ನ್ಯೂಸ್

ಪಕ್ಷಿಯಿಂದ ನಾಯಿಗೆ ಟ್ವಿಟರ್​ ಲೋಗೋ ಬದಲಿಸಿದ ಎಲಾನ್​ ಮಸ್ಕ್​: ಕಾರಣ ಹೀಗಿದೆ…

ವಾಷಿಂಗ್ಟನ್​: ಟ್ವಿಟರ್​ ಸಿಇಒ ಎಲಾನ್​ ಮಸ್ಕ್​ ಅವರು ಮತ್ತೊಮ್ಮೆ ಹೊಸ ಅಪ್​ಡೇಟ್​ನೊಂದಿಗೆ ಬಂದಿದ್ದಾರೆ. ಈ ಬಾರಿ ಮಸ್ಕ್​ ಅವರು ಟ್ವಿಟರ್​ನ ನೀಲಿ ಬಣ್ಣದ ಪಕ್ಷಿ ಲೋಗೋ ಅನ್ನು ಬದಲಾಯಿಸಿದ್ದು, ಆ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್​ಕಾಯಿನ್​ನ​ ನಾಯಿಯ ಮೀಮ್ಸ್​ ಫೋಟೋವನ್ನು ಬಳಸಿದ್ದಾರೆ.

ಟ್ವಿಟರ್ ಬಳಕೆದಾರರು ಸೋಮವಾರದ ಟ್ವಿಟರ್‌ನ ವೆಬ್ ಆವೃತ್ತಿಯಲ್ಲಿ 2013 ರಲ್ಲಿ ಜೋಕ್​ಗಾಗಿ ರಚಿಸಲಾದ ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋದ ಭಾಗವಾಗಿರುವ 'ಡಾಗ್​' ಮೀಮ್ಸ್​ ಅನ್ನು ಗಮನಿಸಿದ್ದಾರೆ.

ಮಸ್ಕ್ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ, ಇಲ್ಲೊಂದು ಟ್ವಿಸ್ಟ್​ ಇದೆ. ಟ್ವಿಟರ್​ ಲೋಗೋ ಬದಲಾವಣೆಯು ಕೇವಲ ವೆಬ್​ ಆವೃತ್ತಿಗೆ ಮಾತ್ರ ಸೀಮಿತವಾಗಿದೆ. ಮೊಬೈಲ್​ ಟ್ವಿಟರ್​ ಆ್ಯಪ್​ನಲ್ಲಿ ಪಕ್ಷಿಯ ಲೋಗೋ ಮುಂದುವರಿದಿದೆ.

ಅಂದಹಾಗೆ ಬಿಟ್‌ಕಾಯಿನ್‌ನಂತಹ ಇತರ ಕ್ರಿಪ್ಟೋಕರೆನ್ಸಿಗಳನ್ನು ಅಪಹಾಸ್ಯ ಮಾಡಲು 2013ರಲ್ಲಿ ಜೋಕ್ಸ್​ಗಾಗಿ ಈ ಡಾಗ್​ ಚಿತ್ರ (ಶಿಬಾ ಇನು) ರಚಿಸಲಾಯಿತು. ಇದು ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋ ಎಂದು ಪ್ರಸಿದ್ಧವಾಗಿದೆ.

ಟ್ವಿಟರ್​ನ ಸಿಇಒ ಮಸ್ಕ್​ ಅವರು 2022, ಮಾರ್ಚ್ 26ರ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಮತ್ತು ಅನಾಮಧೇಯ ಖಾತೆಯ ನಡುವಿನ ಸಂಭಾಷಣೆ ಇದೆ. ಟ್ವಿಟರ್​ ಬಳಕೆದಾರನೊಬ್ಬ ಪಕ್ಷಿ ಲೋಗೋವನ್ನು "ಡಾಗ್​" ಗೆ ಬದಲಾಯಿಸಲು ಕೇಳುತ್ತಿದ್ದಾರೆ. ಈ ಪೋಸ್ಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಮಸ್ಕ್, ಭರವಸೆ ನೀಡಿದ್ದರು. ಇದೀಗ ವೆಬ್​ ಆವೃತ್ತಿಯಲ್ಲಿ ಮಾತ್ರ ಬದಲಾವಣೆ ಮಾಡಿದ್ದಾರೆ.

2022ರ ಏಪ್ರಿಲ್​ನಲ್ಲಿ ಟ್ವಿಟರ್​ ಖರೀದಿಸುವ 44 ಬಿಲಿಯನ್​ ಡಾಲರ್​ ಒಪ್ಪಂದವನ್ನು ಮಸ್ಕ್​ ಆರಂಭಿಸಿದ್ದರು. ಅವರು ಸ್ಪ್ಯಾಮ್ ಖಾತೆಗಳನ್ನು ತೆಗೆದುಹಾಕಲು ಯೋಜಿಸಿದ್ದರು ಮತ್ತು ಮಾಹಿತಿ ಪಡೆಯಲು ಟ್ವಿಟರ್​ಗೆ ತಿಳಿಸಿದ್ದರು. ಆದರೆ, ಟ್ವಿಟರ್​ ಸಹಕಾರ ನೀಡುತ್ತಿಲ್ಲ ಎಂದು ಅವರ ವಕೀಲರು ಆರೋಪಿಸಿದ್ದರು. ಇದರಿಂದಾಗಿ ದಿಢೀರನೇ ತಮ್ಮ ನಿಲುವು ಬದಲಿಸಿಕೊಂಡಿದ್ದ ಮಸ್ಕ್​, ಟ್ವಿಟರ್​ ಖರೀದಿ ಒಪ್ಪಂದವನ್ನು ಮುರಿದುಕೊಂಡಿದ್ದರು. ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರೂ ಮಾಹಿತಿ ನೀಡದ್ದಕ್ಕೆ ಒಪ್ಪಂದವನ್ನು ಮುರಿದುಕೊಂಡಿರುವುದಾಗಿ ಮಸ್ಕ್​ ಸ್ಪಷ್ಟನೆ ನೀಡಿದ್ದರು. ಕಂಪನಿಯನ್ನು ಖರೀದಿಸಲು ಕಾನೂನುಬದ್ಧವಾಗಿ ಮಸ್ಕ್​ ಬದ್ಧರಾಗಿದ್ದಾರೆ ಮತ್ತು ಮೊಕದ್ದಮೆ ಹೂಡಿದ್ದಾರೆ ಎಂದು ಟ್ವಿಟರ್ ವಾದಿಸಿತು.

ಅಕ್ಟೋಬರ್ ಆರಂಭದಲ್ಲಿ ಟ್ವಿಟರ್‌ನ ವಕೀಲರು ತಮ್ಮ ವಿಚಾರಣೆಯ ಪ್ರಾರಂಭದ ಮೊದಲು ಮಸ್ಕ್ ಅವರನ್ನು ಪದಚ್ಯುತಗೊಳಿಸಲು ನಿರ್ಧರಿಸಿದಾಗ, ಮಸ್ಕ್ ಮತ್ತೊಮ್ಮೆ ಯು-ಟರ್ನ್ ಹೊಡೆಯುವ ಮೂಲಕ ಒಪ್ಪಂದವನ್ನು ಪೂರ್ಣಗೊಳಿಸಲು ಮುಂದಾದರು. ಅದರಂತೆ ಶುಕ್ರವಾರ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಿದ ಮಸ್ಕ್​, ಟ್ವಿಟರ್​ನ ಮುಖ್ಯಸ್ಥರಾಗಿ ಹೊರಹೊಮ್ಮಿದ್ದಾರೆ. (ಏಜೆನ್ಸೀಸ್​)