ನ್ಯೂಸ್

'ಭಾರತದ ಸತ್ತ ಆರ್ಥಿಕತೆ' ಎಂಬ ಟ್ರಂಪ್ ಹೇಳಿಕೆಗೆ ರಾಹುಲ್ ಗಾಂಧಿ ಬೆಂಬಲ! | Rahul Gandhi

Rahul Gandhi: ಭಾರತದ ಸತ್ತ ಆರ್ಥಿಕತೆ(Dead Economy) ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ, ಇಡೀ ಜಗತ್ತಿಗೆ ಈ ವಿಷಯ ತಿಳಿದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ (ಜುಲೈ31) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಂಸತ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ ಸತ್ತ ಆರ್ಥಿಕತೆ ಎಂಬ ಹೇಳಿಕೆಯನ್ನು ಬೆಂಬಲಿಸಿ ಮಾತನಾಡುತ್ತಾ, ಭಾರತದ ಸತ್ತ ಆರ್ಥಿಕತೆ ಬಗ್ಗೆ ಒಂದು ಸತ್ಯವನ್ನು ಹೇಳಿದ್ದಕ್ಕೆ ನನಗೆ ಸಂತೋಷವಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗೌತಮ್ ಅದಾನಿಗೆ ಸಹಾಯ ಮಾಡಲು ಭಾರತದ ಆರ್ಥಿಕತೆ, ರಕ್ಷಣಾ ವ್ಯವಸ್ಥೆ ಮತ್ತು ವಿದೇಶಾಂಗ ನೀತಿಗಳನ್ನು ನಾಶಪಡಿಸಿದೆ, ಪ್ರಧಾನಿ ಮೋದಿ ಕೇವಲ ಒಬ್ಬ ವ್ಯಕ್ತಿಗಾಗಿ ಮಾತ್ರ ಕೆಲಸ ಮಾಡುತ್ತಾರೆ ಎಂದರು

ನಮ್ಮದು ಅದ್ಭುತ ವಿದೇಶಾಂಗ ನೀತಿ ಎಂದು ವಿದೇಶಾಂಗ ಸಚಿವರು ಭಾಷಣ ಮಾಡುತ್ತಾರೆ. ಇತ್ತ ಅಮೆರಿಕ ನಿಮ್ಮನ್ನು ನಿಂದಿಸುತ್ತಿದ್ದರೆ, ಮತ್ತೊಂದೆಡೆ ಚೀನಾ ಬೆನ್ನಟ್ಟುತ್ತಿದೆ ಮತ್ತು ಮೂರನೆಯದಾಗಿ ನೀವು ಜಗತ್ತಿನಾದ್ಯಂತ ನಿಯೋಗಗಳನ್ನು ಕಳುಹಿಸಿದಾಗ ಯಾವುದೇ ದೇಶ ಪಾಕಿಸ್ತಾನವನ್ನು ಖಂಡಿಸಲಿಲ್ಲ. ಬಿಜೆಪಿಗರಿಗೆ ದೇಶ ನಡೆಸುವುದೇ ಗೊತ್ತಿಲ್ಲ ಎಂದು ಹರಿಹಾಯ್ದರು.

ಟ್ರಂಪ್ ಹೇಳಿಕೆಗಳಿಗೆ ಸರ್ಕಾರದ ಮೌನವನ್ನು ಪ್ರಶ್ನಿಸಿದ ರಾಹುಲ್​, ಟ್ರಂಪ್ 30–32 ಬಾರಿ ಕದನ ವಿರಾಮದ ಮದ್ಯಸ್ಥಿಕೆ ವಹಿಸಿರುವುದಾಗಿ ಹೇಳಿಕೊಂಡಿದ್ದಾರೆ. 5 ಭಾರತೀಯ ಜೆಟ್‌ಗಳು ಬಿದ್ದಿವೆ ಎಂದಿದ್ದಾರೆ. ಈಗ ಶೇಕಡಾ 25 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಈ ಎಲ್ಲ ಗೊಂದಲದ ಹೇಳಿಕೆಗಳಿಗೆ ಪ್ರಧಾನಿ ಮೋದಿ ಏಕೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.(ಏಜೆನ್ಸೀಸ್)