ನ್ಯೂಸ್

45 ಲಕ್ಷ ಖರ್ಚು, ಡಾಂಕಿ ಮಾರ್ಗದಲ್ಲಿ ಅಮೆರಿಕ ಎಂಟ್ರಿ: ಪಬ್ಲಿಕ್​ನಲ್ಲಿ ಮೂತ್ರ ವಿಸರ್ಜನೆ ತಡೆದ ಭಾರತೀಯ ಗುಂಡೇಟಿಗೆ ಬಲಿ! Haryana man

Haryana man : ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದನ್ನು ವಿರೋಧಿಸಿದ್ದಕ್ಕೆ ಹರಿಯಾಣ ಮೂಲದ ವ್ಯಕ್ತಿಯನ್ನು ಗುಂಡಿಟ್ಟು ಕೊಂದಿರುವ ಆಘಾತಕಾರಿ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕಪಿಲ್​ (26) ಎಂದು ಗುರುತಿಸಲಾಗಿದೆ. ಈತ ಹರಿಯಾಣದ ಜಿಂದ್​ ಜಿಲ್ಲೆಯ ನಿವಾಸಿ. ಈತ ಡಾಂಕಿ ಮಾರ್ಗವಾಗಿ ಅಮೆರಿಕಕ್ಕೆ ಹೋಗಿ ನೆಲೆಸಿದ್ದ. ಈ ಡಾಂಕಿ ಮಾರ್ಗ ಅಂದರೆ, ವಲಸಿಗರು, ವಿಶೇಷವಾಗಿ ಭಾರತದಿಂದ ಯುಕೆ, ಯುಎಸ್ ಅಥವಾ ಕೆನಡಾದಂತಹ ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ದೇಶಗಳಿಗೆ ತೆಗೆದುಕೊಳ್ಳುವ ಅಕ್ರಮ ಮತ್ತು ಅಪಾಯಕಾರಿ ಪ್ರಯಾಣವಾಗಿದೆ. ಇದರ ಕತೆಯನ್ನೇ ಆಧರಿಸಿದ ಡಂಕಿ ಸಿನಿಮಾದಲ್ಲಿ ನಟ ಶಾರುಖ್​ ಖಾನ್ ನಟಿಸಿದ್ದರು.

ಮೃತ ಕಪಿಲ್, ಅಮೆರಿಕದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಹರಿಯಾಣದ ಬರಾಹ್ ಕಲಾನ್ ಗ್ರಾಮದ ಈಶ್ವರ್ ಅವರ ಪುತ್ರ. ಕರ್ತವ್ಯದಲ್ಲಿರುವ ಸಂದರ್ಭದಲ್ಲಿ ಪಕ್ಕದ ಆವರಣದ ಹೊರಗೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಈ ವೇಳೆ ಆತನನ್ನು ವಿರೋಧಿಸಿದ್ದರು. ಇದರಿಂದ ಆಕ್ರೋಶಗೊಂಡ ಆ ವ್ಯಕ್ತಿ ಸ್ಥಳದಲ್ಲೇ ಗುಂಡು ಹಾರಿಸಿ, ಕೊಲೆ ಮಾಡಿದ್ದಾನೆ ಎಂದು ಬರಾಹ್​ ಕಲಾನ್​ ಗ್ರಾಮದ ಪಂಚಾಯತ್​ ಸದಸ್ಯ ಸುರೇಶ್ ಕುಮಾರ್ ಗೌತಮ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕಪಿಲ್​ ಅವರ ಕುಟುಂಬ ಕೃಷಿ ಕುಟುಂಬ. ಆತ ಕುಟುಂಬದ ಏಕೈಕ ಪುತ್ರ. ಎರಡೂವರೆ ವರ್ಷಗಳ ಹಿಂದೆ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು. 2022 ರಲ್ಲಿ "ಡಾಂಕಿ ಮಾರ್ಗ"ದ ಮೂಲಕ ಅಮೆರಿಕವನ್ನು ಪ್ರವೇಶಿಸಿದರು. ಪನಾಮದ ಕಾಡುಗಳನ್ನು ದಾಟಿ, ಮೆಕ್ಸಿಕೋ ಗಡಿ ಗೋಡೆಯನ್ನು ಹತ್ತಿದರು ಎಂದು ಹೇಳಲಾಗಿದೆ.

ಈ ಒಂದು ಪ್ರಯಾಣಕ್ಕಾಗಿ ಕಪಿಲ್ ಅವರ​ ಕುಟುಂಬ ಸುಮಾರು 45 ಲಕ್ಷ ರೂ. ಖರ್ಚು ಮಾಡಿದೆ ಎಂಬ ಮಾಹಿತಿ ಇದೆ. ಡೊನಾಲ್ಡ್​ ಟ್ರಂಪ್​ ಅವರು ಅಧಿಕಾರಕ್ಕೆ ಬಂದ ಬೆನ್ನಲ್ಲೇ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕುವ ಪ್ರಕ್ರಿಯೆ ವೇಳೆ ಕಪಿಲ್​ ಅವರನ್ನು ಬಂಧಿಸಲಾಗಿತ್ತು. ಆದರೆ, ಆನಂತರದಲ್ಲಿ ಕಾನೂನು ಕ್ರಮಗಳ ಮೂಲಕ ಬಿಡುಗಡೆ ಮಾಡಲಾಯಿತು ಮತ್ತು ಅಮೆರಿಕದಲ್ಲೇ ಕಪಿಲ್​ ನೆಲೆಸಿದ್ದ.

ಅಮೆರಿಕದಲ್ಲಿ ವಾಸವಿರುವ ಕಪಿಲ್​ ಸಂಬಂಧಿಕರೊಬ್ಬರು ಸಾವಿನ ಸುದ್ದಿಯನ್ನು ಕುಟುಂಬಕ್ಕೆ ತಿಳಿಸಿದ್ದಾರೆ. ಕಪಿಲ್‌ಗೆ ಇಬ್ಬರು ಸಹೋದರಿಯರಿದ್ದು, ಅವರಲ್ಲಿ ಒಬ್ಬಳು ವಿವಾಹಿತಳು. ಕಪಿಲ್​ ಸಾವಿನ ಸುದ್ದಿ ಕೇಳಿ ಇಡೀ ಗ್ರಾಮ ದುಃಖಿತರಾಗಿದೆ. ಕಪಿಲ್ ಅವರ ಮೃತದೇಹವನ್ನು ಭಾರತಕ್ಕೆ ತರುವಂತೆ ಒತ್ತಾಯಿಸಲು ಕುಟುಂಬವು ಉಪ ಆಯುಕ್ತರನ್ನು ಭೇಟಿ ಮಾಡಲು ಮುಂದಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲಕ್ಕಾಗಿ ನಾವು ಆಶಿಸುತ್ತೇವೆ ಎಂದು ಬರಾಹ್​ ಕಲಾನ್​ ಗ್ರಾಮದ ಪಂಚಾಯತ್​ ಸದಸ್ಯ ಸುರೇಶ್ ಕುಮಾರ್ ಗೌತಮ್ ಮಾಧ್ಯಮಕ್ಕೆ ತಿಳಿಸಿದ್ದಾರೆ. (ಏಜೆನ್ಸೀಸ್​)