ನ್ಯೂಸ್

ಎಸ್ಸೆಸ್ಸೆಲ್ಸಿ ಫೇಲಾದವ್ರೇ ಬಾಸ್! ಕೆಪಿಎಸ್ಸಿ ಪರೀಕ್ಷೆ ಬರೆವ ಗ್ರಾಜುಯೇಟ್​ಗಳಿಗೆ ಇವರದ್ದೇ ಉಸ್ತುವಾರಿ

ಎನ್.ಎಲ್. ಶಿವಮಾದು ಬೆಂಗಳೂರು

ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ 7ನೇ ತರಗತಿ, ಎಸ್​ಎಸ್​ಎಲ್​ಸಿ ಓದಿದವರು ಪರೀಕ್ಷೆ ನಡೆಸುವಂತಾದರೆ?! ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್​ಸಿ) ಇದೇ ನಡೆಯುತ್ತಿದೆ! ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದವರಿಗೆ ಕಾರ್ಯದರ್ಶಿ, ವಿಶೇಷಾಧಿಕಾರಿ ಹುದ್ದೆ ಭಾಗ್ಯ ಕರುಣಿಸಿರುವುದೇ ಈ ಪ್ರಮಾದದ ಕೇಂದ್ರಬಿಂದು.

7ನೇ ತರಗತಿ, ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದವರೂ ಕೆಪಿಎಸ್ಸಿಯಲ್ಲಿ ಅನುಕಂಪದ ಆಧಾರದಲ್ಲಿ ಹುದ್ದೆ ಪಡೆದು ವಿಶೇಷಾಧಿಕಾರಿ, ಕಾರ್ಯದರ್ಶಿಯಂತಹ ಹುದ್ದೆಗಳಿಗೆ ಬಡ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಹುದ್ದೆಯಲ್ಲಿರುವವರು ಸಹಜವಾಗಿಯೇ ಪರೀಕ್ಷಾ ಕಾರ್ಯ ಸೇರಿ ಆಯೋಗದ ಎಲ್ಲ ವಿಭಾಗಗಳಲ್ಲೂ ಕಾರ್ಯನಿರ್ವಹಿಸುತ್ತಿರುವುದು ಅಧಿಕಾರಿ ವರ್ಗದಲ್ಲಿ ಅಸಮಾಧಾನ ಮೂಡಿಸಿದೆ.

ಶೇ.50 ಅನುಕಂಪ ಸಿಬ್ಬಂದಿ: ಕೆಪಿಎಸ್​ಸಿಯಲ್ಲಿ 288 ಹುದ್ದೆಗಳಿದ್ದು, ಪ್ರಸ್ತುತ 180 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇ.50 ಸಿಬ್ಬಂದಿ ಅನುಕಂಪದ ಆಧಾರದಲ್ಲೇ ನೇಮಕವಾಗಿದ್ದಾರೆ.

ಉನ್ನತ ಹುದ್ದೆ ಸಿಕ್ಕಿದ್ದೇಗೆ?: ಆಯೋಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅಕಾಲಿಕ ಮರಣಕ್ಕೀಡಾದರೆ ಪರಿಹಾರವಾಗಿ ಕುಟುಂಬ ಸದಸ್ಯರಿಗೆ ಸರ್ಕಾರಿ ಹುದ್ದೆ ನೀಡುತ್ತಾರೆ. ಹೀಗೆ ಹುದ್ದೆ ಪಡೆದು ಬಂದಿರುವವರಲ್ಲಿ 7ನೇ ತರಗತಿ, ಎಸ್ಸೆಸ್ಸೆಲ್ಸಿ ಶಿಕ್ಷಣ ಪಡೆದಿರುವವರೂ ಇದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅನುಕಂಪದ ಹುದ್ದೆ ಪಡೆದವರು ಆರಂಭದಲ್ಲಿ ‘ಡಿ’ ಗ್ರೂಪ್​ಗೆ ಸೇರುತ್ತಾರೆ. ಕಾಲಾನುಕ್ರಮ ಬಡ್ತಿ ಪಡೆದು ಉನ್ನತ ಹುದ್ದೆಗೇರಿದ್ದಾರೆ. ಆಯೋಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸರ್ಕಾರದ ಅನ್ಯ ಇಲಾಖೆಗೆ ವರ್ಗಾವಣೆಯಾಗುವುದಿಲ್ಲ. ಬೇರೆ ಇಲಾಖೆಯಿಂದಲೂ ಆಯೋಗಕ್ಕೆ ಬರುವುದಿಲ್ಲ. ಹೀಗಾಗಿ ಇರುವ ಸಿಬ್ಬಂದಿಗೇ ಬಡ್ತಿ ನೀಡಲಾಗುತ್ತದೆ. ಹೀಗೆ ಮುಂದುವರಿದಿರುವುದರಿಂದ ಶೈಕ್ಷಣಿಕವಾಗಿ ಕನಿಷ್ಠ ಅರ್ಹತೆ ಪಡೆಯದವರು ಕೂಡ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಇದರಿಂದ ಆಡಳಿತವು ದುರ್ಬಲವಾಗುತ್ತಿದೆ. ಸರ್ಕಾರ ಕೂಡ ಇದರ ಬಗ್ಗೆ ಗಂಭೀರವಾಗಿ ಯೋಚಿಸದ ಕಾರಣ ಹಾಗೆಯೇ ಮುಂದುವರಿದುಕೊಂಡು ಹೋಗುತ್ತಿದೆ.

ಕ್ಯಾಂಟೀನ್​ನಲ್ಲೇ ಟೈಮ್​ಪಾಸ್​: ಸಾಮಾನ್ಯವಾಗಿ ಹೆಚ್ಚಿನ ಸಿಬ್ಬಂದಿ ಕ್ಯಾಂಟೀನ್​ನಲ್ಲೇ ಕಾಲ ಕಳೆಯುತ್ತಾರೆ. ಭಾಗಶಃ ಸಿಬ್ಬಂದಿ ಬೆಳಗಿನ ಒಂದು ಗಂಟೆ ಅವಧಿ ಕೆಲಸ ಮಾಡುತ್ತಾರೆ. 11.30 ವೇಳೆಗೆ ಕಾಫಿಗೆ ಕ್ಯಾಂಟೀನ್​ಗೆ ಹೋಗುತ್ತಾರೆ. ಬಳಿಕ 12.45ರ ಸುಮಾರಿಗೆ ವಾಪಸ್ ಬರುತ್ತಾರೆ. ಮತ್ತೆ ಒಂದು ಗಂಟೆಗೆ ಊಟಕ್ಕೆ ಹೋಗುತ್ತಾರೆ. 2.30ರ ಸುಮಾರಿಗೆ ಕಚೇರಿಗೆ ಬರುತ್ತಾರೆ. 3.30ಕ್ಕೆ ಕಾಫಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಸಂಜೆಯಾಗಿರುತ್ತದೆ. ಮನೆಗೆ ಹೋಗಲು ಸಿದ್ಧತೆ ಮಾಡಿಕೊಂಡು ಕಚೇರಿ ಬಿಡುತ್ತಾರೆ. ಇತರೆ ಇಲಾಖೆಗಳಂತೆ ಸಾರ್ವಜನಿಕರು ಮುಕ್ತವಾಗಿ ಕಚೇರಿಯೊಳಗೆ ಬಾರದಿರುವುದರಿಂದ ಕಚೇರಿ ಕೆಲಸಗಳ ಹೊರತಾಗಿ ಸಾರ್ವಜನಿಕರೊಂದಿಗೆ ಸಂಪರ್ಕವಿರುವುದಿಲ್ಲ. ಹೀಗಾಗಿ, ಕಚೇರಿಯಲ್ಲಿ ಮಾತನಾಡುವ ಬದಲಾಗಿ ಕ್ಯಾಂಟೀನ್​ನಲ್ಲಿಯೇ ಮೊಬೈಲ್​ಗಳಲ್ಲಿ ಮಾತನಾಡುವ ಮೂಲಕ ಸಮಯ ಕಳೆಯುತ್ತಾರೆ ಎಂದು ಆಯೋಗದ ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೌಪ್ಯತೆ ಕೆಪಿಎಸ್ಸಿಗೇಕೆ?: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೂಡ ಕೆಪಿಎಸ್ಸಿಯಂತೆ ನೇಮಕಾತಿ ಪ್ರಕ್ರಿಯೆ, ವೃತ್ತಿಪರ ಸೀಟುಗಳ ಭರ್ತಿಗೆ ಸಿಇಟಿ ನಡೆಸುತ್ತದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೇರಿ ಇತರೆ ಹಲವು ಇಲಾಖೆಗಳಲ್ಲಿಯೂ ಗೌಪ್ಯತೆ ಕೆಲಸ ನಡೆಯುತ್ತವೆ. ಹಾಗೆಂದ ಮಾತ್ರಕ್ಕೆ, ಅಲ್ಲಿನ ಸಿಬ್ಬಂದಿಯನ್ನು ವರ್ಗಾವಣೆ ಮಾಡುವುದಿಲ್ಲವೇ? ಈ ನಿಯಮ ಕೆಪಿಎಸ್ಸಿಯಲ್ಲಿಯೂ ಬರಬೇಕು. ಇಲ್ಲವಾದಲ್ಲಿ ಕೆಪಿಎಸ್ಸಿಯಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇಂತಹ ದುಸ್ಥಿತಿ ಏಕೆ?: ಕೆಪಿಎಸ್ಸಿಯಲ್ಲಿ ಉನ್ನತ ಹುದ್ದೆಗಳಿಗೆ ಸಮಾನ ಶೈಕ್ಷಣಿಕ ಅರ್ಹತೆ ಇರುವ ವ್ಯಕ್ತಿಗಳನ್ನು ನೇಮಿಸಬೇಕು, ಇಲ್ಲವಾದಲ್ಲಿ ಬೇರೆ ಇಲಾಖೆಯಿಂದಲಾದರೂ ಎರವಲು ಪಡೆಯಬೇಕು. ಆದರೆ, ನೇಮಕಾತಿ ಪ್ರಕ್ರಿಯೆಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವ ಕಾರಣಕ್ಕೆ ಸಿಬ್ಬಂದಿ ವರ್ಗಾವಣೆ ಇಲ್ಲ. ಈ ಕಾರಣದಿಂದ ಇಲ್ಲಿಯೇ ತಳವೂರಿದ್ದಾರೆ. ಉನ್ನತ ಹುದ್ದೆಗಳಿಗೆ ಸರ್ಕಾರವು ನೇಮಕ ಮಾಡದಿರುವುದರಿಂದ ಕೆಳಹಂತದ ಸಿಬ್ಬಂದಿಯೇ ಉನ್ನತ ಹುದ್ದೆಗಳಿಗೆ ಏರಿದ್ದಾರೆ.

ಅನುಕಂಪದ ಹುದ್ದೆಯಲ್ಲಿರುವವರ ಶೈಕ್ಷಣಿಕ ದಾಖಲೆ ಪರಿಶೀಲಿಸಬೇಕಿದೆ. ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬುದನ್ನು ತಿಳಿದು ಕ್ರಮ ಕೈಗೊಳ್ಳುತ್ತೇವೆ.

| ಶಿವಶಂಕರಪ್ಪ ಸಾಹುಕಾರ್ ಕೆಪಿಎಸ್ಸಿ ಅಧ್ಯಕ್ಷ