ಜೀವನೋಪಾಯಕ್ಕಾಗಿ ಎಳನೀರು ಮಾರುತ್ತಿದ್ದ ವೃದ್ಧೆಯ ಗಾಡಿ ಜಪ್ತಿ 
ನ್ಯೂಸ್

Jaipur viral video: ವೃದ್ಧೆಯ ಎಳನೀರು ಗಾಡಿ ಜಪ್ತಿ: ಕೈಮುಗಿದು ಬೇಡಿಕೊಂಡರೂ ಬಿಡದ ಅಧಿಕಾರಿಗಳು

ಜೈಪುರದಲ್ಲಿ ರಸ್ತೆ ತೆರವು ಕಾರ್ಯಾಚರಣೆ ವೇಳೆ ವೃದ್ಧೆಯ ಎಳನೀರು ಗಾಡಿ ಜಪ್ತಿ ಮಾಡಿರುವ ವಿಡಿಯೊ ವೈರಲ್ ಆಗಿದ್ದು, ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Elderly woman's coconut cart seized: ಜೀವನೋಪಾಯಕ್ಕಾಗಿ ರಸ್ತೆ ಬದಿಯಲ್ಲಿ ಎಳನೀರು ಮಾರಿ ಬದುಕು ಸಾಗಿಸುತ್ತಿದ್ದ ವೃದ್ಧೆಯೊಬ್ಬರಿಗೆ ಸಂಕಷ್ಟ ಎದುರಾಗಿದೆ. ರಾಜಸ್ಥಾನದ ಜೈಪುರದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ವೃದ್ಧೆಯ ಎಳನೀರು ಗಾಡಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊ ನೋಡಿದ ಅನೇಕರು ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೈಪುರ ನಗರ ನಿಗಮದ ಅಧಿಕಾರಿಗಳು ರಸ್ತೆ ಬದಿಯ ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಎಳನೀರು ಮಾರುತ್ತಿದ್ದ ವೃದ್ಧೆಯ ಗಾಡಿ ಮತ್ತು ಎಳನೀರುಗಳನ್ನು ವಶಕ್ಕೆ ಪಡೆಯಲಾಗಿದೆ.

ವೃದ್ಧೆ ಕೈಮುಗಿದು ಬೇಡಿಕೊಂಡರು ಕೇಳದ ಅಧಿಕಾರಿಗಳು

ಗಾಡಿ ಮತ್ತು ಎಳನೀರುಗಳನ್ನು ತೆರವುಗೊಳಿಸುವ ವೇಳೆ ಅಲ್ಲಿದ್ದ ಕೆಲವರು ಅವುಗಳನ್ನು ಕಿತ್ತುಕೊಳ್ಳಲು ಮುಗಿಬಿದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೃದ್ಧೆ ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ಎಳನೀರುಗಳನ್ನು ವಾಹನಕ್ಕೆ ಎಸೆಯಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರ ಆಕ್ರೋಶ

ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೃದ್ಧೆಯ ಜೀವನೋಪಾಯದ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ವರದಿಗಾರ ಮನೀಶ್ ಭಟ್ಟಾಚಾರ್ಯ ಸೇರಿದಂತೆ ಅನೇಕ ನಾಗರಿಕರು ಹಾಗೂ ವ್ಯಾಪಾರಿ ಸಂಘಟನೆಗಳು ಜೈಪುರ ನಗರ ನಿಗಮದ ಕ್ರಮವನ್ನು ಖಂಡಿಸಿದ್ದಾರೆ ಎನ್ನಲಾಗಿದೆ.

ಬದುಕಿಗಾಗಿ ಸಣ್ಣ ವ್ಯಾಪಾರ ಮಾಡುತ್ತಿದ್ದ ವೃದ್ಧೆಯೊಂದಿಗೆ ಇಂತಹ ವರ್ತನೆ ತೋರಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಇದನ್ನೂ ಓದಿ: ‘ಜಿಮ್ ಜಿಮ್ ತಾರಾ ಜಿಲೇಬಿ’ ಹಾಡಿನ ಹವಾ ಜೋರು: ಲಕ್ಷ್ಮಿದೇವಿ ಸಾಂಗ್‌ಗೆ ಫುಲ್ ಫಿದಾ ಆದ ನೆಟ್ಟಿಗರು! | Jim Jim Tara Jilebi song

ಸದ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸುವಾಗ ಬೀದಿ ವ್ಯಾಪಾರಿಗಳ ಜೀವನೋಪಾಯ ಮತ್ತು ಮಾನವೀಯತೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.