Golden Temple : ಅಮೃತಸರದ ಗೋಲ್ಡನ್ ಟೆಂಪಲ್‌ನ ಪ್ರವೇಶದ್ವಾರದಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಹಾಗೂ ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ಇಂದು ಬೆಳಗ್ಗೆ (ಡಿ.04) ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್ ಸುಖಬೀರ್ ಸಿಂಗ್ ಅವರಿಗೆ ಯಾವುದೇ ಹಾನಿಯಾಗಿಲ್ಲ.
ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಸಂಘಟನೆಯ ಮಾಜಿ ಭಯೋತ್ಪಾದಕ ನಾರಾಯಣ್ ಸಿಂಗ್ ಚೌರಾ ಎಂಬಾತ ಸುಖಬೀರ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ಮತ್ತು ಅಧಿಕಾರಿಗಳು ಚೌರಾನನ್ನು ಹಿಮ್ಮೆಟ್ಟಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ದೇವಾಲಯದ ಪ್ರವೇಶದ್ವಾರದ ಹೊರಗೆ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಸುಖಬೀರ್ ಬಾದಲ್ ಸದ್ಯ ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ ನಡೆದಾಗ ಸುಖಬೀರ್ ಅವರು ವೀಲ್‌ಚೇರ್ ಮೇಲೆ ಕುಳಿತಿದ್ದರು. ಈ ವೇಳೆ ಅವರು ನೀಲಿ ಬಣ್ಣದ 'ಸೇವಾದರ್' ಸಮವಸ್ತ್ರದಲ್ಲಿ ಈಟಿಯನ್ನು ಹಿಡಿದುಕೊಂಡು ಕುಳಿತಿದ್ದರು. ಈ ಸಂದರ್ಭದಲ್ಲಿ ಚೌರ್, ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿ ಹತ್ನೆಗೆ ಯತ್ನಿಸಿದ್ದಾನೆ. ದೇವಾಲಯದಲ್ಲಿದ್ದ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತು ಭಯೋತ್ಪಾದಕನನ್ನು ತಡೆಯುವ ಮೂಲಕ ಅಕಾಲಿದಳದ ನಾಯಕನನ್ನು ರಕ್ಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರೋಪಿ ಚೌರಾ, 1984 ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ. ಪಾಕಿಸ್ತಾನದಿಂದ ಪಂಜಾಬ್‌ಗೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವಲ್ಲಿ ಚೌರಾ ಪ್ರಮುಖ ಪಾತ್ರ ವಹಿಸಿದ್ದನು ಎಂದು ಸೇನಾ ಮೂಲಗಳು ತಿಳಿಸಿವೆ.
ಪಾಕಿಸ್ತಾನದಲ್ಲಿ ಇದೇ ಚೌರಾ, ಗೆರಿಲ್ಲಾ ಯುದ್ಧ ಮತ್ತು ದೇಶದ್ರೋಹದ ಕುರಿತು ಪುಸ್ತಕವನ್ನು ಬರೆದಿದ್ದಾನೆ ಎಂದು ವರದಿಯಾಗಿದೆ. ಬುರೈಲ್ ಜೈಲ್ ಬ್ರೇಕ್ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದ. ಈಗಾಗಲೇ ಚೌರಾ ಪಂಜಾಬ್‌ನಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ. (ಏಜೆನ್ಸೀಸ್)