ನ್ಯೂಸ್

ದುಬೈನಲ್ಲಿ ಲಕ್ಷ ಲಕ್ಷ ದುಡಿಯುತ್ತಿದ್ದ ವ್ಯಕ್ತಿ ಇಂದು ಚಿಂದಿ ಆಯುವವ! ಪತ್ನಿಯಿಂದಾಗಿ ಬೀದಿಗೆ ಬಿದ್ದ ಇಂಜಿನಿಯರ್ | Engineer

ನವದೆಹಲಿ: ಕೆಲವರು ತಮ್ಮ ಸುಖವನ್ನು ಮರೆತು ಕುಟುಂಬದ ನೆಮ್ಮದಿಗಾಗಿ ಪರದೇಶಕ್ಕೆ ಹೋಗಿ ದುಡಿಯುತ್ತಾರೆ. ವಿರಾಮವಿಲ್ಲದೇ ವರ್ಷಗಳ ಕಾಲ ಕಷ್ಟಪಟ್ಟು ದುಡಿದು ಕುಟುಂಬಕ್ಕೆ ಹಣ ಕಳಿಸುತ್ತಾರೆ. ಇದರ ನಡುವೆ ತಮ್ಮ ಸಂತೋಷವನ್ನು ಮರೆತುಬಿಡುತ್ತಾರೆ. ಹೀಗೆ ದುಡಿಯುತ್ತಾ ಒಂದು ಹಂತದಲ್ಲಿ ಅನಾರೋಗ್ಯಕ್ಕೀಡಾಗಿ ತವರಿಗೆ ಮರಳುವ ಅನೇಕರನ್ನು ಕಂಡಿದ್ದೇವೆ. ಇದೇ ರೀತಿ ಸಂಸಾರಕ್ಕಾಗಿಯೇ ತನ್ನ ಬದುಕು ಸವೆಸಿದ ವ್ಯಕ್ತಿಯೊಬ್ಬರು ಮನಕಲಕುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿದೇಶದಲ್ಲಿ ಇಂಜಿನಿಯರ್ ( Engineer ) ಆಗಿ ಹಗಲಿರುಳು ದುಡಿದು, ಹೆಂಡತಿ ಮಕ್ಕಳ ಸುಖಕ್ಕಾಗಿ ಲಕ್ಷಗಟ್ಟಲೆ ಹಣವನ್ನು ಪ್ರತಿ ತಿಂಗಳು ಮನೆಗೆ ಕಳಿಹಿಸುತ್ತಿದ್ದ ವ್ಯಕ್ತಿ ಇಂದು ಬೀದಿ ಪಾಲಾಗಿದ್ದಾನೆ. ಅದಕ್ಕೆ ಕಾರಣ ಆತನ ಹೆಂಡತಿ ಎಂಬುದೇ ಆಘಾತಕಾರಿ ಸಂಗತಿಯಾಗಿದೆ.

ವಿವರಣೆಗೆ ಬರುವುದಾದರೆ, ಬಿಯಿಂಗ್​ ಜಿಗರ್​ ರಾವಲ್​ ( being_jigar_rawal ) ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಲಾಗಿದೆ. ಅದರಲ್ಲಿರುವ ಚಿಂದಿ ಆಯುವ ವ್ಯಕ್ತಿ ತನ್ನ ಜೀವನದಲ್ಲಾದ ಏರಿಳಿತ ಹಾಗೂ ಪತ್ನಿಯಿಂದಾದ ಮೋಸವನ್ನು ಬಹಿರಂಗಪಡಿಸಿದ್ದಾರೆ. ನಾನೊಬ್ಬ ಇಂಜಿನಿಯರ್. ನಿಮ್ಮ ಬಳಿ ಏನಾದರೂ ಆಹಾರವಿದ್ದರೆ ದಯವಿಟ್ಟು ನನಗೆ ಕೊಡಿ. ನನಗೆ ಈಗ ಕೆಲಸ ಸಿಗುತ್ತಿಲ್ಲ ಆದರೆ, ನಾನು ಒಂದು ಕಾಲದಲ್ಲಿ ಇಂಜಿನಿಯರ್ ಆಗಿದ್ದೆ ಮತ್ತು ದುಬೈನಲ್ಲಿದ್ದೆ ಎಂದು ಚಿಂದಿ ಆಯುವ ವ್ಯಕ್ತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ನನ್ನ ಹೆಂಡತಿ ನನ್ನನ್ನು ತೊರೆದ ನಂತರ ನನ್ನ ಜೀವನದಲ್ಲಿ ಎಲ್ಲವೂ ಬದಲಾಯಿತು ಎಂದಿದ್ದಾನೆ. ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕೈತುಂಬಾ ಸಂಪಾದನೆ ಮಾಡುವ ಉದ್ದೇಶದಿಂದ ವಿದೇಶಕ್ಕೆ ಹೋದೆ ಮತ್ತು ವರ್ಷಗಳ ಕಾಲ ದುಬೈನಲ್ಲಿ ದುಡಿದೆ. ಮನೆಗೆ ಲಕ್ಷಾಂತರ ರೂಪಾಯಿ ಹಣ ಕಳುಹಿಸುತ್ತಿದ್ದೆ. ಆದರೆ, ಒಂದು ದಿನ ನನ್ನ ಹೆಂಡತಿ ನನ್ನನ್ನು ತೊರೆದು, ಬೇರೆಯವನ ಜೊತೆ ಹೋದಳು ಎಂದು ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ ವಿಡಿಯೋದಲ್ಲಿ ಮನದ ನೋವನ್ನು ಆ ವ್ಯಕ್ತಿ ವ್ಯಕ್ತಪಡಿಸಿದ್ದಾನೆ.

ನನ್ನ ಮಕ್ಕಳನ್ನು ಜತೆಗೆ ಕರೆದುಕೊಂಡು ಆಕೆ ನನ್ನನ್ನು ಬಿಟ್ಟು ಹೊರಟು ಹೋದಳು. ನನ್ನ ಕುಟುಂಬ ಚೆನ್ನಾಗಿದೆ ಎಂದು ಭಾವಿಸಿದರೆ, ಇಲ್ಲಿ ಬೇರೇನೋ ನಡೆಯುತ್ತಿತ್ತು ಎಂದು ಆ ವ್ಯಕ್ತಿ ನೋವಿನಿಂದ ಹೇಳಿಕೊಂಡಿದ್ದಾರೆ.

ಎಲ್ಲವನ್ನು ಕಳೆದುಕೊಂಡ ವ್ಯಕ್ತಿ ಇದೀಗ ಬೀದಿ ಬೀದಿಗಳಲ್ಲಿ ಚಿಂದಿ ಆಯುತ್ತಾ ಅದರಿಂದ ಬರುವ ಅಲ್ಪಸ್ವಲ್ಪ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ಕುಟುಂಬ ಮತ್ತು ಆರ್ಥಿಕ ಸ್ಥಿರತೆ ಎರಡನ್ನೂ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿ ಸಿಲುಕಿದ್ದೇನೆ ಎಂದು ವಿಡಿಯೋದಲ್ಲಿ ಜೀವನದ ಅತ್ಯಂತ ದುಃಖದ ಸಂಗತಿಯನ್ನು ಆ ವ್ಯಕ್ತಿ ಬಿಚ್ಚಿಟ್ಟಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್​ಸ್ಟಾಗ್ರಾಂನಲ್ಲಿ 19 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ( ಏಜೆನ್ಸೀಸ್​ )