ನ್ಯೂಸ್

ನಕಲಿ ಬಿಲ್​​​ ಪಾಸ್​ ಮಾಡಲು ಹಿರಿಯ ಅಧಿಕಾರಿಗಳಿಂದ ಒತ್ತಡ: ಸಾವಿಗೆ ಶರಣಾದ ಸರ್ಕಾರಿ ಇಂಜಿನಿಯರ್​! Fake Bills

Fake Bills : ಸರ್ಕಾರಿ ಇಂಜಿನಿಯರ್​ ಒಬ್ಬರ ಮೃತದೇಹ ಅವರ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದ್ದು, ಡೆತ್​ನೋಟ್​ ಸಿಕ್ಕಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು ಜ್ಯೋತಿಷಾ ದಾಸ್​ (30) ಎಂದು ಗುರುತಿಸಲಾಗಿದೆ. ಇವರು ಅಸ್ಸಾಂನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ) ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ (ಜುಲೈ 22) ಮಧ್ಯಾಹ್ನ ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ನಕಲಿ ಬಿಲ್‌ಗಳನ್ನು ಪಾಸ್​ ಮಾಡಲು ಹಿರಿಯ ಅಧಿಕಾರಿಗಳು ತೀವ್ರ ಒತ್ತಡ ಹೇರಿದ್ದರಿಂದ ಸಾವಿಗೆ ಶರಣಾಗಿರುವುದಾಗಿ ಜ್ಯೋತಿಷಾ ಬರೆದಿದ್ದಾರೆ ಎನ್ನಲಾದ ಕೈಬರಹದ ಡೆತ್​ನೋಟ್​ ಪೊಲೀಸರಿಗೆ ಆಕೆಯ ಮನೆಯಲ್ಲಿ ಪತ್ತೆಯಾಗಿದೆ. ಅದರಲ್ಲಿ ತನ್ನ ಇಬ್ಬರು ಹಿರಿಯ ಅಧಿಕಾರಿಗಳ ಹೆಸರನ್ನು ಜ್ಯೋತಿಷಾ ಉಲ್ಲೇಖಿಸಿದ್ದಾರೆ.

ಅಪೂರ್ಣಗೊಂಡ ಕೆಲಸದ ಬಿಲ್‌ಗಳನ್ನು ಪಾಸ್​ ಮಾಡುವಂತೆ ಇಬ್ಬರು ಹಿರಿಯ ಅಧಿಕಾರಿಗಳು ನಿರಂತರ ಒತ್ತಡ ಹೇರಿದರು. ಇದರಿಂದಾಗಿ ನಾನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ. ನನ್ನ ಕೆಲಸದ ಒತ್ತಡದಿಂದಾಗಿ ನಾನು ಈ ಹೆಜ್ಜೆ ಇಡುತ್ತಿದ್ದೇನೆ. ಕಚೇರಿಯಲ್ಲಿ ನನಗೆ ಮಾರ್ಗದರ್ಶನ ನೀಡಲು ಯಾರೂ ಇಲ್ಲ. ನಾನು ದಣಿದಿದ್ದೇನೆ. ನನ್ನ ಹೆತ್ತವರು ನನಗಾಗಿ ಚಿಂತಿತರಾಗಿದ್ದಾರೆ ಎಂದು ಡೆತ್​ನೋಟ್​ನಲ್ಲಿ ಇಂಜಿನಿಯರ್ ಆರೋಪಿಸಿದ್ದಾರೆ.

ಜ್ಯೋತಿಷಾ ಅವರ ಕುಟುಂಬವು ಪೊಲೀಸ್ ದೂರು ದಾಖಲಿಸಿದ್ದು, ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ. ಡೆತ್​ನೋಟ್​ ಆಧಾರದ ಮೇಲೆ, ಇತ್ತೀಚೆಗೆ ಬಡ್ತಿ ಪಡೆದ ಸೂಪರಿಂಟೆಂಡೆಂಟ್ ಇಂಜಿನಿಯರ್ ಹಾಗೂ ಈ ಹಿಂದೆ ಬೊಂಗೈಗಾಂವ್‌ನಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ದಿನೇಶ್ ಮೇಧಿ ಶರ್ಮಾ ಮತ್ತು ಪ್ರಸ್ತುತ ಬೊಂಗೈಗಾಂವ್‌ನಲ್ಲಿ ನಿಯೋಜನೆಗೊಂಡಿರುವ ಉಪ-ವಿಭಾಗೀಯ ಅಧಿಕಾರಿ (ಎಸ್‌ಡಿಒ) ಅಮೀನುಲ್ ಇಸ್ಲಾಂ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ವಿವರವಾದ ತನಿಖೆಗೆ ಕರೆ ನೀಡಿದ್ದಾರೆ. (ಏಜೆನ್ಸೀಸ್​)