ನ್ಯೂಸ್

ಕರ್ಕಶ ಮ್ಯೂಸಿಕ್​ ಗದ್ದಲದಿಂದ ಕೆರಳಿ, ಗಾಳಿಯಲ್ಲಿ ಗುಂಡು ಹಾರಿಸಿದ್ರು ಮಾಜಿ ಯೋಧ

ಹೈದರಾಬಾದ್​: ಗಣೇಶೋತ್ಸವವನ್ನು ಸಂಭ್ರಮಾಚರಣೆಯೊಂದಿಗೆ ಆಚರಿಸೋದು ಬೇರೆ, ಸದ್ದುಗದ್ದಲವೆಬ್ಬಿಸಿ ಸುತ್ತಮುತ್ತಲಿನವರಿಗೆ ಕಿರಿಕಿರಿ ಉಂಟುಮಾಡೋದು ಬೇರೆ. ನರ್ಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯೋಧರೊಬ್ಬರು ಇಂತಹ ಕಿರಿಕಿರಿಯ ಕಾರಣಕ್ಕೆ ರೊಚ್ಚಿಗೆದ್ದು ತಮ್ಮ ಅಧಿಕೃತ ರಿವಾಲ್ವರ್ ತೆಗೆದುಕೊಂಡು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ಘಟನೆ ನಡೆದಿದೆ.

ಈ ಬಗ್ಗೆ ದೂರು ದಾಖಲಾಗಿದ್ದು, ಮಾಜಿ ಯೋಧನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಗುರುವಾರ ತಡರಾತ್ರಿ ಅವರಿದ್ದ ಅಪಾರ್ಟ್​ಮೆಂಟ್​ ನ ಆವರಣದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿದ್ದ ಯುವಕರ ಗುಂಪು ಕರ್ಕಶ ಹಾಡುಗಳನ್ನು ಲೌಡ್​ ಸ್ಪೀಕರ್​ ಮೂಲಕ ಹಾಕಿದ್ದರಿಂದ ಯೋಧ ಮನಸ್ಸಿನ ಸಮಾಧಾನ ಕಳೆದುಕೊಂಡಿದ್ದರು. ಯುವಕರ ಬಳಿ ಹೋಗಿ ಹಾಡಿನ ವ್ಯಾಲ್ಯೂಮ್ ಕಡಿಮೆ ಮಾಡುವಂತೆ ಮನವಿ ಮಾಡಿದಾಗ ಅವರು ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾರೆ.

ಯುವಕರ ನಡವಳಿಕೆಯಿಂದ ರೊಚ್ಚಿಗೆದ್ದ ಯೋಧ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಯಾವುದಕ್ಕೂ ಅವರು ಮಣಿಯದಿದ್ದಾಗ ತಮ್ಮ ಅಧಿಕೃತ ರಿವಾಲ್ವರ್ ತೆಗೆದು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಫೂಟೇಜನ್ನು ಸ್ಥಳೀಯ ಟಿವಿ ಚಾನೆಲ್ ಪ್ರಸಾರ ಮಾಡಿತ್ತು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. (ಏಜೆನ್ಸೀಸ್)