ಬೆಂಗಳೂರು: ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆಳಗಾವಿ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಡೆಸುತ್ತಿರುವ ಐತಿಹಾಸಿಕ ಶತಮಾನೋತ್ಸವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಕಾಂಗ್ರೆಸಿಗನೂ ಸಾಕ್ಷಿಯಾಗಬೇಕು” ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar )ಕರೆ ನೀಡಿದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸ ಆಚರಣೆ ಕುರಿತು ಕೆಪಿಸಿಸಿಯ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
“1924ರಲ್ಲಿ ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವಹಿಸಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ವಹಿಸಿದರು. ಈ ಹೆಮ್ಮೆಯ ಕ್ಷಣವನ್ನು ಆಚರಿಸುವ ಅವಕಾಶ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸಿಗರಿಗೆ ಮಾತ್ರ ಸಿಕ್ಕಿದೆ. ಹೀಗಾಗಿ ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು” ಎಂದು ತಿಳಿಸಿದರು.
“ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ಜಾಗದಿಂದಲೇ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಪ್ರಜಾಧ್ವನಿಯಾತ್ರೆ ಆರಂಭಿಸಿದೆ. ಗಾಂಧಿ ಬಾವಿಯಿಂದ ನೀರು ತೆಗೆದು ರಸ್ತೆ ತೊಳೆದು ಸ್ವಚ್ಛ ಮಾಡಿ ನಮ್ಮ ಗೃಹಜ್ಯೋತಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ನಮ್ಮ ಹೋರಾಟ ಆರಂಭಿಸಿ, ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ತರಲು ಯಶಸ್ವಿಗಿದ್ದೇವೆ. ಈ ಶತಮಾನೋತ್ಸವದ ಕ್ಷಣದಲ್ಲಿ ಇತಿಹಾಸವನ್ನು ಮೆಲುಕು ಹಾಕುವ ಅದೃಷ್ಟ ನಮ್ಮದಾಗಿದೆ, ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಈ ಸಂಭ್ರಮ ಆಚರಿಸುತ್ತಿದ್ದೇವೆ. ಗಾಂಧೀಜಿ ಅವರು ಅಂದು ಕುಳಿತ ಸ್ಥಾನದಲ್ಲಿ ಇಂದು ನಮ್ಮವರೇ ಆದ ಖರ್ಗೆ ಅವರು ಕೂತಿದ್ದಾರೆ. ನಾವು ಯಾವ ರೀತಿ ಪಕ್ಷ ಕಟ್ಟಬೇಕು ಎಂದು ಹೊಸ ಅಧ್ಯಾಯ ಆರಂಭಿಸಿ 2028ರ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಮುನ್ನುಡಿ ಬರೆಯಬೇಕಿದೆ” ಎಂದರು.