ನ್ಯೂಸ್

ಕಲ್ಯಾಣ ಕರ್ನಾಟಕ ಪ್ರದೇಶದ ವಿವಿಧ ಇಲಾಖೆ ಹುದ್ದೆಗಳ ಭರ್ತಿಗೆ ಅಸ್ತು; ಸರ್ಕಾರ ಹಸಿರು ನಿಶಾನೆ, ಬ್ಯಾಕ್​ಲಾಗ್ ಹುದ್ದೆಗಳಿಗೂ ಅನ್ವಯ

Webdesk - Ravikanth

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದ ವಿವಿಧ ಇಲಾಖೆ ಹುದ್ದೆಗಳಿಗೆ ನೇಮಕ ಹಾಗೂ ಬ್ಯಾಕ್​ಲಾಗ್ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಕರೊನಾ ಕಾರಣಕ್ಕೆ ಆರ್ಥಿಕ ಸ್ಥಿತಿ ಸುಧಾರಣೆ, ಮಿತವ್ಯಯ ಸಾಧಿಸಲೆಂದು 2021-22ನೇ ಸಾಲಿನಲ್ಲಿ ನಿರ್ಬಂಧ ವಿಧಿಸಿದ್ದರಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗಿದೆ. ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಇದರಿಂದಾಗಿ ಶಾಸನಾತ್ಮಕ ವಿಶೇಷ ಸ್ಥಾನಮಾನ ಹಾಗೂ ಅಭಿವೃದ್ಧಿ, ವಿಶೇಷ ಅನುದಾನ ಬಳಕೆಗೂ ಅಡ್ಡಿಯಾಗಿದೆ ಎಂಬ ಕೂಗಿಗೆ ಸರ್ಕಾರ ಓಗೊಟ್ಟಿದೆ. ವೃಂದ, ಬ್ಯಾಕ್​ಲಾಗ್ ಸೇರಿ ಹೊಸ ಹುದ್ದೆಗಳ ಸೃಜನೆ, ನೇರ ನೇಮಕಕ್ಕೆ ವಿಧಿಸಿದ್ದ ತಡೆ ತೆರವುಗೊಳಿಸಿ, ಆರ್ಥಿಕ ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದೆ. ಆಡಳಿತ ಇಲಾಖೆಗಳ ಅಪರ, ಪ್ರಧಾನ ಅಥವಾ ಕಾರ್ಯದರ್ಶಿಗಳ ಹಂತದಲ್ಲಿಯೇ ನೇಮಕ ಪ್ರಕ್ರಿಯೆ ಮುಂದುವರಿಸಿ, ನಿಯಮಾನುಸಾರ ಭರ್ತಿ ಮಾಡಿಕೊಳ್ಳಬೇಕು ಎಂದು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಸೂಚಿಸಿದ್ದಾರೆ.

  • ಕಲ್ಯಾಣ ಕರ್ನಾಟಕ ವೃಂದದಲ್ಲಿ ಈಗಾಗಲೆ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಸಹಮತಿ ನೀಡಿರುವ ಪ್ರಕರಣಗಳನ್ನು ಮುಂದುವರಿಸಿ, ನೇಮಕ ಆದೇಶ ನೀಡಲು ಕ್ರಮ
  • ವೃಂದ ಬಲ ಶೇ.80ಕ್ಕಿಂತ ಕಡಿಮೆಯಿದ್ದ ಸಂದರ್ಭ ನೇರ ನೇಮಕ ಮೂಲಕ ಭರ್ತಿ ಮಾಡಿಕೊಳ್ಳಲು ಆಡಳಿತ ಇಲಾಖೆಗಳು ತಮ್ಮ ಹಂತದಲ್ಲಿಯೇ ನಿಯಮಾನುಸಾರ ಪರಿಶೀಲಿಸಿ ಮುಂದುವರಿಸುವುದು
  • ಶೀಘ್ರಲಿಪಿಗಾರರು, ಬೆರಳಚ್ಚುಗಾರ, ವಾಹನ ಚಾಲಕರು ಮತ್ತು ಗ್ರೂಪ್-ಡಿ ವೃಂದಗಳ ಹುದ್ದೆಗಳನ್ನು ಅನುದಾನದ ಲಭ್ಯತೆ ಒಳಪಟ್ಟು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ
  • ನೇರ ನೇಮಕದಡಿ ಭರ್ತಿಯಾಗುವ ಹುದ್ದೆಗಳಿಗೆ ಆಯವ್ಯಯದಲ್ಲಿ ಸೂಕ್ತ ಅನುದಾನ ಕಲ್ಪಿಸಿಕೊಳ್ಳುವ ಸಲುವಾಗಿ ನೇಮಕ ಆದೇಶ ಹೊರಡಿಸುವ ಮುನ್ನ ಆರ್ಥಿಕ ಇಲಾಖೆಯ ಅನುಮತಿ ಪಡೆಯಬೇಕು.