ನ್ಯೂಸ್

ಇಂಥಾ ತಪ್ಪು ಇನ್ಯಾವತ್ತು ಸಂಭವಿಸಬಾರದು! 16 ಉದ್ಯೋಗಿಗಳಿಗೆ 20 ನಿಮಿಷ ನಿಂತೇ ಇರುವ ಶಿಕ್ಷೆ

ಮೋಹನ್​ ಶೆಟ್ಟಿ

Employees Punishment: ಸುಮಾರು 16 ಉದ್ಯೋಗಿಗಳು 20 ನಿಮಿಷಗಳ ಕಾಲ ತಾವು ಕುಳಿತಿರುವ ಕುರ್ಚಿಯಿಂದ ಎದ್ದು ನಿಲ್ಲುವಂತೆ ಮಾಡಿದ ಐಎಎಸ್​ ಅಧಿಕಾರಿ, ಇನ್ಯಾವತ್ತು ಇಂತಹ ತಪ್ಪುಗಳು ಮರುಕಳಿಸಬಾರದು. ಮರುಕಳಿಸಿದರೆ ಇದಕ್ಕಿಂತ ಹೆಚ್ಚಿನ ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಕೆ ರವಾನಿಸಿದ್ದಾರೆ. ಉದ್ಯೋಗಿಗಳ ನಿಂತಲ್ಲೇ ನಿಲ್ಲುವ ಶಿಕ್ಷೆಯ ದೃಶ್ಯ ಇದೀಗ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

ವೈಯಕ್ತಿಕ ಕೆಲಸದ ಮೇರೆಗೆ ಅಧಿಕಾರಿಗಳ ಕಚೇರಿಗೆ ಆಗಮಿಸಿದ್ದ ವೃದ್ಧನನ್ನು ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಅವಧಿ ಕಾಯಿಸಿದ ಉದ್ಯೋಗಿಗಳ ವಿರುದ್ಧ ಸಿಡಿಮಿಡಿಗೊಂಡ ಐಎಎಸ್​ ಅಧಿಕಾರಿ, ಸಿಸಿಟಿವಿ ದೃಶ್ಯಾವಳಿಗಳನ್ನು ಮುಂದಿಟ್ಟು, ತಮ್ಮ ಸಿಬ್ಬಂದಿ ವರ್ಗಕ್ಕೆ ಶಿಕ್ಷೆ ವಿಧಿಸಿದ್ದಾರೆ. ಈ ಘಟನೆ ನೋಯ್ಡಾ ರೆಸಿಡೆನ್ಶಿಯಲ್ ಪ್ಲಾಟ್ ಬಳಿಯಿರುವ ಅವರ ಕಚೇರಿಯಲ್ಲಿ ಸಂಭವಿಸಿದೆ.

ವರದಿಗಳ ಪ್ರಕಾರ, ನ್ಯೂ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಡಾ. ಲೋಕೇಶ್ ಎಂ. ಎಂಬುವವರು, ತಮ್ಮ ಕಚೇರಿಯಲ್ಲಿ ಸುಗಮ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಖಚಿತಪಡಿಸಿಕೊಳ್ಳಲು ಸುಮಾರು 65 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಈ ವೇಳೆ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸುಮಾರು 16 ಉದ್ಯೋಗಿಗಳು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವೃದ್ಧರೊಬ್ಬರನ್ನು ಕಾಯಿಸಿರುವುದು ಗಮನಕ್ಕೆ ಬಂದಿದೆ.

ಇದನ್ನು ಖಂಡಿಸಿದ ಅವರು ದೃಶ್ಯಾವಳಿಗಳನ್ನು ಮುಂದಿಟ್ಟು ಅಷ್ಟು ಜನಕ್ಕೂ 20 ನಿಮಿಷಗಳ ಕಾಲ ತಮ್ಮ ಕುರ್ಚಿಯಿಂದ ಎದ್ದು ನಿಂತಿರುವಂತೆ ಆದೇಶಿಸಿದ್ದಾರೆ. ಸದ್ಯ ಈ ದೃಶ್ಯ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊಟ್ಟರೆ ಹೀಗೆ ಶಿಕ್ಷೆ ಕೊಡಬೇಕು. ಹಿರಿಯರು, ವೃದ್ಧರು ಬಂದರೆ ಅವರನ್ನು ಮೊದಲು ವಿಚಾರಿಸಿ, ಮುತುವರ್ಜಿ ವಹಿಸಬೇಕು ಎಂದೆಲ್ಲಾ ನೆಟ್ಟಿಗರು ಕಮೆಂಟ್​ ಮಾಡಿ ಅಧಿಕಾರಿಯನ್ನು ಮೆಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).