Sushila Karki: ನೇಪಾಳದಲ್ಲಿ ನಡೆ ಪ್ರತಿಭಟನೆ ಹಿನ್ನಲೆಯಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ ನಂತರ, ಮಧ್ಯಂತರ ಸರ್ಕಾರದ ಮುಖ್ಯಸ್ಥೆಯಾಗಿ ನೇಮಕಗೊಂಡಿರುವ ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಷ್ಟ್ರಪತಿಗಳ ನಿವಾಸ ಶೀತಲ್ ನಿವಾಸ್‌ನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಸುಶೀಲಾ ಕರ್ಕಿ ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲಿ ತುರ್ತು ಪರಿಸ್ಥಿತಿ ಹೇರಲು ಶಿಫಾರಸು ಮಾಡುವ ನಿರೀಕ್ಷೆಯಿದ್ದು, ಶಿಫಾರಸಿನ ನಂತರ, ರಾಷ್ಟ್ರಪತಿಗಳು ಅನುಮೋದನೆ ಪಡೆದು ಇಂದು ಮಧ್ಯರಾತ್ರಿಯಿಂದ ನೇಪಾಳದಾದ್ಯಂತ ತುರ್ತು ಪರಿಸ್ಥಿತಿ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಸೆ.೨೨ ರಂದು ವಿದ್ಯಾರ್ಥಿಗಳಿಗೆ ಛಾಯಾಚಿತ್ರ ಸ್ಪರ್ಧೆ
ನೇಪಾಳದ ಸಂವಿಧಾನದ 273 ನೇ ವಿಧಿಯ ಪ್ರಕಾರ, ಯುದ್ಧ, ನೈಸರ್ಗಿಕ ವಿಕೋಪ, ಸಶಸ್ತ್ರ ದಂಗೆ ಅಥವಾ ಇತರ ಗಂಭೀರ ತುರ್ತು ಪರಿಸ್ಥಿತಿಗಳಂತಹ ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭಗಳಲ್ಲಿ ದೇಶವು ಗರಿಷ್ಠ ಆರು ತಿಂಗಳವರೆಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ನೇಪಾಳದ ಜನರಲ್ ಝಡ್ ಗುಂಪು ಸುಶೀಲಾ ಕರ್ಕಿ ಅವರ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಾಗಿ ಘೋಷಿಸಿತು, ಸಂಸತ್ತನ್ನು ವಿಸರ್ಜಿಸುವುದು ಸೇರಿದಂತೆ ಪ್ರಮುಖ ಬೇಡಿಕೆ ಮತ್ತು ಷರತ್ತುಗಳನ್ನು ಮುಂದಿಟ್ಟಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರತಿಭಟನಾ ನಿರತ ಜನರಲ್ ಝಡ್ ಗುಂಪಿನ ಅಧ್ಯಕ್ಷ ಸುಡಾನ್ ಗುರುಂಗ್, ಸಂಸತ್ತನ್ನು ವಿಸರ್ಜಿಸುವುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಅದರ ನಂತರವೇ ಇತರ ಪ್ರಕ್ರಿಯೆಗಳೊಂದಿಗೆ ಮುಂದುವರಿಯಬಹುದು ಎಂದು ತಿಳಿಸಿದ್ದಾರೆ. ಜನರೇಷನ್-ಝಡ್ ಪೀಳಿಗೆಯ ನಿರೀಕ್ಷೆಗಳಿಗೆ ಅನುಗುಣವಾಗಿ ಕ್ಯಾಬಿನೆಟ್ ರಚನೆಯಾಗಬೇಕು ಎಂದು ಗುರುಂಗ್ ಹೇಳಿದ್ದು, ತಮ್ಮ ಗುಂಪು ಅದರ ಕಾರ್ಯನಿರ್ವಹಣೆಯನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ ಎಂದಿದ್ದಾರೆ. ಒಬ್ಬ ಅನುಭವಿ ನ್ಯಾಯಶಾಸ್ತ್ರಜ್ಞೆ ಮತ್ತು ಭ್ರಷ್ಟಾಚಾರದ ವಿರುದ್ಧದ ಕಠಿಣ ನಿಲುವಿಗೆ ಹೆಸರುವಾಸಿಯಾದ ಕರ್ಕಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಕರ್ಕಿ ಅವರು ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಉದ್ಯೋಗದ ಆಫರ್ ಪಡೆದಿದ್ದರು ಆದರೆ ಅವರ ಆಯ್ಕೆ ಬೇರೆಯಾಗಿದ್ದರಿಂದ ಆ ಆಫರ್ ಅನ್ನು ತಿರಸ್ಕರಿಸಿದರು ಎನ್ನಲಾಗಿದೆ.(ಏಜೆನ್ಸೀಸ್)