ನ್ಯೂಸ್

ಮತಕಳ್ಳತನ ಆರೋಪ ; ನಿಗದಿಪಡಿಸಿದ ಸಮಯದಲ್ಲಿಯೇ ಆಕ್ಷೇಪಣೆ ಸಲ್ಲಿಸಬೇಕಿತ್ತು ಎಂದ ಚುನಾವಣಾ ಆಯೋಗ | Election Commission

Election Commission: ಮತದಾರರ ಪಟ್ಟಿಯಲ್ಲಿನ ದೋಷಗಳ ಬಗ್ಗೆ ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳ ಆರೋಪಕ್ಕೆ ಭಾರತೀಯ ಚುನಾವಣಾ ಆಯೋಗ (ECI) ಶನಿವಾರ(ಆಗಸ್ಟ್​ 16) ತಿರುಗೇಟು ನೀಡಿದೆ.

ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಹಕ್ಕು ಮತ್ತು ಆಕ್ಷೇಪಣೆಗಳಿಗೆಂದು ಮೀಸಲಿಟ್ಟ ಸಮಯದಲ್ಲಿ ಈ ಕುರಿತಾದ ಅನುಮಾನಗಳನ್ನು ಪರಿಹರಿಸುವುದನ್ನು ಬಿಟ್ಟು ಈಗ ಅದರ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿತು.

ಮತದಾರರ ಪಟ್ಟಿ ಸಿದ್ಧ ಪಡಿಸುವ ಸಂದಭರ್ದಲ್ಲಿ ನಡೆಯಬಹುದಾದ ಲೋಪದೋಷಗಳನ್ನು ಸರಿ ಮಾಡಲು ಚುನಾವಣೆಗೂ ಮುಂಚೆಯೇ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅವಕಾಶ ನೀಡಿದ್ದು, ತನ್ನ 10 ಅಂಶಗಳ ಹೇಳಿಕೆ ಬಿಡುಗಡೆಗೊಳಿಸಿರುವ ಚುನಾವಣಾ ಆಯೋಗ, ಅಂತಹ ಸಮಸ್ಯೆಗಳನ್ನು ನಿಗದಿತ ಸಮಯದಲ್ಲಿ ಗುರುತಿಸಿದ್ದರೆ ಅವುಗಳನ್ನು ಪರಿಶೀಲಿಸಬಹುದಿತ್ತು ಎಂದು ಸ್ಪಷ್ಟಪಡಿಸಿದೆ.

ಪ್ರತಿ ಹಂತದಲ್ಲೂ ರಾಜಕೀಯ ಪಕ್ಷಗಳು ಭಾಗಿಯಾಗಿದ್ದವು ಎಂಬುದಕ್ಕೆ ಆಯೋಗ ಈಗಾಗಲೇ ದಾಖಲೆಗಳನ್ನು ನೀಡಿದ್ದು, ಅನೇಕ ರಾಜಕೀಯ ಪಕ್ಷಗಳು ಮತ್ತು ಅವುಗಳ ಬೂತ್ ಮಟ್ಟದ ಏಜೆಂಟರು ಸೂಕ್ತ ಸಮಯದಲ್ಲಿ ಕರಡು ಪಟ್ಟಿಗಳನ್ನು ಪರಿಶೀಲಿಸಲು ವಿಫಲರಾಗಿದ್ದಾರೆ ಮತ್ತು ಈ ಕುರಿತಾಗಿ ಯಾವುದೇ ಆಕ್ಷೇಪ ಎತ್ತಲಿಲ್ಲ ಎಂದು ತಿಳಿಸಿದೆ.

ಮತದಾರರ ಪಟ್ಟಿಯಲ್ಲಿರುವ ದೋಷಗಳ ಬಗ್ಗೆ ರಾಜಕೀಯ ಪಕ್ಷಗಳು ಆರೋಪಿಸುತ್ತಿವೆ, ಪಟ್ಟಿಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಅನುಮಾನಗಳನ್ನು ಪರಿಹರಸಿಕೊಳ್ಳಲು ಆಯೋಗ ನೀಡಿದ ಅವಧಿಯೇ ಸೂಕ್ತ ಎಂದು ಚುನಾವಣಾ ಆಯೋಗ ತಿಳಿಸಿದೆ. ವಿಪಕ್ಷಗಳ ಸಮಸ್ಯೆಗಳು ನಿಜವಾಗಿದ್ದರೆ ಅದನ್ನು ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗಗಳ ಮೂಲಕ ಸಂಬಂಧಪಟ್ಟ ಎಸ್‌ಡಿಎಂ ಇಆರ್‌ಒಗಳ ಗಮನಕ್ಕೆ ತಂದಿದ್ದರೆ, ಆ ಚುನಾವಣೆಗಳಿಗೆ ಮೊದಲೇ  ತಪ್ಪುಗಳನ್ನು ಸರಿಪಡಿಸಲು ಸಾಧ್ಯವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದೆ.

ಕರಡು ಮತದಾರರ ಪಟ್ಟಿಯನ್ನು ಡಿಜಿಟಲ್ ಮತ್ತು ಭೌತಿಕ ಸ್ವರೂಪಗಳಲ್ಲಿ ಪ್ರಕಟಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ಸಾರ್ವಜನಿಕ ಅನುಕೂಲಕ್ಕಾಗಿ ಕರಡು ಮತದಾರರ ಪಟ್ಟಿಯನ್ನು ಇಸಿಐ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮಟ್ಟದ ಅಧಿಕಾರಿಗಳಾಗಿರುವ ಚುನಾವಣಾ ನೋಂದಣಿ ಅಧಿಕಾರಿಗಳು (EROs) ಬೂತ್ ಮಟ್ಟದ ಅಧಿಕಾರಿಗಳ (BLOs) ಸಹಾಯದಿಂದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಮತ್ತು ಅಂತಿಮಗೊಳಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ ಎಂದು ಅದು ವಿವರಿಸಿದ್ದು, ಪಟ್ಟಿಗಳ ನಿಖರತೆಯ ಜವಾಬ್ದಾರಿ EROಗಳು ಮತ್ತು BLOಗಳದ್ದು ಎಂದು ಆಯೋಗ ಹೇಳಿದೆ.

ಚುನಾವಣಾ ಆಯೋಗವು ದೆಹಲಿಯಲ್ಲಿ ನಡೆಸಲಿರುವ ಪತ್ರಿಕಾಗೋಷ್ಠಿಗೂ ಮುನ್ನ ಈ ಹೇಳಿಕೆ ಬಂದಿದೆ.  ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಮಾದ್ಯಮಗೋಷ್ಠಿಗೆ ಆಯೋಗ ನಿರ್ಧರಿಸಿದೆ ಎನ್ನುವುದು ಮೂಲಗಳ ಮಾಹಿತಿ.

ಚುನಾವಣಾ ಆಯೋಗದ ವಿರುದ್ಧ ರಾಹುಲ್​ ಆರೋಪ

2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡಿಕೊಡಲು ದೊಡ್ಡ ಪ್ರಮಾಣದಲ್ಲಿ ಮತಕಳ್ಳತನ ನಡೆದಿದ್ದು, ಅವರ ಜೊತೆ ಚುನಾವಣಾ ಆಯೋಗವು ಕೈ ಜೋಡಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.(ಏಜೆನ್ಸೀಸ್)