ಗುಡ್ಡದ ಮಣ್ಣು ಕುಸಿಯುತ್ತಿದ್ದು ಅಪಾಯದಂಚಿನಲ್ಲಿರುವ ವಿದ್ಯುತ್ ಟವರ್ 
ನ್ಯೂಸ್

ಅಪಾಯದಂಚಿನಲ್ಲಿ ವಿದ್ಯುತ್ ಟವರ್ : ಮಳೆಯಿಂದ ಗುಡ್ಡದ ಮಣ್ಣು ಕುಸಿತ ; ಪ್ರಾಣಭಯದಲ್ಲೇ ಸಂಚರಿಸುವ ಗ್ರಾಮಸ್ಥರು

ಇಂದಿರಾ ಎನ್ ಕೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ವಾರದಿಂದ ನಿರಂತರ ಮಳೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿಯುವ ಹಂತದಲ್ಲಿದೆ. ಹೈಟೆನ್ಶನ್ ವಯರ್‌ನ ವಿದ್ಯುತ್ ಟವರ್ ಉರುಳುವ ಸ್ಥಿತಿ ತಲುಪಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾರ್ಕಳ ಬೈಪಾಸ್‌ನಿಂದ ಮಂಗಳೂರಿನ ಬಿರ್ಕನಕಟ್ಟೆಯವರೆಗೆ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯೂ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಗುತ್ತಿಗೆ ಪಡೆದ ಸಂಸ್ಥೆಯೂ ಸಾಣೂರು ಯುವಕ ಮಂಡಲ ಕಟ್ಟಡ ಮುಂಭಾಗದ ಮೈದಾನದಿಂದ ಪದ್ಮನಾಭ ನಗರದ ಕಡೆಗೆ ಹೋಗುವ ರಸ್ತೆಯವರೆಗೆ ಹೆದ್ದಾರಿ ಕಾಮಗಾರಿ ವೇಳೆ ಗುಡ್ಡ ಕಡಿದಿದ್ದು, ಅಪಾಯದಂಚಿನಲ್ಲಿದೆ. ಕಳೆದ ವರ್ಷವೂ ಗುಡ್ಡ ಜರಿದು ಬೀಳುವ ಹಂತ ತಲುಪಿದಾಗ ಮಳೆಗಾಲ ಸಂದರ್ಭ ಕಾಟಾಚಾರಕ್ಕೆ ಟಾರ್ಪಾಲು ಹೊದಿಸಿ ಗುಡ್ಡ ಜರಿತಕ್ಕೆ ಹೊಸ ತಂತ್ರಜ್ಞಾನ ಗುತ್ತಿಗೆದಾರ ಕಂಪನಿ ಪರಿಚಯಿಸಿತ್ತು.

ಬಳಿಕ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳಿಗೆ, ಗುತ್ತಿಗೆದಾರ ಕಂಪನಿಯವರಿಗೆ, ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಆದಷ್ಟು ಶೀಘ್ರ ಗುಡ್ಡ ಜರಿದ ಭಾಗಕ್ಕೆ ತಡೆಗೋಡೆ ನಿರ್ಮಾಣ ಮಾಡದಿದ್ದರೆ ಪಕ್ಕದಲ್ಲಿರುವ ಹೈಟೆನ್ಶನ್ ಟವರ್ ಮತ್ತು ಅದರ ಹಿಂಭಾಗದಲ್ಲಿರುವ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಧರಾಶಾಯಿಯಾಗುವ ಬಹುದೊಡ್ಡ ಅಪಾಯಕಾದಿದೆ ಎಂದು ಸಾರ್ವಜನಿಕರು ತಿಳಿಸಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಕಟ್ಟಡ ತೆರವು

ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯ 169ರ ಸಾಣೂರಿನಲ್ಲಿ ಗುಡ್ಡ ಮೇಲೆಯಿರುವ ಹೈಟೆನ್ಶನ್ ವಯರ್ ಟವರ್‌ನ ಬುಡದಲ್ಲೇ ಮಣ್ಣು ತೆಗೆದ ಪರಿಣಾಮ ಗುಡ್ಡದ ಮಣ್ಣು ದಿನೇ ದಿನೆ ಕುಸಿಯುತ್ತಿದ್ದು, ವಿದ್ಯುತ್ ಟವರ್ ಅಪಾಯದಂಚಿನಲ್ಲಿದೆ. ಮಳೆಯಿಂದಾಗಿ ಮಣ್ಣು ಸಡಿಲಗೊಂಡು ರಸ್ತೆಗೆ ಬೀಳುತ್ತಿದ್ದು, ಹೀಗೆ ನಿರಂತರ ಇನ್ನೆರಡು ದಿನ ಮಳೆ ಸುರಿದಲ್ಲಿ ಮತ್ತಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿದು ವಿದ್ಯುತ್ ಟವರ್ ಕುಸಿದು ಧರಾಶಾಹಿಯಾಗುವ ಸಾಧ್ಯತೆಗಳಿವೆ. ಕಳೆದ ವರ್ಷ ಇದೇ ಗುಡ್ಡದ ಪಕ್ಕದಲ್ಲಿದ್ದ ಪಶು ಚಿಕಿತ್ಸಾಲಯ ಕಟ್ಟಡ ಜರಿದು ಬೀಳುವ ಸಂಭವವಿದೆ ಎಂದು ಸಾರ್ವಜನಿಕರು ಎಚ್ಚರಿಸಿದಾಗ ಅಂದಿನ ಜಿಲ್ಲಾಧಿಕಾರಿ ಕೂರ್ಮ ರಾವ್ ಕೂಡಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಎಚ್ಚರಿಕೆ ನೀಡಿ ಕಟ್ಟಡ ತೆರವುಗೊಳಿಸಿ ಸಂಭಾವ್ಯ ಅಪಾಯದಿಂದ ಪಾರು ಮಾಡಿದ್ದರು.

ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

ಭಾರಿ ದುರಂತ ಸಂಭವಿಸುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾರ್ಯಪ್ರವೃತ್ತರಾಗಿ ತಾತ್ಕಾಲಿಕವಾಗಿ ಗುಡ್ಡದ ಮಣ್ಣು ಜರಿದು ಬೀಳದಂತೆ ವ್ಯವಸ್ಥೆ ಜತೆಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಹೆದ್ದಾರಿ ಇಲಾಖೆ ಮುಂದಾಗದಿದ್ದರೆ ಗ್ರಾಪಂ ಆಡಳಿತ, ವಿವಿಧ ಸಾಮಾಜಿಕ ಸಂಘಟನೆಗಳು, ಹೆದ್ದಾರಿ ಹೋರಾಟ ಸಮಿತಿ ಮತ್ತು ಸ್ಥಳೀಯ ನಾಗರಿಕರು ಜತೆಯಾಗಿ ಗುತ್ತಿಗೆದಾರರ ವಿರುದ್ದ ಪ್ರತಿಭಟಿಸುವ ಅನಿವಾರ್ಯ ಬಂದಿತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಹೋರಾಟ ಎಚ್ಚರಿಕೆ

ಕಳೆದ ಒಂದು ವರ್ಷದಿಂದ ಇಲ್ಲಿನ ಸಮಸ್ಯೆ ಬಗ್ಗೆ ಸಚಿವರು, ಶಾಸಕರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಹೆದ್ದಾರಿ ಪ್ರಗತಿ ಪರಿಶೀಲನಾ ಸಭೆ ಸಂದರ್ಭ ಸಂಬಂಧಪಟ್ಟವರಿಗೆ ಎಚ್ಚರಿಸಿದ್ದರೂ ಸಮಸ್ಯೆಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ಮುಂದೆ ಸಂಭವಿಸುವ ಎಲ್ಲ ದುರಂತಗಳಿಗೆ ಹೆದ್ದಾರಿ ಇಲಾಖೆ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಪ್ರಾಣಭಯದಲ್ಲೇ ಸಂಚಾರ

ಸಾಣೂರಿನ ಈ ಅಪಾಯಕಾರಿ ಗುಡ್ಡದ ಕುಸಿತದಿಂದ ಗ್ರಾಮಸ್ಥರು ನಿತ್ಯ ಪ್ರಾಣಭಯದಲ್ಲೇ ಸಂಚಾರ ನಡೆಸುವಂತಾಗಿದೆ. ರಸ್ತೆಯಲ್ಲಿ ನೂರಾರು ವಾಹನಗಳ ಸಹಿತ ಪಾದಚಾರಿಗಳು ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಈ ಸಂದರ್ಭ ಗುಡ್ಡ ಜರಿದು ಬಿದ್ದರೆ ವಿದ್ಯುತ್ ಟವರ್ ಧರೆಗೆ ಉರುಳಿದರೆ ಭಾರಿ ಅನಾಹುತವೊಂದು ನಡೆಯುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಗ್ರಾಮದ ಜನ ನಿತ್ಯ ಪ್ರಾಣಭದಲ್ಲೇ ಸಂಚಾರ ನಡೆಸುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭದಿಂದಲೂ ಸಾಲು ಸಾಲು ಸಮಸ್ಯೆಯಾಗುತ್ತಿದೆ. ಇದೀಗ ಗುಡ್ಡ ಜರಿದು ಬಿದ್ದರೆ ವಿದ್ಯುತ್ ಟವರ್ ಧರೆಗೆ ಉರುಳಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಈ ಬಗ್ಗೆ ಕ್ರಮ ಸಂಬಂಧಪಟ್ಟರು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಏನಾದರೂ ಅನಾಹುತ ನಡೆದರೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ.-ಸಾಣೂರು ನರಸಿಂಹ ಕಾಮತ್, ರಾಷ್ಟ್ರೀಯ ಹೆದ್ದಾರಿ ಭೂ ಮಾಲೀಕರ ಹೋರಾಟ ಸಮಿತಿ ಪ್ರಮುಖರು