ನ್ಯೂಸ್

ಎಚ್-1ಬಿ ವೀಸಾದಾರರ ಸಂಗಾತಿಗಳಿಗೂ ಉದ್ಯೋಗ ಅವಕಾಶ; ಬೈಡೆನ್ ಸರ್ಕಾರದಿಂದ ವಲಸಿಗಸ್ನೇಹಿ ಕ್ರಮ

ವಾಷಿಂಗ್ಟನ್: ವಲಸಿಗ ಸ್ನೇಹಿ ಕ್ರಮ ತೆಗೆದುಕೊಂಡಿರುವ ಅಮೆರಿಕದ ಜೋ ಬೈಡೆನ್ ಸರ್ಕಾರ, ಎಚ್-1ಬಿ ವೀಸಾದಾರರ ಸಂಗಾತಿ (ಪತಿ/ಪತ್ನಿ)ಗೂ ಕೆಲಸ ಮಾಡುವುದಕ್ಕೆ ಅವಕಾಶ ನೀಡುವ ತೀರ್ವನವನ್ನು ಘೋಷಿಸಿದೆ. ಸರ್ಕಾರದ ಈ ತೀರ್ವನದಿಂದ ಸಾವಿರಾರು ಭಾರತೀಯ ಅಮೆರಿಕನ್ ಮಹಿಳೆಯರಿಗೆ ಪ್ರಯೋಜನವಾಗಲಿದೆ.

ವಲಸಿಗ ಸಂಗಾತಿಗಳ ಪರವಾಗಿ ಬೇಸಿಗೆಯಲ್ಲಿ ಅಮೆರಿಕನ್ ಇಮಿಗ್ರೇಶನ್ ಲಾಯರ್ಸ್ ಅಸೋಸಿಯೇಷನ್ (ಎಐಎಲ್​ಎ) ಈ ಸಂಬಂಧ ಕ್ಲಾಸ್ ಆಕ್ಷನ್ ದಾವೆಯನ್ನು ಹೂಡಿತ್ತು. ಇದನ್ನು ಪರಿಗಣಿಸಿದ ಡಿಪಾರ್ಟ್​ವೆುಂಟ್ ಆಫ್ ಹೋಮ್್ಯಾಂಡ್ ಸೆಕ್ಯುರಿಟಿ ಈ ವಿಷಯವಾಗಿ ಸಂಧಾನ ತೀರ್ವನಕ್ಕೆ ಬಂತು. ಇದರ ಪರಿಣಾಮ ಎಚ್-1ಬಿ ವೀಸಾದಾರರ ಸಂಗಾತಿಗೆ ತನ್ನಿಂತಾನೆ ಕೆಲಸಕ್ಕೆ ಅನುಮತಿ ಸಿಗಲಿದೆ. ಎಚ್1ಬಿ ವೀಸಾದಾರರ ಸಂಗಾತಿಗಳ ಬಳಿ ಎಚ್-4 ವೀಸಾ ಇದ್ದು, ಯಾವತ್ತೂ ತನ್ನಿಂತಾನೆ ಉದ್ಯೋಗ ದೃಢೀಕರಣ ದಾಖಲೆಗಳ ವಿಸ್ತರಣೆಯ ನಿಯಮಕ್ಕೆ ಪೂರಕವಾಗಿರುತ್ತಾರೆ. ಆದಾಗ್ಯೂ, ಹೋಮ್್ಯಾಂಡ್ ಸೆಕ್ಯುರಿಟಿ ಇಲಾಖೆ ಇವರಿಗೆ ನೇರ ಕೆಲಸದ ಅವಕಾಶವಿಲ್ಲದಂತೆ, ಮರುದೃಢೀಕರಣಕ್ಕೆ ಕಾಯುವಂತೆ ಮಾಡಿತ್ತು. ಇದರಿಂದಾಗಿ ಅನೇಕರು ತೊಂದರೆಗೆ ಒಳಗಾಗಿದ್ದರು. ಅವರಿಗಷ್ಟೆ ಅಲ್ಲ, ಅಮೆರಿಕದ ಉದ್ಯಮವಲಯಕ್ಕೂ ಇದರಿಂದ ಕಷ್ಟವಾಗಿತ್ತು. ಅನೇಕರು ಗರಿಷ್ಠ ವೇತನದ ಉದ್ಯೋಗವನ್ನು ಸಕಾರಣವಿಲ್ಲದೇ ಕಳೆದುಕೊಳ್ಳಬೇಕಾಗಿ ಬಂದಿತ್ತು ಎಂದು ಎಐಎಲ್​ಎ ಪ್ರತಿನಿಧಿ ಜಾನ್ ವಸ್ಡೆನ್ ಹೇಳಿದರು.

ದಾವೆಗೆ ಸಿಕ್ಕ ಗೆಲುವು: ಎಚ್-4 ವೀಸಾದಾರರ ಗುಂಪು ಸಲ್ಲಿಸಿದ ದಾವೆಯ ಪರಿಣಾಮ ಯುಎಸ್ ಸಿಟಿಜನ್​ಶಿಪ್ ಆಂಡ್ ಇಮಿಗ್ರೇಶನ್ ಸರ್ವೀಸಸ್ (ಯುಎಸ್​ಸಿಐಎಸ್) ನೀತಿಯನ್ನು ಸರ್ಕಾರ ಹಿಂಪಡೆಯುವಂತಾಗಿದೆ. ದೀರ್ಘ ಅವಧಿಯಿಂದ ಬಾಕಿ ಉಳಿದಿದ್ದ ಇವರ ಉದ್ಯೋಗದ ಬಿಕ್ಕಟ್ಟಿಗೆ ಪರಿಹಾರ ಸಿಕ್ಕಂತಾಗಿದ್ದು, ಎಲ್ಲರಿಗೂ ಅನುಕೂಲವಾಗಲಿದೆ ಎಂದು ಜಾನ್ ವೆಸ್ಡೆನ್ ವಿವರಿಸಿದರು.

ಪರಿಣಾಮ ಏನು?:

ಸರ್ಕಾರ ತೆಗೆದುಕೊಂಡಿರುವ ಕ್ರಮವು ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಲ್ಲ ನಿರ್ಧಾರವಾಗಲಿದೆ. ಎಕ್ಸಿಕ್ಯೂಟಿವ್ಸ್ ಮತ್ತು ಮ್ಯಾನೇಜರ್​ಗಳ ಸಂಗಾತಿಗಳಿಗೆ ಇನ್ನು ಯುಎಸ್​ಸಿಐಎಸ್ ಮಾನ್ಯತೆ ಸಿಗಲಿದ್ದು, ಅವರು ಕೂಡ ಅಮೆರಿಕದಲ್ಲಿ ಕೆಲಸ ಮಾಡಲು ಇನ್ನು ಮುಂಚಿತವಾಗಿ ಅನುಮತಿಗೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಇದು ಎಚ್-4 ಸಂಗಾತಿಗಳಿಗಷ್ಟೆ ಅಲ್ಲ ಅನೇಕರಿಗೆ ಪ್ರಯೋಜನವಾಗುತ್ತಿರುವುದು ಗಮನಾರ್ಹ ಎಂದು ಫೆಡರಲ್ ಲಿಟಿಗೇಶನ್​ನ ಎಐಎಲ್​ಎ ಡೈರೆಕ್ಟರ್ ಜೆಸ್ಸೆ ಬ್ಲೆಸ್ ಹೇಳಿದ್ದಾರೆ.

ಈ ಮೊದಲು ಹೀಗಿತ್ತು:

ಬರಾಕ್ ಒಬಾಮಾ ಆಡಳಿತದಲ್ಲಿ ಎಚ್-1ಬಿ ವೀಸಾದಾರರ ಪೈಕಿ ಕೆಲವು ಕೆಟಗರಿಯವರ ಸಂಗಾತಿಗಳಿಗೆ ಕೆಲಸಕ್ಕೆ ಅನುಮತಿ ನೀಡಲಾಗಿತ್ತು. ಇದುವರೆಗೆ 90,000ಕ್ಕೂ ಹೆಚ್ಚು ಎಚ್-4 ವೀಸಾವನ್ನು ಇಂತಹ ಸಂಗಾತಿಗಳಿಗೆ ನೀಡಲಾಗಿದೆ. ಇವರ ಪೈಕಿ ಬಹುತೇಕರು ಭಾರತೀಯ ಅಮೆರಿಕನ್ ಮಹಿಳೆಯರು.

ಎಚ್-4 ವೀಸಾ ಯಾರಿಗೆ?:

ಅಮೆರಿಕದಲ್ಲಿ ಯುಎಸ್​ಸಿಐಎಸ್ ಪ್ರಕಾರ ಎಚ್-4 ವೀಸಾವನ್ನು ಎಚ್-1ಬಿ ವೀಸಾದಾರರ ಸಂಗಾತಿ(ಪತಿ/ಪತ್ನಿ) ಮತ್ತು 21 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಅಮೆರಿಕದಲ್ಲಿ ಕಾನೂನುಬದ್ಧ ಪೌರರಾಗಿರುವವರ ನೇರ ಕುಟುಂಬ ಸದಸ್ಯರು ಉದ್ಯೋಗ ಕೋರಿ ಅರ್ಜಿ ಸಲ್ಲಿಸುವವರಿಗೆ ಎಚ್-4 ವೀಸಾ ನೀಡಲಾಗುತ್ತದೆ.