ನವದೆಹಲಿ: ಕೆಲವು ಉದ್ಯಮಗಳು ಕೊವಿಡ್-19ರಿಂದ ತೀವ್ರ ಹೊಡೆತಕ್ಕೆ ಒಳಗಾಗಿವೆ. ಕೊವಿಡ್ ಮುಗಿದ ಬಳಿಕವೂ ಅವು ಆರ್ಥಿಕವಾಗಿ ಸಹಜ ಸ್ಥಿತಿಗೆ ಬರಲು ಕೆಲ ಸಮಯ ಬೇಕಾಗುತ್ತದೆ. ಹಾಗಾಗಿ ಅಂಥ ಇಪಿಎಫ್ ಸಂಸ್ಥೆಗಳಿಗೆ ಇನ್ನೂ ಮೂರು ತಿಂಗಳು ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಇದನ್ನೂ ಓದಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ತೇಜನಕ್ಕೆಆರ್ಥಿಕ ಪ್ಯಾಕೇಜ್ ಮೂಲಕ 6 ಹೊಸ ಕ್ರಮಗಳು: ನಿರ್ಮಲಾ ಸೀತಾರಾಮನ್
ಉದ್ಯಮ ಮತ್ತು ಉದ್ಯೋಗಿಗಳಿಗೆ ಇಪಿಎಫ್ ಸಹಕಾರವನ್ನು ಇನ್ನೂ ಮೂರು ತಿಂಗಳು ಅಂದರೆ ಜೂನ್, ಜುಲೈ, ಆಗಸ್ಟ್ಗೆ ವಿಸ್ತರಿಸಿಲು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ನಲ್ಲಿ 2500 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದರಿಂದಾಗಿ 3.67 ಲಕ್ಷ ಸಂಸ್ಥೆಗಳ 72.22 ಲಕ್ಷ ನೌಕರರು ಅನುಕೂಲ ಪಡೆಯಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕೊವಿಡ್-19ರಿಂದ ನಷ್ಟದಲ್ಲಿರುವ ಇಪಿಎಫ್ ಸಂಸ್ಥೆಗಳು ಹಾಗೂ ಅವುಗಳ ನೌಕರರಿಗೆ ಅನುಕೂಲವಾಗುವಂತೆ ನೌಕರರ ಸಂಪೂರ್ಣ ಭವಿಷ್ಯ ನಿಧಿ (ಇಪಿಎಫ್)ಯ ಪಾವತಿ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ಹೊತ್ತಿತ್ತು. ಉದ್ಯೋಗದಾತ ಸಂಸ್ಥೆಗಳು ನೀಡುವ ಶೇ.12 ಮತ್ತು ನೌಕರರು ಪಾವತಿಸುವ ಶೇ. 12 ಸೇರಿ ಒಟ್ಟು ಶೇ.24 ಪಿಎಫ್ನ್ನು ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿಗೆ ಅನ್ವಯವಾಗುವಂತೆ ಸಂಪೂರ್ಣ ಪಾವತಿ ಮಾಡುವುದಾಗಿ ಈ ಹಿಂದೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇದೀಗ ಈ ಪಾವತಿಯ ಕ್ರಮ ಮುಂದಿನ ಜೂನ್, ಜುಲೈ ಮತ್ತು ಅಗಸ್ಟ್ ತಿಂಗಳುಗಳಿಗೂ ಅನ್ವಯ ಆಗಲಿದೆ ಎಂದು ಇಂದು ತಿಳಿಸಿದ್ದಾರೆ.
ಹಾಗೇ ಈಗಿನ ಪರಿಸ್ಥಿತಿಯಲ್ಲಿ ನೌಕರರ ಕೈಯಲ್ಲಿ ಹಣ ಇರುವುದು ಮುಖ್ಯ. ಅದಕ್ಕಾಗಿ ಉದ್ಯೋಗದಾತರು ಮತ್ತು ನೌಕರರ ಶಾಸನಬದ್ಧ ಪಿಎಫ್ ಕೊಡುಗೆಯನ್ನು ಶೇ.12ರಿಂದ ಶೇ.10ಕ್ಕೆ ಇಳಿಸಲಾಗಿದೆ. ಮುಂದಿನ ಮೂರು ತಿಂಗಳವರೆಗೆ ಇದು ಅನ್ವಯ ಆಗಲಿದೆ. ಇದರಿಂದ ಟೇಕ್ ಹೋಂ ಸ್ಯಾಲರಿ ಪ್ರಮಾಣ ಹೆಚ್ಚುತ್ತದೆ ಮತ್ತು ದ್ರವ್ಯತೆ ಏರುತ್ತದೆ. ಇದಕ್ಕಾಗಿ ಪ್ಯಾಕೇಜ್ನಲ್ಲಿ 6750 ಕೋಟಿ ರೂ.ಮೀಸಲಿಡಲಾಗಿದೆ ಎಂದು ತಿಳಿಸಿದರು.
ಆದರೆ ಕೇಂದ್ರದ ಮತ್ತು ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳಿಗೆ ಇದು ಅನ್ವಯ ಆಗುವುದಿಲ್ಲ. ಅಲ್ಲಿ ಶೇ. 12ರಷ್ಟೇ ಕೊಡುಗೆ ನೀಡಬೇಕು ಎಂದು ಹೇಳಿದರು. (ಏಜೆನ್ಸೀಸ್)