ನ್ಯೂಸ್

ಭಾರತಕ್ಕೆ ಬಾಂಗ್ಲಾ ಮಂದಿ ಹೇಗೆ ನುಸುಳುತ್ತಾರೆ ಗೊತ್ತಾ? ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಯೂಟ್ಯೂಬರ್, ನೆಟ್ಟಿಗರ ಕಿಡಿ

ನವದೆಹಲಿ: ನೆರೆಯ ಬಾಂಗ್ಲಾದೇಶದಿಂದ ಭಾರತಕ್ಕೆ ಸಾಕಷ್ಟು ಮಂದಿ ಅಕ್ರಮವಾಗಿ ನುಸುಳುತ್ತಿರುವುದು ಗೊತ್ತೇ ಇದೆ. ಅದು ಹೇಗೆ ಎಂಬುದನ್ನು "ಡಿಎಚ್​ ಟ್ರಾವೆಲಿಂಗ್ ಇನ್ಫೋ" ಹೆಸರಿನ ಬಾಂಗ್ಲಾದೇಶದ ಯೂಟ್ಯೂಬರ್‌ ವಿವರಿಸಿರುವ ಹಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗಿದೆ. ಈ ಸಂಗತಿ ಇದೀಗ ಭಾರತೀಯ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸಲು ಜನರಿಗೆ ಯಾವುದೇ ದಾಖಲೆ, ವೀಸಾ ಅಥವಾ ಪಾಸ್‌ಪೋರ್ಟ್ ಅಗತ್ಯವಿಲ್ಲ ಎಂದು​ ವೀಡಿಯೊದಲ್ಲಿ ಹೇಳಿರುವ ಯೂಟ್ಯೂಬರ್​, ಭಾರತದ ಗಡಿಯಲ್ಲಿರುವ ಬಾಂಗ್ಲಾದೇಶದ ಸಿಲ್ಹೆಟ್ ವಿಭಾಗದ ಸುನಮ್‌ಗಂಜ್ ಜಿಲ್ಲೆಯಲ್ಲಿ ವಿಡಿಯೋ ರೆಕಾರ್ಡ್ ಸಹ ಮಾಡಿದ್ದಾನೆ.

ವಿಡಿಯೋದಲ್ಲಿ ಭಾರತವನ್ನು ಪ್ರವೇಶಿಸುವ ಮಾರ್ಗವನ್ನು ತೋರಿಸಿದ್ದಾನೆ. ಅಲ್ಲದೆ, ಈ ಮಾರ್ಗವನ್ನು ತೆಗೆದುಕೊಳ್ಳುವವರು ಬಿಎಸ್ಎಫ್ ಅಧಿಕಾರಿಗಳೊಂದಿಗೆ ಕೆಲವೊಮ್ಮೆ ವ್ಯವಹರಿಸುವಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾನೆ.

ವಿಡಿಯೋ ಮುಂದುವರಿದಂತೆ, ಭಾರತದ ಗಡಿಯಲ್ಲಿರುವ ಬಿಎಸ್ಎಫ್ ಶಿಬಿರವನ್ನು ತೋರಿಸುತ್ತಾನೆ ಮತ್ತು ದೇಶವನ್ನು ಪ್ರವೇಶಿಸಲು ಬಳಸಿದ ಕೆಲವು ಸುರಂಗ ಮಾರ್ಗವನ್ನು ತೋರಿಸುತ್ತಾನೆ. ಅಂತಿಮವಾಗಿ ಯೂಟ್ಯೂಬರ್​, ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಾಂಗ್ಲಾದೇಶದ ಪ್ರತಿಷ್ಠೆಯನ್ನು ಹಾಳು ಮಾಡಬೇಡಿ ಸಂದೇಶ ನೀಡಿದ್ದಾರೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ನಂತರ 2,00,000 ವೀಕ್ಷಣೆಗಳು ಹಾಗೂ 7,000 ಲೈಕ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಸ್ವೀಕರಿಸಿದೆ.

ಅನೇಕರು ನೆಟ್ಟಿಗರು ಗಡಿಯ ಸಮಸ್ಯೆಯ ಕುರಿತು ತಮ್ಮ ಕಳವಳವನ್ನು ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ್ದಾರೆ. ಬಿಎಸ್‌ಎಫ್‌ಗೆ ಇದು ತಿಳಿದಿಲ್ಲವೇ? ಯೂಟ್ಯೂಬರ್‌ಗೆ ದಾರಿ ತಿಳಿದಿದ್ದರೆ, ಪ್ರತಿಯೊಬ್ಬರೂ ಅದನ್ನು ಮಾಡುತ್ತಾರೆ. ಗಡಿಯಲ್ಲಿ ಬಿಎಸ್‌ಎಫ್ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)