ನ್ಯೂಸ್

ಬೇರೆ ಯುವತಿ ಜತೆ ಸ್ನೇಹಿತನಿಗೆ ಮದುವೆ ಫಿಕ್ಸ್ ಆದ​ ಬೆನ್ನಲ್ಲೇ ಮರೆಯದಂತ ಆಘಾತ ಕೊಟ್ಟ ಗೆಳತಿ!

ಎರ್ನಾಕುಲಂ: ಯುವತಿಯೊಬ್ಬಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಸ್ನೇಹಿತನ ಮನೆಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಅಂಬಲ್ಲೂರ್​ನಲ್ಲಿ ನಡೆದಿದೆ.

ಅಂಬಲ್ಲೂರ್​ ನಿವಾಸಿ ಸೂರ್ಯ (26) ಮೃತ ಯುವತಿ. ಸ್ನೇಹಿತ ಅಶೋಕ್​ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸೂರ್ಯ ಶನಿವಾರ ಬೆಳಗ್ಗೆ 10:30ರ ಸುಮಾರಿಗೆ ಅಶೋಕ್​ ಮನೆಗೆ ತೆರಳಿದ್ದಳು. ಮೊದಲನೇ ಮಹಡಿಯಲ್ಲಿದ್ದ ಅಶೋಕ್​ ಕೋಣೆಗೆ ನೇರವಾಗಿ ಹೋಗಿ ಕೆಲವೊತ್ತು ಕುಳಿತಿದ್ದಳು. ಅದೇ ಸಮಯದಲ್ಲಿ ಅಶೋಕ್​ ಪಾಲಕರು, ಮತ್ತೊಬ್ಬ ಮಹಿಳೆ ಮತ್ತು ಇಬ್ಬರು ಪೇಂಟಿಂಗ್​ ಕೆಲಸಗಾರರು ಮನೆಯಲ್ಲಿದ್ದರು. ಸೂರ್ಯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅಶೋಕ್​ ಪಾಲಕರು ಹೇಳಿದ್ದಾರೆ.

ಮಾಹಿತಿ ತಿಳಿದು ಸ್ಥಳೀಯರು ಸ್ಥಳಕ್ಕೆ ಆಗಮಿಸುವ ಮುನ್ನ ಸೂರ್ಯಳ ಮೃತದೇಹ ಬೆಡ್​ ಮೇಲಿತ್ತು. ತನ್ನದೇ ಶಾಲಿನಿಂದ ಕೊಠಡಿಯ ಸೀಲಿಂಗ್​ ಫ್ಯಾನ್ಸ್​ಗೆ ನೇಣು ಹಾಕಿಕೊಂಡಿದ್ದಾಳೆ. ಮೊದಲೇ ಮೃತಪಟ್ಟಿದ್ದರಿಂದ ಆಸ್ಪತ್ರೆಗೆ ಕೊಂಡೊಯ್ಯಲಿಲ್ಲ ಎಂದು ಅಶೋಕ್​ ಪಾಲಕರು ತಿಳಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಲಾಂತುರುತಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಶೋಕ್​ ಮತ್ತು ಸೂರ್ಯ ಪಿಎಸ್​ಸಿ ಕೇಂದ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಸುಮಾರು 4 ವರ್ಷಗಳಿಂದ ತುಂಬಾ ಆಪ್ತರಾಗಿದ್ದೆವು ಎಂದು ಅಶೋಕ್​ ಹೇಳಿದ್ದಾರೆ. ಅಲ್ಲದೆ, ಮತ್ತೊಬ್ಬ ಮಹಿಳೆಯೊಂದಿಗೆ ಅಶೋಕ್​ ಮದುವೆ ಡಿಸೆಂಬರ್​ 15ರಂದು ನಿಶ್ಚಯವಾಗಿದ್ದು, ಇದೇ ಹತಾಶೆಯಲ್ಲಿ ಯುವತಿ ನೇಣಿಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)