Naxal : ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಬುಹ್ಮದ್ ಪ್ರದೇಶದಲ್ಲಿ ಇಂದು (21) ಬೆಳಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 27 ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಇನ್ನೂ ಈ ಕಾರ್ಯಾಚರಣೆಯನ್ನು ಚಾರಿತ್ರಿಕ ಸಾಧನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಕ್ಸಲ್‌ವಾದವನ್ನು ತೊಡೆದುಹಾಕುವ ಯುದ್ಧದಲ್ಲಿ ಒಂದು ಹೆಗ್ಗುರುತು ಸಾಧನೆ. ಇಂದು ಛತ್ತೀಸ್‌ಗಢದ ನಾರಾಯಣಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ನಮ್ಮ ಭದ್ರತಾ ಪಡೆಗಳು ಸಿಪಿಐ-ಮಾವೋವಾದಿಯ ಪ್ರಧಾನ ಕಾರ್ಯದರ್ಶಿ, ಅಗ್ರ ನಾಯಕ ಮತ್ತು ನಕ್ಸಲ್ ಚಳವಳಿಯ ಬೆನ್ನೆಲುಬಾದ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಸೇರಿದಂತೆ 27 ಭಯಾನಕ ಮಾವೋವಾದಿಗಳನ್ನು ತಟಸ್ಥಗೊಳಿಸಿವೆ ಎಂದು ಶಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಛತ್ತೀಸ್‌ಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ 54 ನಕ್ಸಲರನ್ನು ಬಂಧಿಸಲಾಗಿದೆ ಮತ್ತು 84 ನಕ್ಸಲರು ಶರಣಾಗಿದ್ದಾರೆ. ಆಪರೇಷನ್ ಬ್ಲಾಕ್ ಫಾರೆಸ್ಟ್ ಅಡಿಯಲ್ಲಿ ಭದ್ರತಾ ಪಡೆಗಳು ಮತ್ತು ಏಜೆನ್ಸಿಗಳ ಹೆಗ್ಗುರುತು ಸಾಧನೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.
2026ರ ಮಾರ್ಚ್ 31ರೊಳಗಾಗಿ ನಕ್ಸಲ್ ನಿರ್ಮೂಲನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಪುನರುಚ್ಚರಿಸಿದ್ದಾರೆ
ನಕ್ಸಲರ ವಿರುದ್ಧ ದೇಶ ನಡೆಸುತ್ತಿರುವ ಮೂರು ದಶಕಗಳ ಹೋರಾಟದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ನಾಯಕನ ನಿಗ್ರಹ ಮಾಡಲಾಗಿದೆ. ಈ ಕಾರ್ಯಾಚರಣೆಗಾಗಿ ನಮ್ಮ ಧೈರ್ಯಶಾಲಿ ಭದ್ರತಾ ಪಡೆಗಳನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
(ಏಜೆನ್ಸೀಸ್)