ನ್ಯೂಸ್

ಪರೀಕ್ಷೆಗೂ ಮೊದಲೇ ಮೌಲ್ಯಮಾಪನ

lakshmihegde

| ದೇವರಾಜ್ ಎಲ್. ಬೆಂಗಳೂರು

ಲಾಕ್​ಡೌನ್​ನಿಂದಾಗಿ ಆಂಗ್ಲ ಭಾಷಾ ಪತ್ರಿಕೆಯ ಪರೀಕ್ಷೆ ಬಾಕಿ ಉಳಿದಿದ್ದರೂ ನಿಗದಿತ ಅವಧಿಯಲ್ಲಿ ಫಲಿತಾಂಶ ನೀಡುವ ಉದ್ದೇಶದಿಂದ ಈಗಾಗಲೇ ಪರೀಕ್ಷೆ ಮುಗಿದಿರುವ ಪತ್ರಿಕೆಗಳ ಮೌಲ್ಯಮಾಪನ ನಡೆಸಲು ಪಿಯು ಇಲಾಖೆ ಸಿದ್ಧತೆ ಆರಂಭಿಸಿದೆ. ವೇಳಾಪಟ್ಟಿ ಪ್ರಕಾರ ಮಾ.23ರಂದು ಪರೀಕ್ಷೆ ಮುಕ್ತಾಯವಾಗಬೇಕಾಗಿತ್ತು. ಆದರೆ, ಲಾಕ್​ಡೌನ್ ವಿಸ್ತರಣೆಯಾಗುತ್ತಲೇ ಇರುವುದರಿಂದ ಪರೀಕ್ಷೆ, ಮೌಲ್ಯಮಾಪನ ಕಾರ್ಯಕ್ಕೆ ತೊಡಕುಂಟಾಗಿದೆ. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸಿಇಟಿ ಪರೀಕ್ಷೆ ದಿನಾಂಕವನ್ನು ಘೋಷಣೆ ಮಾಡಿದೆ. ಅಲ್ಲದೆ, ನೀಟ್, ಜೆಇಇ ಪರೀಕ್ಷೆಯ ದಿನಾಂಕಗಳು ನಿಗದಿಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯು ಅಂಕ ಹೆಚ್ಚಿನ ಮಹತ್ವವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಮೌಲ್ಯಮಾಪನ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಿದೆ.

ತರಬೇತಿ: ಈ ವರ್ಷದ ಮೌಲ್ಯಮಾಪನ ಕಳೆದ ವರ್ಷಕ್ಕಿಂತ ಭಿನ್ನವಾಗಿರುವುದರಿಂದ ಈ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ದೂರವಾಣಿ ಮೂಲಕ ಮೌಲ್ಯಮಾಪಕರಿಗೆ ತಿಳಿಸಲು ಇಲಾಖೆ ಮುಂದಾಗಿದೆ. ಶಿಬಿರಾಧಿಕಾರಿ ಮತ್ತು ಶಿಬಿರದ ಮೇಲ್ಚಿಚಾರಕರನ್ನು ಗುರುತಿಸಿ ಅವರ ದೂರವಾಣಿ ಸಂಖ್ಯೆ ಲಗತ್ತಿಸಿ ಮೌಲ್ಯಮಾಪಕರಿಗೆ ಕಳುಹಿಸಿಕೊಟ್ಟಿದೆ. ಮೌಲ್ಯಮಾಪಕರು ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಮುಗಿಯದ ಲೆಕ್ಕಾಚಾರ: ಪ್ರತಿ ಬಾರಿ ರಾಜ್ಯದಲ್ಲಿ 54 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿತ್ತು. ಈ ಬಾರಿ ಎಷ್ಟು ಕೇಂದ್ರದಲ್ಲಿ ಆರಂಭಿಸಬೇಕೆಂಬ ಬಗ್ಗೆ ಇಲಾಖೆ ಲೆಕ್ಕಾಚಾರ ನಡೆಸುತ್ತಿದೆ. ಮೌಲ್ಯಮಾಪಕರು ಹೆಚ್ಚಾಗಿ ಎಲ್ಲಿದ್ದಾರೆ ಎಂಬ ಮಾಹಿತಿ ಪಡೆದು, ಆ ವ್ಯಾಪ್ತಿಯಲ್ಲಿರುವ ಕಾಲೇಜನ್ನು ಮೌಲ್ಯಮಾಪನ ಕೇಂದ್ರವಾಗಿ ಮಾರ್ಪಾಡು ಮಾಡುತ್ತದೆ. ಪ್ರತಿ ವರ್ಷ ಒಂದು ಕೊಠಡಿಯಲ್ಲಿ 30ರಿಂದ 45 ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಈ ವರ್ಷ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಒಂದು ಕೊಠಡಿಯಲ್ಲಿ 12-15 ಮೌಲ್ಯಮಾಪಕರಿಗೆ ಮಾತ್ರ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಎಲ್ಲ ಮೌಲ್ಯಮಾಪಕರು ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಬಳಕೆ ಮಾಡಿಕೊಂಡು ಮೌಲ್ಯಮಾಪನ ಮಾಡಬೇಕಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳಲ್ಲಿ ಅಡ್ಮಿಷನ್​ಗೆ ಗ್ರೀನ್​ ಸಿಗ್ನಲ್​: ಶಿಫ್ಟ್​ ವ್ಯವಸ್ಥೆಗೆ ವಿರೋಧ ಹೆಚ್ಚಿನ ಉತ್ತರ ಪತ್ರಿಕೆ: 2020ನೇ ಸಾಲಿನ 6.80 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಕನ್ನಡ, ಅರ್ಥಶಾಸ್ತ್ರ, ಇತಿಹಾಸ, ವಾಣಿಜ್ಯ ಈ ವಿಷಯದ ಉತ್ತರ ಪತ್ರಿಕೆಗಳು ಸಂಖ್ಯೆ 4 ಲಕ್ಷಕ್ಕೂ ಹೆಚ್ಚಿದೆ. ಮೊದಲು ಹೆಚ್ಚಿನ ಸಂಖ್ಯೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ಮೌಲ್ಯಮಾಪಕರು ಹೆಚ್ಚಾಗಿರುವ ಕೇಂದ್ರಗಳಿಗೆ ಉತ್ತರ ಪತ್ರಿಕೆಗಳನ್ನು ಪಿಯು ಇಲಾಖೆ ತಲುಪಿಸಲಿದೆ. ಮೌಲ್ಯಮಾಪನ ಕಾರ್ಯಕ್ಕೆ ಸುಮಾರು 21 ಸಾವಿರ ಮೌಲ್ಯಮಾಪಕರು ಭಾಗವಹಿಸಲಿದ್ದು, ಮೌಲ್ಯಮಾಪನ ಆರಂಭವಾದ ಮೇಲೆ 20 ದಿನಗಳ ಕಾಲ ಮೌಲ್ಯಮಾಪನ ನಡೆಯಲಿದೆ.

ಸಮಯದ ಅಭಾವ ಇರುವುದರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸುವುದು ಅನಿವಾರ್ಯವಾಗಿದೆ. ಸುರಕ್ಷತಾ ಕ್ರಮ ಅನುಸರಿಸಿ ಮೌಲ್ಯಮಾಪನ ನಡೆಸುತ್ತೇವೆ. | ಎಂ.ಕನಗವಲ್ಲಿ ನಿರ್ದೇಶಕಿ, ಪಿಯು ಶಿಕ್ಷಣ ಇಲಾಖೆ ನಾವು ಸದ್ಯದ ಪರಿಸ್ಥಿತಿ ನೋಡಿ ಮೌಲ್ಯಮಾಪನ ಮಾಡಲು ಒಪ್ಪಿಕೊಂಡಿದ್ದೇವೆ. ಆದರೆ, ನಮಗೆ ಜಿಲ್ಲಾ ಕೇಂದ್ರಗಳಲ್ಲೇ ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಬೇಕು. | ಎ.ಎಚ್.ನಿಂಗೇಗೌಡ ಅಧ್ಯಕ್ಷ, ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘ
ಪಿಯು ವರ್ಗಾವಣೆ ಆರಂಭಿಸಿ

ಬೆಂಗಳೂರು: 2020-21ನೇ ಸಾಲಿನ ಸರ್ಕಾರಿ ಪದವಿ ಪೂರ್ವ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಯನ್ನು ಮೇ ತಿಂಗಳಿನಲ್ಲೇ ಆರಂಭಿಸುವಂತೆ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಪಿಯು ಇಲಾಖೆಯನ್ನು ಒತ್ತಾಯಿಸಿದೆ. ಆಗಸ್ಟ್-ಸೆಪ್ಟಂಬರ್​ನಲ್ಲಿ ಉಪನ್ಯಾಸಕರ ವರ್ಗಾವಣೆ ನಡೆಸಲಾಗುತ್ತಿದೆ. ಆದರೆ ಈ ವೇಳೆಗೆ ನಿರ್ಧಿಷ್ಟ ಶಾಲಾ- ಕಾಲೇಜುಗಳಿಗೆ ಮಕ್ಕಳನ್ನು ದಾಖಲು ಮಾಡಿ, ಅರ್ಧ ಶೈಕ್ಷಣಿಕ ವರ್ಷ ಮುಗಿದಿರುತ್ತದೆ. ಈ ಅವಧಿಯಲ್ಲಿ ವರ್ಗಾವಣೆ ನಡೆಸುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ಮೇನಲ್ಲೇ ಆರಂಭಿಸಬೇಕೆಂದು ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಪಿಯು ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಇರುವ ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ

ಲಾಕ್​ಡೌನ್​ಗೂ ಮೊದಲೇ ಹಾಸ್ಟೆಲ್ ತೊರೆದು ಮನೆ ಸೇರಿರುವ ಪಿಯು ವಿದ್ಯಾರ್ಥಿಗಳಿಗೆ ಅವರು ಪ್ರಸ್ತುತ ಇರುವ ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ವಿದ್ಯಾರ್ಥಿಗಳು ಇರುವಲ್ಲೇ ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಕಾಲೇಜಿನ ಸಂಕೇತದ ಸಂಖ್ಯೆ, ವಿದ್ಯಾರ್ಥಿಯ ಹೆಸರು, ನೋಂದಣಿ ಸಂಖ್ಯೆ, ಮೊಬೈಲ್ ಸಂಖ್ಯೆ, ಪ್ರಸ್ತುತ ವಾಸವಾಗಿರುವ ಜಿಲ್ಲೆಯ ಹೆಸರು, ಪರೀಕ್ಷೆ ಬರೆದ ಪರೀಕ್ಷಾ ಕೇಂದ್ರದ ಸಂಕೇತ, ಯಾವ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಇಚ್ಚಿಸುತ್ತಾರೆ ಎಂಬ ವಿವರ ನೀಡಬೇಕು. ಎಲ್ಲ ವಿವರಗಳನ್ನು ವಿದ್ಯಾರ್ಥಿಗಳು ddtt.pue@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಮೊಬೈಲ್ ಸಂಖ್ಯೆ ಪಡೆದು ವಾಟ್ಸ್​ಆಪ್​ನಲ್ಲಿ ಕಳುಹಿಸಬಾರದು ಎಂದು ಪಿಯು ಇಲಾಖೆ ತಿಳಿಸಿದೆ.