ನ್ಯೂಸ್

ಆನೆ ನಮ್ಮದು! ಪಕ್ಷದ ಧ್ವಜ ಬಿಡುಗಡೆ ಬೆನ್ನಲ್ಲೇ ನಟ ವಿಜಯ್​ ವಿರುದ್ಧ ದಾಖಲಾಯ್ತು ದೂರು

ಚೆನ್ನೈ: ಕಾಲಿವುಡ್​ ಸೂಪರ್​ಸ್ಟಾರ್​ ವಿಜಯ್​ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಧ್ವಜದಲ್ಲಿರುವ ಆನೆಯ ಚಿಹ್ನೆಯ ವಿರುದ್ಧ ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದೆ.

ನಟ ವಿಜಯ್ ಅವರು ಕಳೆದ ಫೆಬ್ರವರಿ 2ರಂದು ತಮ್ಮ ಹೊಸ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ ಅನ್ನು ಘೋಷಣೆ ಮಾಡಿದರು. ಇದಾದ 5 ತಿಂಗಳ ನಂತರ ಆಗಸ್ಟ್​ 22ರಂದು ಚೆನ್ನೈನಲ್ಲಿರುವ ತಮ್ಮ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಧ್ವಜ ಮತ್ತು ಗೀತೆಯನ್ನು ಅನಾವರಣಗೊಳಿಸಿದರು. ಧ್ವಜದ ಮೇಲೆ ಮತ್ತು ಕೆಳಭಾಗದಲ್ಲಿ ಕೆಂಪು ಬಣ್ಣವಿದ್ದು, ಮಧ್ಯದಲ್ಲಿ ಹಳದಿ ಬಣ್ಣವಿದೆ. ವಿಜಯದ ಸಂಕೇತವಾಗಿ ಎರಡು ಆನೆಗಳು ಮತ್ತು ಅಲ್ಬಿಜಿಯಾ ಲೆಬ್ಬೆಕ್ ಹೂವಿನ ಚಿತ್ರವಿದೆ.

ವಿಜಯ್​ ಅವರು ಪಕ್ಷದ ಧ್ವಜ ಬಿಡುಗಡೆ ಮಾಡಿದ ಬೆನ್ನಲ್ಲೇ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಅದರಲ್ಲೂ ರಾಷ್ಟ್ರೀಯ ಪಕ್ಷ ಬಹುಜನ ಸಮಾಜ ಪಕ್ಷವು ಟಿವಿಕೆ ಧ್ವಜದಲ್ಲಿರುವ ಆನೆಯ ಚಿತ್ರವನ್ನು ತೆಗೆಯಬೇಕು ಇಲ್ಲದಿದ್ದರೆ ಚುನಾವಣಾ ಆಯೋಗವನ್ನು ಸಂಪರ್ಕಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಆದರೆ, ಎಚ್ಚರಿಕೆಗೆ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ಇದೀಗ ವಿಜಯ್​ ಅವರ ಟಿವಿಕೆ ಪಕ್ಷದ ವಿರುದ್ಧ ದೂರು ದಾಖಲಾಗಿದೆ.

ಬಹುಜನ ಸಮಾಜ ಪಕ್ಷದ ತಮಿಳುನಾಡು ರಾಜ್ಯ ಕಚೇರಿ ಕಾರ್ಯದರ್ಶಿ ವಕೀಲ ತಮಿಳ್ಮತಿ ಅವರು ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಬಹುಜನ ಸಮಾಜ ಪಕ್ಷವು ಭಾರತದಾದ್ಯಂತ ಆನೆಯನ್ನು ಚುನಾವಣಾ ಚಿಹ್ನೆಯಾಗಿ ಬಳಸುತ್ತಿದೆ. ನಮ್ಮ ಪಕ್ಷವೂ ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೂ ನಟ ವಿಜಯ್, ಯಾವುದೇ ಪ್ರತಿಕ್ರಿಯೆ ಅಥವಾ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೊಸ ಪಕ್ಷದ ಧ್ವಜದಲ್ಲಿ ರಾಷ್ಟ್ರೀಯ ಪಕ್ಷದ ಚಿಹ್ನೆಯನ್ನು ಯಾವುದೇ ರಾಜಕೀಯ ಶಿಷ್ಟಾಚಾರವನ್ನು ಪಾಲಿಸದೇ ಬಳಸಿದ್ದಕ್ಕಾಗಿ ನಟ ವಿಜಯ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲ ತಮಿಳ್ಮತಿ ದೂರಿನಲ್ಲಿ ಕೋರಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಸುವುದನ್ನು ತಪ್ಪಿಸಲು ತಮಿಳಗ ವೆಟ್ರಿ ಕಳಗಂ ಧ್ವಜದಿಂದ ಆನೆಯ ಚಿತ್ರವನ್ನು ತೆಗೆಯಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಅಂದಹಾಗೆ ಪಕ್ಷದ ಧ್ವಜ ಮತ್ತು ಹಾಡನ್ನು ಬಿಡುಗಡೆ ಮಾಡಿ ಮಾತನಾಡಿದ್ದ ವಿಜಯ್​, ನಮ್ಮ ಪಕ್ಷವು ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಡೆಯಲಿದೆ ಎಂದಿದ್ದರು. ಮುಂಬರುವ ಅಂದರೆ, 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ವಿಜಯ್​ ಘೋಷಣೆ ಮಾಡಿದ್ದಾರೆ. (ಏಜೆನ್ಸೀಸ್​)