| ರಾಘವ ಶರ್ಮ ನಿಡ್ಲೆ, ನವದೆಹಲಿ
ದೆಹಲಿಯ 7 ಲೋಕಸಭೆ ಸೀಟುಗಳನ್ನು 2014 ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ತನ್ನದಾಗಿಸಿಕೊಂಡಿದ್ದ ಬಿಜೆಪಿ, ಈ ಬಾರಿ ಸಂಸದ ಗೌತಮ್ ಗಂಭೀರ್ ಸೇರಿದಂತೆ ರಾಜಧಾನಿಯ 5 ಸೀಟುಗಳಿಗೆ ಅಭ್ಯರ್ಥಿಗಳನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿದೆ. ದಶಕದ ಹಿಂದೆ ದೆಹಲಿ ಕಾಂಗ್ರೆಸ್-ಬಿಜೆಪಿ ನಡುವಿನ ದ್ವಿಪಕ್ಷೀಯ ಚುನಾವಣಾ ಕದನಕ್ಕೆ ಸಾಕ್ಷಿಯಾಗುತ್ತಿತ್ತು. ಆದರೆ, 2013ರಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ರಾಜಕೀಯದ ಮುಖ್ಯವೇದಿಕೆಗೆ ಬರುತ್ತಿದ್ದಂತೆಯೇ ಇಡೀ ಚಿತ್ರಣ ಬದಲಾಗಿ, ರಾಜಧಾನಿಯ ಪ್ರಮುಖ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಹೀಗಾಗಿ, ಕಳೆದೆರಡು ಚುನಾವಣೆ ತ್ರಿಕೋನ ಹೋರಾಟವನ್ನು ಕಂಡಿದೆ.
ಹಿಂದಿನೆರಡೂ ಬಾರಿ ಬಿಜೆಪಿಯನ್ನು ಮಣಿಸಲು ಸಾಧ್ಯವಾಗದ ಕಾರಣ, ಕಾಂಗ್ರೆಸ್-ಆಮ್ ಆದ್ಮಿ ಪಾರ್ಟಿ ಮೊದಲ ಬಾರಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಪಾಳಯದ ವಿರುದ್ಧ ಒಗ್ಗಟ್ಟಿನ ಮಂತ್ರ ಜಪಿಸಿವೆ. ಈ ಎರಡೂ ಪಕ್ಷಗಳ ಕಾರ್ಯಕರ್ತರು ಮಾನಸಿಕವಾಗಿ ಒಗ್ಗೂಡದಿದ್ದರೂ, ಇದು ಅಸ್ತಿತ್ವದ ಪ್ರಶ್ನೆಯಾಗಿರುವುದರಿಂದ ಒಟ್ಟಾಗಿ ಹೋರಾಡಿದ್ದಾರೆ. ಮುಂದಿನ ವರ್ಷ ದೆಹಲಿ ವಿಧಾನಸಭೆ ಚುನಾವಣೆಯೂ ನಡೆಯಲಿರುವುದರಿಂದ ಈ ಲೋಕಸಭೆ ಚುನಾವಣೆ ಮೂರೂ ಪಕ್ಷಗಳಿಗೆ ಮಹತ್ವದ್ದಾಗಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಒಂದು ಸೀಟನ್ನು ಗೆಲ್ಲದಿದ್ದರೂ 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಪ್ 70ರಲ್ಲಿ 67 ಸೀಟುಗಳನ್ನು ಗೆದ್ದು ಹೊಸ ದಾಖಲೆ ಬರೆದಿತ್ತು. 2019ರಲ್ಲಿ ಕೂಡ ಇಂಥದ್ದೇ ಮಾದರಿಯ ಫಲಿತಾಂಶ ಬಂದು, ನಂತರ ವಿಧಾನಸಭೆ ಚುನಾವಣೆಯಲ್ಲಿ ಆಪ್ 63 ಸೀಟುಗಳನ್ನು ಗೆದ್ದುಕೊಂಡಿತು. ಅಂದರೆ, ದಿಲ್ಲಿ ಜನತೆ ಕೇಂದ್ರಕ್ಕೆ ಬಿಜೆಪಿ ಮತ್ತು ಸ್ಥಳೀಯವಾಗಿ ಆಮ್ ಆದ್ಮಿ ಪಕ್ಷ ಎಂದು ತೀರ್ಮಾನ ಮಾಡಿದ್ದಾರೆ. ಆದರೆ, ಕಳೆದೆರಡು ವರ್ಷಗಳಲ್ಲಿ ಆಮ್ ಆದ್ಮಿ ಸರ್ಕಾರದ ಸಚಿವರು ಹಗರಣದಲ್ಲಿ ಸಿಲುಕಿ ಜೈಲು ಸೇರಿರುವುದು ಆಪ್ ಪಕ್ಷದ ವಿಶ್ವಾಸಾರ್ಹತೆಗೆ ಭಾರೀ ಹಾನಿ ಮಾಡಿದೆ. ಡಿಸಿಎಂ ಮನೀಷ್ ಸಿಸೋಡಿಯಾ, ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಮತ್ತು ನಂತರದಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಕೇಜ್ರಿವಾಲ್ಗೆ ಚುನಾವಣಾ ಪ್ರಚಾರದ ಸಲುವಾಗಿ 21 ದಿನಗಳ ಜಾಮೀನನ್ನು ಸುಪ್ರೀಂಕೋರ್ಟ್ ನೀಡಿದ್ದರಿಂದ ಅವರಿಗೆ ಪ್ರಚಾರ ನಡೆಸಲು ಸಾಧ್ಯವಾಗಿದೆ.
ವಿಪಕ್ಷಗಳಲ್ಲಿರುವ ಹಲವರು ತನಿಖಾ ಏಜೆನ್ಸಿಗಳ ಬಿಸಿ ಎದುರಿಸಿರುವುದರಿಂದ, ಎಲ್ಲ ಪಕ್ಷಗಳ ಮುಖ್ಯ ಗುರಿ ಬಿಜೆಪಿಯನ್ನು ರಾಜಕೀಯವಾಗಿ ಹತ್ತಿಕ್ಕುವುದೇ ಆಗಿದೆ. ಹೀಗಾಗಿ, ದಿಲ್ಲಿಯಲ್ಲೂ ಆಪ್-ಕಾಂಗ್ರೆಸ್ ಮೈತ್ರಿ ಸಾಧ್ಯವಾಗಿದೆ. ನವದೆಹಲಿ, ಪೂರ್ವ ದೆಹಲಿ, ದಕ್ಷಿಣ ದೆಹಲಿ ಮತ್ತು ಪಶ್ಚಿಮ ದೆಹಲಿಯಿಂದ ಆಪ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ, ಚಾಂದನಿ ಚೌಕ್, ಈಶಾನ್ಯ ದೆಹಲಿ ಮತ್ತು ವಾಯವ್ಯ ದೆಹಲಿಯಿಂದ ಕಾಂಗ್ರೆಸ್ ಅಭ್ಯರ್ಥಿಗಳಿದ್ದಾರೆ. ದಿಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ, ಸಂಸದ ಮನೋಜ್ ತಿವಾರಿ ಈಶಾನ್ಯ ದೆಹಲಿಯಿಂದ ಸ್ಪರ್ಧಿಸುತ್ತಿದ್ದು, ಅವರ ಎದುರಾಳಿಯಾಗಿ ಕಾಂಗ್ರೆಸ್ ಯುವ ಮುಖಂಡ, ಜೆಎನ್ಯುು ವಿದ್ಯಾರ್ಥಿ ಸಂಘಟನೆಯಲ್ಲಿದ್ದ ಬಿಹಾರ ಮೂಲದ ಕನ್ಹಯ್ಯ ಕುಮಾರ್ ಕಣದಲ್ಲಿದ್ದಾರೆ. ಮನೋಜ್ ತಿವಾರಿ ಮೂರನೇ ಬಾರಿಗೆ ಲೋಕಸಭೆ ಕಣದಲ್ಲಿದ್ದು, ಕನ್ಹಯ್ಯರಿಂದ ಪ್ರಬಲ ಪೈಪೋಟಿ ಎದುರಿಸಿದ್ದಾರೆ. ಕನ್ಹಯ್ಯ ಕಳೆದ ಚುನಾವಣೆಯಲ್ಲಿ ಬಿಹಾರದ ಬೆಗುಸರಾಯ್ ಕ್ಷೇತ್ರದಿಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಸ್ಪರ್ಧಿಸಿದ್ದರು. ಆದರೆ, ಗಿರಿರಾಜ್ ಭಾರೀ ಅಂತರದಲ್ಲಿ ಗೆದ್ದು ಬೀಗಿದ್ದರು.
ಪ್ರಣಾಳಿಕೆಯಲ್ಲಿ ಮಾಲಿನ್ಯ ವಿಚಾರ : ದಿಲ್ಲಿ ಮಾಲಿನ್ಯ ಸ್ಥಳೀಯರಿಗೆ ಬಹುದೊಡ್ಡ ಕಂಟಕವಾಗಿ ಕಾಡುತ್ತಿದ್ದರೂ, ಈ ಹಿಂದಿನ ಚುನಾವಣೆ ಪ್ರಣಾಳಿಕೆಗಳಲ್ಲಿ ಮಾಲಿನ್ಯ ತಡೆಗೆ ಪಕ್ಷಗಳ ಬದ್ಧತೆ ಏನು ಎಂಬ ಬಗ್ಗೆ ಕಿಂಚಿತ್ತೂ ಪ್ರಸ್ತಾಪವಾಗುತ್ತಿರಲಿಲ್ಲ. ಆದರೆ, ಮೊದಲ ಬಾರಿಗೆ ಮೂರೂ ಪಕ್ಷಗಳು ಮಾಲಿನ್ಯ ತಡೆಗೆ ತಮ್ಮ ಕ್ರಮಗಳೇನು ಎಂಬ ಬಗ್ಗೆ ಪ್ರಣಾಳಿಕೆಯಲ್ಲಿ ರ್ಚಚಿಸಿವೆ. ವಾಸ್ತವದಲ್ಲಿ, ಮಾಲಿನ್ಯ ತಡೆ ಸಾಧ್ಯವಾಗಿಲ್ಲದಿದ್ದರೂ, ಇದೊಂದು ಗಂಭೀರ ಸಮಸ್ಯೆ ಎಂದು ಪ್ರಣಾಳಿಕೆಯಲ್ಲಿ ಸೇರಿಸಿರುವುದೇ ಸಮಾಧಾನಕರ ವಿಚಾರ ಎಂದು ಕರೋಲ್ಬಾಗ್ನ ವ್ಯಾಪಾರಿ ಕವಲ್ಜಿತ್ ಸಿಂಗ್ ಹೇಳುತ್ತಾರೆ. ದಿಲ್ಲಿಯ ಹೃದಯಭಾಗದಲ್ಲಿ ಯಮುನಾ ನದಿ ಹರಿದು ಹೋಗುತ್ತದೆ. ದುರಂತವೆಂದರೆ, ಬಿಳಿ ನೊರೆಗಳು ತುಂಬಿಕೊಂಡು, ವಿಷಜಲವನ್ನು ಒಡಲಲ್ಲಿಟ್ಟುಕೊಂಡು ಯಮುನೆ ಅಳುತ್ತಿದ್ದರೂ, ಇದನ್ನು ತಡೆಯಲು ಸ್ಥಳೀಯ ಆಪ್ ಸರ್ಕಾರ ಅಥವಾ ಕೇಂದ್ರ ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ‘ಯಮುನಾ ನದಿಯಲ್ಲಿ ತ್ಯಾಜ್ಯಗಳು ತುಂಬಿಕೊಂಡ ಪರಿಣಾಮ ಹೊರಬರುವ ಅಸಹನೀಯ ವಾಸನೆ ಮೂಗಿಗೆ ಬಡಿಯುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ಈ ಕಾಲದ ದುರಂತವೇ ಸರಿ’ ಎಂದು ಕೃಷಿ ವಿಜ್ಞಾನದ ವಿದ್ಯಾರ್ಥಿ ಚೇತನ್ ಹೇಳುತ್ತಾರೆ.
ಆಪ್ ಶಕ್ತಿ ಕೇಜ್ರಿವಾಲ್ : ಲೋಕಸಭೆ ಪ್ರಚಾರ ಕಣಕ್ಕೆ ಕೇಜ್ರಿವಾಲ್ ಪ್ರವೇಶದ ಬಳಿಕ ಆಪ್ ಹುರುಪು ದುಪ್ಪಟ್ಟಾಗಿದ್ದು ಸುಳ್ಳಲ್ಲ. ‘ಇವೆಲ್ಲವೂ ಬಿಜೆಪಿ ಷಡ್ಯಂತ್ರಗಳ ಭಾಗ’ ಎಂದು ಎಲ್ಲ ವೇದಿಕೆಗಳಲ್ಲಿ ಭಾಷಣ ಮಾಡಿರುವ ಕೇಜ್ರಿವಾಲ್, ‘ನಾನು ರಾಜೀನಾಮೆ ನೀಡಲಾರೆ, ಜೈಲಿನಿಂದಲೇ ಆಡಳಿತ ನಡೆಸುತ್ತೇನೆ’ ಎಂದು ಮತ್ತೊಮ್ಮೆ ಸವಾಲು ಹಾಕಿದ್ದಾರೆ. ‘ರಾಜೀನಾಮೆ ನೀಡಿದರೆ, ಮುಂದಿನ ದಿನಗಳಲ್ಲಿ ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ.ಕೆ. ಸ್ಟಾಲಿನ್ ಕೂಡ ಜೈಲು ಸೇರಿ ರಾಜೀನಾಮೆ ನೀಡಬೇಕಾಗಿ ಬಂದೀತು. ಇದು ಸಂಘರ್ಷಮಯ ಹೋರಾಟ. ಬಿಜೆಪಿ ಪಿತೂರಿಗೆ ನಿಮ್ಮ ವೋಟಿನಿಂದಲೇ ಬುದ್ಧಿ ಕಲಿಸಿ’ ಎಂದು ಮನವಿ ಮಾಡಿದ್ದಾರೆ. ‘ಜೈಲ್ ಕಾ ಜವಾಬ್ ವೋಟ್ ಸೇ’ ಎಂದು ದಿಲ್ಲಿಯೆಲ್ಲೆಡೆ ಘೊಷಣೆ ಕೂಗಲಾಗಿದೆ. ಕೇಜ್ರಿವಾಲ್ ಮೇಲಿನ ಅನುಕಂಪ ಹಾಗೂ ಉಚಿತ ನೀರು, ವಿದ್ಯುತ್, ಚಿಕಿತ್ಸೆಗಳ ಲಾಭ ಸಿಗುತ್ತಿರುವುದು ತಮಗೆ ಲಾಭವಾಗಿ ಪರಿಣಮಿಸಲಿದೆ ಎಂದು ಇಂಡಿ ಮೈತ್ರಿಕೂಟದ ನಾಯಕರು ನಂಬಿದ್ದಾರೆ.
‘ಸ್ವಾತಿ ಎಬ್ಬಿಸಿದ ಬಿರುಗಾಳಿ: ಆಪ್ ಪಕ್ಷದ ರಾಜ್ಯಸಭೆ ಸದಸ್ಯೆ, ದಿಲ್ಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ ರಾಜಧಾನಿಯಲ್ಲಿ ಲೋಕಸಭೆ ಚುನಾವಣೆ ವಿಷಯವಾಗಿ ಮಾರ್ಪಟ್ಟಿದೆ. ಬಿಜೆಪಿ ಈ ವಿಷಯ ಮುಂದಿಟ್ಟುಕೊಂಡು ಸಿಎಂ ಕೇಜ್ರಿವಾಲ್ರನ್ನು ಗುರಿ ಮಾಡಿದ್ದರೆ, ಸರ್ಕಾರದ ಸಚಿವರು, ಮುಖಂಡರು ಸ್ವಾತಿ ಮಲಿವಾಲ್ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಕೇಜ್ರಿವಾಲ್ ಅಧಿಕೃತ ಬಂಗಲೆಯಲ್ಲೇ ಸ್ವಾತಿ ಮೇಲೆ ಹಲ್ಲೆಯಾಗಿದ್ದರೂ, ಕೇಜ್ರಿವಾಲ್ ಮೌನವಾಗಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ. ಸ್ವಾತಿ ಕೂಡ ಕೇಜ್ರಿವಾಲ್ ಮತ್ತು ಸಂಗಡಿಗರ ವಿರುದ್ಧ ದೂರು ಸಲ್ಲಿಸಿ, ‘ಎಲ್ಲ ರೀತಿಯ ಪರೀಕ್ಷೆಗಳಿಗೆ ನಾನು ಸಿದ್ಧಳಿದ್ದೇನೆ’ ಎಂದು ಘೊಷಿಸಿರುವುದು ಅನುಮಾನಗಳಿಗೆ ಪುಷ್ಟಿ ನೀಡಿದೆ.
ಕೇಜ್ರಿವಾಲ್ ಮತ್ತು ಆಪ್ ಸರ್ಕಾರದ ಪರ ಹಲವು ಕೇಸ್ಗಳಲ್ಲಿ ವಾದಿಸಿರುವ ಸುಪ್ರೀಂಕೋರ್ಟ್ನ ಪ್ರಮುಖ ವಕೀಲರೊಬ್ಬರಿಗೆ ರಾಜ್ಯಸಭೆ ಸೀಟು ನೀಡಬೇಕು ಎಂಬ ಉದ್ದೇಶದಿಂದ ಸ್ವಾತಿ ಮಲಿವಾಲ್ ಬಳಿ ರಾಜೀನಾಮೆ ಸಲ್ಲಿಸಲು ತಿಳಿಸಲಾಗಿತ್ತು. ಆದರೆ, ಸ್ವಾತಿ ಇದಕ್ಕೆ ಒಪ್ಪದ್ದರಿಂದ ಹಲ್ಲೆ ನಡೆಸಲಾಗಿದೆ ಎಂಬ ಚರ್ಚೆಗಳು ಪಕ್ಷದ ಅಂಗಳದಲ್ಲಿ ಕೇಳುತ್ತಿದೆ. ‘ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲಾರೆ ಮತ್ತು ರಾಜ್ಯಸಭೆ ಸದಸ್ಯಳಾಗಿ ನನ್ನ ಸಾಮರ್ಥ್ಯ ಸಾಬೀತುಪಡಿಸುತ್ತೇನೆ’ ಎಂದು ಸ್ವಾತಿ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಕೇಜ್ರಿವಾಲ್ರನ್ನು ಟಾರ್ಗೆಟ್ ಮಾಡಲು ಬಿಜೆಪಿಗೆ ಸ್ವಾತಿ ಮೇಲಿನ ಹಲ್ಲೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ.
ದಿಲ್ಲಿ ವಿಶ್ವದರ್ಜೆಯ ನಗರವಾಗಬೇಕು. ಇದಕ್ಕಾಗಿ, ಸ್ವಚ್ಛತೆ ಮತ್ತು ಹಸಿರು ಪರಿಸರ ಹೆಚ್ಚಿಸಬೇಕು. ಮಾಲಿನ್ಯವೇ ದಿಲ್ಲಿಯ ದೊಡ್ಡ ಸಮಸ್ಯೆ. ಉಚಿತ ಕೊಡುಗೆಗಳು ಮಧ್ಯಮ ಮತ್ತು ಬಡವರ್ಗವನ್ನು ಆಕರ್ಷಿಸಿದರೂ, ದಿಲ್ಲಿಯ ಅಭಿವೃದ್ಧಿಗೆ ಅದರಿಂದ ಯಾವುದೇ ಲಾಭವಿಲ್ಲ. ಕೇಜ್ರಿವಾಲ್ ಮತ್ತವರ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಪಕ್ಷದ ಮೇಲಿನ ವಿಶ್ವಾಸ ತಗ್ಗಿಸಿದೆ. ದಿಲ್ಲಿ ಚುನಾವಣಾ ಅಖಾಡದಲ್ಲಿ ಸಮರ್ಥ, ದೊಡ್ಡ ನಾಯಕರು ಕಾಣುತ್ತಿಲ್ಲ. ನನ್ನಂತೆ ಹಲವರು ವ್ಯಕ್ತಿಗಿಂತ ಪಕ್ಷವನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೆ ಅನಿಸುತ್ತಿದೆ.
| ಪ್ರಕಾಶ್ ಶೆಟ್ಟಿ ಉಳೆಪಾಡಿ, ದಿಲ್ಲಿ ನಿವಾಸಿ, ಮತದಾರ