲಿ ಐದರಿಂದ ಆರು ಜನ ವೈದ್ಯರು, ತಮ್ಮ ವೈದ್ಯಕೀಯ ಅರ್ಹತೆಗಳನ್ನು ಬಳಸಿಕೊಂಡು ಸ್ಫೋಟಕಗಳಿಗೆ ರಾಸಾಯನಿಕಗಳು ಮತ್ತು ವಸ್ತುಗಳನ್ನು ಖರೀದಿಸಿದರು ಎನ್ನಲಾಗಿದೆ.
ಈ ತಂಡವು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಿದೆ. ಸ್ಫೋಟದ ಹಿಂದೆ ಭಯೋತ್ಪಾದಕ ಕೃತ್ಯದ ಸಾಧ್ಯತೆಗಳಿವೆ ಎಂಬ ಅನುಮಾನದ ಹಿನ್ನಲೆಯಲ್ಲಿ ಗೃಹ ಸಚಿವಾಲಯ ತನಿಖೆಯನ್ನು NIA ಗೆ ಹಸ್ತಾಂತರಿಸಿದೆ.
ಪುಲ್ವಾಮಾದ ಕೊಯಿಲ್ ಗ್ರಾಮದ ಅವರ ಸಂಬಂಧಿಕರ ಪ್ರಕಾರ, ಡಾ. ಉಮರ್ ಶಾಂತ ಸ್ವಭವಾದ ವ್ಯಕ್ತಿ ಎನ್ನಲಾಗಿದ್ದು, ಅವನಿಗೆ ಓದೇ ಪ್ರಪಂಚವಾಗಿತ್ತು ಎಂದಿದ್ದಾರೆ. ಪೊಲೀಸ್ ಮೂಲಗಳು ಹೇಳುವ ಪ್ರಕಾರ, ಉಮರ್ ನ ಇತ್ತೀಚಿನ ನಡವಳಿಕೆಯಲ್ಲಿ ತುಂಬಾ ಬದಲಾವಣೆಯಾಗಿತ್ತು. ಅವನು ಫರಿದಾಬಾದ್ ಮತ್ತು ದೆಹಲಿ ನಡುವಿ ಪ್ರಯಾಣವನ್ನು ಹೆಚ್ಚು ಮಾಡಿದ್ದನಂತೆ. ರಾಮಲೀಲಾ ಮೈದಾನ ಮತ್ತು ಸುನೇಹ್ರಿ ಮಸೀದಿಗಳಿಗೆ ಭೇಟಿ ನೀಡುತ್ತಿದ್ದ. ಸ್ಫೋಟದ ದಿನದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವನು ಕೆಂಪು ಕೋಟೆಯ ಕಡೆಗೆ ಕಾರು ಚಲಾಯಿಸುವ ಮುನ್ನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಸೀದಿಯ ಬಳಿ ವಾಹನ ನಿಲ್ಲಿಸಿರುವುದು ಕಂಡುಬಂದಿದೆ.
ಉಮರ್ ನೇತೃತ್ವದ ಗುಂಪು ಈ ದಾಳಿಯನ್ನು, 2008 ರ ಮುಂಬೈ ಭಯೋತ್ಪಾದಕ ದಾಳಿಯಂತೆಯೇ ನಡೆಸಲು ಆಲೋಚಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನೊಳಗೆ ಸಂಭವಿಸಿರುವ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದು, 29 ಜನ ಗಾಯಗೊಂಡಿದ್ದಾರೆ. ಸ್ಫೋಟದ ವೇಳೆ ಹತ್ತಿರವೇ ಇದ್ದ ಅನೇಕ ವಾಹನಗಳು ಸುಟ್ಟುಹೋಗಿದ್ದು, ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಾರಿನಲ್ಲಿ ಸಂಭವಿಸಿದ ಈ ಘಟನೆ ದೆಹಲಿ ಪೊಲೀಸರು, ಎನ್‌ಐಎ, ಎನ್‌ಎಸ್‌ಜಿ ಮತ್ತು ವಿಧಿವಿಜ್ಞಾನ ತಂಡಗಳಿಂದ ಉನ್ನತ ಮಟ್ಟದ ತನಿಖೆಗೆ ಕಾರಣವಾಗಿದೆ. ಯುಎಪಿಎ ಮತ್ತು ಸ್ಫೋಟಕ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಭದ್ರತಾ ತಪಾಸಣೆಯೊಂದಿಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ 11 ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಈ ವೇಳೆ ಮಾತನಾಡಿದ ಷಾ, ಎಲ್ಲಾ ಕೋನದಿಂದಲೂ ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದರು. ಪ್ರಾರಂಭಿಕ ತನಿಖೆಯ ಪ್ರಕಾರ ಈ ವಾಹನವನ್ನು ಪುಲ್ವಾಮಾ ನಿವಾಸಿಗೆ ಸಂಬಂಧಿಸಿದ್ದು ಎನ್ನಲಾಗಿದ್ದು, ಇದು ಭಯೋತ್ಪಾದಕ ಸಂಪರ್ಕದ ಕುರಿತಾದ ಅನುಮಾನಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.
ಸ್ಫೋಟವಾಗುವ ಕೆಲವೇ ಕ್ಷಣಗಳ ಮೊದಲು ಕೆಂಪು ಕೋಟೆಯ ಬಳಿ, ಶಂಕಿತನ ಕಾರು ಇರುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು, ಪೊಲೀಸರು 100 ಕ್ಕೂ ಹೆಚ್ಚು ವೀಡಿಯೊ ತುಣುಕುಗಳನ್ನು ಪರಿಶೀಲಿಸುತ್ತಿದ್ದಾರೆ. ಸಂಭವಿಸಿರುವ ಘಟನೆಯು ಯೋಜಿತ ಭಯೋತ್ಪಾದಕ ದಾಳಿಯೇ, ಇಲ್ಲವೇ ಆತ್ಮಹುತಿ ಬಾಂಬ್ ದಾಳಿಯೇ ಎಂದು ತನಿಖೆ ನಡೆಸುತ್ತಿದ್ದು, ನಾಲ್ವರನ್ನು ಬಂಧಿಸಲಾಗಿದೆ.(ಏಜೆನ್ಸೀಸ್)