ನ್ಯೂಸ್

ರಜೆ ನಿರಾಕರಿಸಿದ್ದಕ್ಕೆ ಸೂಪರ್​ ಮಾರ್ಕೆಟ್​ಗೆ ಬೆಂಕಿ ಹಚ್ಚಿದ ಉದ್ಯೋಗಿ

ಮುಂಬೈ: ರಜೆ ಕೊಡಲಿಲ್ಲ ಎಂಬ ಕಾರಣಕ್ಕೆ ಉದ್ಯೋಗಿಯೊಬ್ಬರು ತಾವು ಕೆಲಸ ಮಾಡುತ್ತಿದ್ದ ಸೂಪರ್​ ಮಾರ್ಕೆಟ್​ಗೆ ಬೆಂಕಿ ಹಚ್ಚಿರುವ ಘಟನೆ ಮುಂಬೈನ ಭಾಯಂದರ್​ ಸಬ್​ಅರ್ಬ್​ನ ಪ್ರದೇಶದಲ್ಲಿ ನಡೆದಿದೆ.

23 ವರ್ಷದ ಮಹಿಳಾ ಉದ್ಯೋಗಿ ಕೃತ್ಯ ಎಸಗಿದ್ದು, ಘಟನೆಯೂ ಸೂಪರ್​ ಮಾರ್ಕೆಟ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಟೋರ್​ ಮ್ಯಾನೇಜರ್​ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯ ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೊಬ್ಬರು 23 ವರ್ಷದ ಮಹಿಳೆ ಮೊದಲಿಗೆ ತಮಗೆ ರಜೆ ಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಕಂಪನಿಯವರು ಆಕೆಯ ಮನವಿಯನ್ನು ತಿರಸ್ಕರಿಸಿದ್ದಾರೆ. ಬಳಿಕ ಎರಡನೇ ಬಾರಿ ರಜೆ ಕೋರಿ ಅರ್ಜಿ ಸಲ್ಲಿಸಿದಾಗಲೂ ಸಹ ಆಕೆಯ ಮನವಿಯನ್ನು ತಿರಸ್ಕರಿಸಲಾಗಿದೆ.

ಆಕೆಯ ಮನವಿಯನ್ನು ತಿರಸ್ಕರಿಸಿದ್ದಕ್ಕೆ ಕಂಪನಿಯವರು ಕಾರಣ ಹೇಳದಿದ್ದಾಗ ಕುಪಿತಗೊಂಡ ಮಹಿಳೆ ಮಕ್ಕಳ ಆಟಿಕೆ ಹಾಗೂ ಬಟ್ಟೆ ವಿಭಾಗದಲ್ಲಿ ಬೆಂಕಿಯನ್ನು ಹಚ್ಚಿದ್ದಾರೆ. ಕೂಡಲೇ ಇದನ್ನು ಗಮನಿಸಿದ ಇತರರು ಅಗ್ನಿಶಾಮಕ ದಳಕ್ಕೆ ವಿಚಾರವನ್ನು ತಿಳಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಮೊದಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿರಬಹುದು ಎಂದು ಉಹಿಸಿದ್ದೆವು. ಆದರೆ, ಆ ನಂತರ ಕೂಲಂಕುಷವಾಗಿ ಪರಿಶೀಲಿಸಿದಾಗ ಮಹಿಳೆ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಸ್ಟೋರ್​ ಮ್ಯಾನೇಜರ್​ ನೀಡಿದ ದೂರಿನ ಮೇರೆಗೆ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದ್ದು, ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.