ನ್ಯೂಸ್

ತಡರಾತ್ರಿ ಪಾರ್ಟಿಗಾಗಿ ಕ್ಲಬ್​ಗೆ ಪ್ರವೇಶ ನಿರಾಕರಣೆ; ಭದ್ರತಾ ಸಿಬ್ಬಂದಿ ಮತ್ತು ನಾಲ್ವರ ನಡುವೆ ಹೊಡೆದಾಟ, ಫೈರಿಂಗ್| Firing

Firing: ತಡರಾತ್ರಿ ಮೋಜಿನ ಪಾರ್ಟಿ ಬಳಿಕ ಮೂವರು ಪುರುಷರು, ಓರ್ವಮಹಿಳೆಯಿದ್ದ ಗುಂಪುಗೆ ಸ್ಥಳೀಯ ಕ್ಲಬ್​ವೊಂದರ ಪ್ರವೇಶಕ್ಕೆ ನಿರಾಕರಿಸಿದ ಹಿನ್ನೆಲೆ ಕ್ಲಬ್​ನ ಭದ್ರತಾ ಸಿಬ್ಬಂದಿ ಮತ್ತು ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಬಳಿಕ ಗುಂಡಿನ ಚಕಮಕಿ ನಡೆದಿದೆ. ಘಟನೆಯ ವಿಡಿಯೋ ಭಾನುವಾರ (ಸೆ. 21) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಲಖನೌದಲ್ಲಿ ಪಲಾಸಿಯೋ ಮಾಲ್​ ಹೊರಗೆ ತಡರಾತ್ರಿ ಮೋಜಿನ ಪಾರ್ಟಿ ನಡೆದಿದ್ದು, ಬಳಿಕ ಪಕ್ಕದಲ್ಲಿನ ಸ್ಥಳೀಯ ಟಾನಿಕ್ ಕ್ಲಬ್​ಗೆ ಮೂವರು ಪುರುಷರು, ಓರ್ವ ಮಹಿಳೆಗೆ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಈ ಹಿನ್ನೆಲೆ ಸಿಬ್ಬಂದಿ ಮತ್ತು ನಾಲ್ವರ ನಡುವೆ ಹೊಡೆದಾಟ ನಡೆದು ಗುಂಡಿನ ಚಕಮಕಿ ನಡೆದಿದೆ.

ಶನಿವಾರ (ಸೆ. 20) ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹರ್ಷ್ ಮಿಶ್ರಾ, ಪ್ರಿನ್ಸ್ ವರ್ಮಾ, ರೋಹಿತ್ ಪಟೇಲ್, ಮತ್ತು ಸ್ವಾತಿ ವರ್ಮಾ ಎಂದು ಗುರುತಿಸಲಾಗಿದೆ. ತಡರಾತ್ರಿ ಆಗಿದ್ದರಿಂದ ಕ್ಲಬ್ ಮುಚ್ಚಿದೆ, ಪ್ರವೇಶ ಇಲ್ಲ, ಸ್ಥಳದಿಂದ ಹೊರಹೋಗುವಂತೆ ಸಿಬ್ಬಂದಿ ಹೇಳಿದ್ದು ಗಲಾಟೆಗೆ ಕಾರಣವಾಗಿದೆ. ತಕ್ಷಣ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿದೆ. ಈ ವೇಳೆ ಹರ್ಷ್ ಮಿಶ್ರಾ, ರೋಹಿತ್ ಪಟೇಲ್ ತಮ್ಮ ಪರವಾನಗಿ ಪಡೆದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕ್ಲಬ್‌ನ ಬೌನ್ಸರ್‌ಗಳು ಮತ್ತು ಭದ್ರತಾ ಸಿಬ್ಬಂದಿ ನಾಲ್ವರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಘಟನೆ ಬಗ್ಗೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಾಲ್​ ಹೊರಗೆ ನಡೆದ ಘಟನೆ ಹಿನ್ನೆಲೆ ಬೌನ್ಸರ್​ಗಳ ವಿರುದ್ಧವೂ ಎಫ್​ಐಆರ್ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದು ಒಂದು ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು, ಐದು ಲೈವ್ ಕಾರ್ಟ್ರಿಡ್ಜ್‌ಗಳು, ಎರಡು ಖಾಲಿ ಜಾಗಗಳು ಮತ್ತು ಘಟನೆಯಲ್ಲಿ ಬಳಸಲಾದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್)