ನ್ಯೂಸ್

ಸರ್ಕಾರಕ್ಕೆ ಸವಾಲಾದ ನೌಕರರ ನಿಯಂತ್ರಣ ನಿಯಮ

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಸರ್ಕಾರಿ ನೌಕರರ ಮೇಲೆ ನಿರಂತರವಾಗಿ ಬರುವ ಆರೋಪಗಳ ಹಿನ್ನೆಲೆಯಲ್ಲಿ ಮತ್ತು ಕೋರ್ಟ್ ಆದೇಶದಂತೆ ನಿಯಂತ್ರಣ ನಿಯಮವೊಂದನ್ನು ಪ್ರಕಟಿಸಲು ಮಾಡಿರುವ ಪ್ರಯತ್ನ ಇದೀಗ ಸರ್ಕಾರಕ್ಕೆ ಹೊಸ ಸವಾಲು ತಂದೊಡ್ಡಿದೆ.

ರಾಜ್ಯ ಸರ್ಕಾರ ಮೇ 4ರಂದು ‘ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ’ಗಳನ್ನು ತಿದ್ದುಪಡಿ ಮಾಡಲು ತೀರ್ವನಿಸಿ ಕರಡು ಸಿದ್ಧಪಡಿಸಿ ಸಾರ್ವಜನಿಕವಾಗಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಇದೀಗ ಕಾಲಾವಕಾಶ ಮುಗಿದಿದ್ದು, ನೂರಾರು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕಗಳ ಮುಖೇನ ಸಂಗ್ರಹಿಸಿದ ಒಟ್ಟಾಭಿಪ್ರಾಯ ಕ್ರೋಡೀಕರಿಸಿ 24 ಅಂಶಗಳಿಗೂ 14 ಪುಟಗಳಲ್ಲಿ ಆಕ್ಷೇಪಣೆ ಸಲ್ಲಿಸಿದೆ. ಈ ಆಕ್ಷೇಪಣೆಯಲ್ಲಿ ಪ್ರಮುಖವಾಗಿ, ಕಠಿಣ ಶಿಕ್ಷೆಗಳನ್ನು ಕೈಬಿಟ್ಟು ಕಡಿಮೆ ಶಿಕ್ಷೆ ನಿಗದಿ ಮಾಡುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಸರ್ಕಾರಿ ನೌಕರರು ತಪ್ಪೇ ಮಾಡುವುದಿಲ್ಲ ಎಂದೇನಿಲ್ಲ. ಅನೇಕ ಬಾರಿ ಆಕಸ್ಮಿಕವಾಗಿ ದೋಷವಾಗುತ್ತದೆ. ಜತೆಗೆ ಮೇಲಧಿಕಾರಿಗಳ ಸೂಚನೆಗೆ ಮಣಿದು ತಪ್ಪು ತೀರ್ಮಾನ ಮಾಡಬೇಕಾಗುತ್ತದೆ. ಒಂದು ವೇಳೆ ಮೇಲಧಿಕಾರಿ ಹೇಳಿದ ಕೆಲಸ ಮಾಡದಿದ್ದರೆ ಮತ್ತೊಂದು ರೀತಿ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಕಾರಣಕ್ಕೆ ಇಷ್ಟೊಂದು ‘ಮಿಲಿಟರಿ ರೀತಿ’ ಕ್ರಮ ಒಪ್ಪಲು ಸಾಧ್ಯವೇ ಇಲ್ಲ ಎಂದು ಸರ್ಕಾರಿ ನೌಕರರ ಸಂಘ ಅಭಿಪ್ರಾಯ ನೀಡಿದೆ.

ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆಕ್ಷೇಪಣೆಗಳನ್ನೆಲ್ಲ ಒಟ್ಟು ಮಾಡಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ ಪ್ರಕಟಿಸಬೇಕು. ಸರ್ಕಾರಿ ನೌಕರರ ಸಂಘದ ಆಕ್ಷೇಪಣೆಗಳನ್ನು ಅಷ್ಟು ಸುಲಭವಾಗಿ ಬದಿಗೆ ಸರಿಸಿ ಕರಡು ನಿಯಮವನ್ನೇ ಆದೇಶ ಮಾಡುವ ಸ್ಥಿತಿಯಲ್ಲಿ ಸರ್ಕಾರವಿಲ್ಲ. ಈ ಕಾರಣಕ್ಕೆ 2-3 ಹಂತದ ಸಭೆ ನಡೆಸಿ ನಿಯಮದಲ್ಲಿ ಸಡಿಲ ಮಾಡುವುದು ಅನಿವಾರ್ಯ. ತನ್ನ ನೌಕರರನ್ನೇ ಸರ್ಕಾರ ಎದುರು ಹಾಕಿಕೊಳ್ಳುವ ಸಂದರ್ಭವೂ ಈಗಿಲ್ಲ ಎನ್ನಲಾಗಿದೆ. ಒಟ್ಟಾರೆ ಸರ್ಕಾರಕ್ಕೆ ಇದೊಂದು ಸವಾಲಾಗಿದೆ. ವ್ಯವಸ್ಥೆ ಸರಿ ಮಾಡಲು ಕಠಿಣ ನಿಯಮ ಅನಿವಾರ್ಯ. ಆದರೆ, ಇಷ್ಟೊಂದು ಕಠಿಣತೆ ಒಪ್ಪಲು ನೌಕರರು ಸಿದ್ಧರಿಲ್ಲ.

ಆಕ್ಷೇಪಣೆ ಅಥವಾ ಸಲಹೆ

ನಿಯಮ ಉಲ್ಲಂಘಿಸಿ ಚರ-ಸ್ಥಿರ ಆಸ್ತಿ ವ್ಯವಹಾರ ಮಾಡಿದ್ದರೆ ಒಂದು ವಾರ್ಷಿಕ ವೇತನ ಬಡ್ತಿ ತಡೆ ಹಿಡಿಯಲು ಪ್ರಸ್ತಾಪಿಸಿದ್ದರೆ, ವಾಗ್ದಂಡನೆಯೇ ಸಾಕೆಂದು ಸಂಘ ಸಲಹೆ ನೀಡಿದೆ.

ವರದಕ್ಷಿಣೆ ಕೊಡುವುದು, ತೆಗೆದು ಕೊಂಡರೆ ಸರ್ಕಾರಿ ಸೇವೆಯಿಂದಲೇ ತೆಗೆದು ಹಾಕಬೇಕು ಎಂಬುದನ್ನು ಕೈಬಿಟ್ಟು ಆರೋಪ ಸಾಬೀತಾದಲ್ಲಿ ಕಡ್ಡಾಯ ನಿವೃತ್ತಿಗೊಳಿಸಲಿ.

ರಾಜಕೀಯ ಅಥವಾ ಚುನಾವಣೆ ಯಲ್ಲಿ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿ ಮಾಡುವ ಬದಲು ದೂರು ರುಜುವಾತಾದಲ್ಲಿ 2 ವಾರ್ಷಿಕ ವೇತನ ಬಡ್ತಿ ಕಡಿತ ಮಾಡಿದರೆ ಸಾಕು ಎಂದಿದೆ.

ಲೈಂಗಿಕ ಕಿರುಕುಳ ನೀಡಿದರೆ ಶಿಕ್ಷಿಸುವ ನಿಯಮ ದುರ್ಬಳಕೆ ಆದ ಉದಾಹರಣೆ ಇದ್ದು, 2 ವಾರ್ಷಿಕ ವೇತನ ಬಡ್ತಿ ಕಡಿತ ಸಾಕು, ಗಂಭೀರ ಪ್ರಕರಣವಾದರೆ ವೇತನ ಶ್ರೇಣಿ 5 ವರ್ಷ ಅವಧಿಗೆ ಇಳಿಸುವುದು ಸೂಕ್ತ ಎಂದಿದೆ.

ಸರ್ಕಾರಿ ಹಣದ ದುರ್ಬಳಕೆ ಅಥವಾ ತಪ್ಪು ಬಳಕೆಗೆ ಸೇವೆಯಿಂದಲೇ ನಿವೃತ್ತಿ ಶಿಕ್ಷೆ ನೀಡುವ ಪ್ರಸ್ತಾವನೆ ಮಾಡಲಾಗಿತ್ತು, ಆದರೆ, ಬಡ್ಡಿ ಸಹಿತ ಹಣದ ವಸೂಲಿ, ವಾರ್ಷಿಕ ವೇತನ ಬಡ್ತಿ ಕಡಿತ ಸಾಕೆಂದು ಸಂಘ ಹೇಳಿದೆ.

ಎರಡನೇ ಮದುವೆ ಮಾಡಿಕೊಂಡರೆ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿ ಮಾಡುವುದಾಗಿ ಕರಡು ನಿಯಮದಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಈ ಪ್ರಸ್ತಾಪಕ್ಕೆ ಸಂಘ ವಿರೋಧ ವ್ಯಕ್ತಪಡಿಸಿಲ್ಲ.

ಸಿನಿಮಾ-ನಾಟಕ ಮುಂತಾದವುಗಳಲ್ಲಿ ಭಾಗವಹಿಸಿದರೆ 2 ವಾರ್ಷಿಕ ವೇತನ ಬಡ್ತಿ ತಡೆ ಹಿಡಿಯುವ ಪ್ರಸ್ತಾವನೆ

ಮಾಡಲಾಗಿತ್ತು. ಆದರೆ, ಭಾಗವಹಿಸಲು ಅವಕಾಶ ನೀಡಬೇಕೆಂದು ಸಂಘ ಒತ್ತಾಯಿಸಿದೆ.

ಕುಟುಂಬದ ಸದಸ್ಯರಿಗೆ ಗುತ್ತಿಗೆ ಕೊಟ್ಟರೆ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿ ಬದಲು 2 ವಾರ್ಷಿಕ ವೇತನ ಬಡ್ತಿ ಕಡಿತಗೊಳಿಸಿದರೆ ಸಾಕು.

ಪ್ರಸ್ತಾವಿತ ತಿದ್ದುಪಡಿ ನಿಯಮ ಅತಿ ಕಠಿಣವಾಗಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲಿ. ಆದರೆ ಇಲ್ಲಿ ಕಠಿಣ ಶಿಕ್ಷೆ ವಿಧಿಸುವುದು ಬೇಡ ಎಂಬುದು ನಮ್ಮ ಅಭಿಪ್ರಾಯ. ಸರ್ಕಾರ ಸಂಘದ ಆಕ್ಷೇಪಣೆ ಒಪ್ಪುತ್ತದೆಂದು ಭಾವಿಸುತ್ತೇವೆ.

| ಷಡಕ್ಷರಿ ಅಧ್ಯಕ್ಷ, ಸರ್ಕಾರಿ ನೌಕರರ ಸಂಘ