ನ್ಯೂಸ್

13 ಸಾವಿರಕ್ಕೆ ಖರೀದಿಸಿ 36 ಕೋಟಿ ರೂ.ಗೆ ಮಾರಾಟ! ಅಪರೂಪದ ಮಾಸ್ಕ್​ನ ರೋಚಕ ಕತೆಯಿದು

ನವದೆಹಲಿ: ಕೇವಲ 13 ಸಾವಿರ ರೂಪಾಯಿಗೆ ಖರೀದಿಸಿದ ಮಾಸ್ಕ್​ ಒಂದನ್ನು ಬರೋಬ್ಬರಿ 36 ಕೋಟಿ ರೂಪಾಯಿಗೆ ಹರಾಜು ಹಾಕಿದ ಆರ್ಟ್​ ಡೀಲರ್​ ವಿರುದ್ಧ ಹಿರಿಯ ದಂಪತಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

ಮೇಲ್​ ಆನ್​ಲೈನ್​ ವರದಿಯ ಪ್ರಕಾರ ಮೋಸ ಹೋದ ದಂಪತಿ 80ರ ವಯಸ್ಸಿನವರು. ಇಬ್ಬರು ಫ್ರಾನ್ಸ್​ನ ನಿಮ್ಸ್ ಮೂಲದವರು. 2021ರಲ್ಲಿ ತಮ್ಮ ಮನೆಯನ್ನು ತೆರವುಗೊಳಿಸುವಾಗ 'ಎನ್ಜಿಲ್' ಆಫ್ರಿಕನ್ ಮಾಸ್ಕ್​ ಅನ್ನು ಮಾರಾಟ ಮಾಡಲು ನಿರ್ಧರಿಸಿದರು. ಮಿಸ್ಟರ್​ ಝಡ್​ ಎಂದು ಕರೆಯಲ್ಪಡುವ ಓರ್ವ ಆರ್ಟ್​ ಡೀಲರ್​ಗೆ 129 ಪೌಂಡ್​ (13,208 ರೂಪಾಯಿ)ಗೆ ಮಾರಾಟ ಮಾಡಿದರು. ಆದರೆ, ಇದಾದ ಕೆಲವೇ ತಿಂಗಳುಗಳಲ್ಲಿ ಮಾಂಟ್ಪೆಲ್ಲಿಯರ್​ನಲ್ಲಿ ನಡೆದ ಹರಾಜಿನಲ್ಲಿ ಅಪರೂಪದ ಮಾಸ್ಕ್​ ಅನ್ನು 3.6 ಮಿಲಿಯನ್​ ಪೌಂಡ್ಸ್​ (36,86,17320 ರೂಪಾಯಿ)ಗೆ ಆರ್ಟ್​ ಡೀಲರ್​ ಮಾರಾಟ ಮಾಡಿದ್ದಾನೆ.

ಮಾಸ್ಕ್​ ಇಷ್ಟು ದುಬಾರಿ ಬೆಲೆಗೆ ಮಾರಾಟವಾಗಿರುವ ಬಗ್ಗೆ ದಂಪತಿಗೆ ಆರಂಭದಲ್ಲಿ ಯಾವುದೇ ಅರಿವು ಇರಲಿಲ್ಲ. ಹೀಗೆ ಒಮ್ಮೆ ಪತ್ರಿಕೆ ಓದುವಾಗ ಮಾಸ್ಕ್​ ಬಗ್ಗೆ ದಂಪತಿಗೆ ತಿಳಿದು ಒಂದು ಕ್ಷಣ ದಂಗಾದರು. ಇಷ್ಟೊಂದು ಬೆಲೆ ಬಾಳುತ್ತಾ ಎಂದು ಹುಬ್ಬೇರಿಸಿದರು. ಇದಾದ ಕೂಡಲೇ ಮಿ. ಝಡ್​ ವಿರುದ್ಧ ದಂಪತಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಮಾಸ್ಕ್​ ನಿಜವಾದ ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ ನಮಗೆ ಮೋಸ ಮಾಡಿದ್ದಾರೆ ಎಂದು ದಂಪತಿ ದೂರಿನಲ್ಲಿ ಉಲ್ಲೇಖಸಿದ್ದಾರೆ.

ಮೆಟ್ರೋ ನ್ಯೂಸ್​ ಪ್ರಕಾರ, ಈ ಮಾಸ್ಕ್​ ಅನ್ನು ಮಧ್ಯ ಆಫ್ರಿಕಾದ ಗ್ಯಾಬನ್‌ ದೇಶದ ಫಾಂಗ್ ಜನರಿಂದ ಪಡೆಯಲಾಗಿದೆ. ಇದನ್ನು ಮದುವೆಗಳು ಮತ್ತು ಅಂತ್ಯಕ್ರಿಯೆ ಸಮಯದಲ್ಲಿ ಬಳಸಲಾಗುತ್ತಿತ್ತು. ಇದು ಆಫ್ರಿಕನ್ ದೇಶದ ಹೊರಗೆ ಕಾಣಸಿಗುವ ಅಪರೂಪದ ದೃಶ್ಯವಾಗಿದೆ. ಪ್ರಪಂಚದಾದ್ಯಂತ ಇರುವ ವಸ್ತುಸಂಗ್ರಹಾಲಯಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಕಂಡುಬರುತ್ತವೆ. ಈ ಮಾಸ್ಕ್​ 19ನೇ ಶತಮಾನಕ್ಕೆ ಸಂಬಂಧಿಸಿದ್ದಾಗಿದೆ ಎಂದು ಪರೀಕ್ಷೆಯ ವೇಳೆ ತಿಳಿದುಬಂದಿದೆ. ಈ ಮಾಸ್ಕ್​'ಅಪರೂಪದ ದೃಷ್ಟಿಯಿಂದ ಅಸಾಧಾರಣ' ಎಂದು ನ್ಯಾಯಾಲಯದ ದಾಖಲೆಗಳು ವಿವರಿಸಿದೆ.

ಮಾಧ್ಯಮಗಳ ಪ್ರಕಾರ, ಗಂಡನ ಅಜ್ಜ ಆಫ್ರಿಕಾದಲ್ಲಿ ವಸಾಹತುಶಾಹಿ ಗವರ್ನರ್ ಆಗಿದ್ದರಿಂದ ದಂಪತಿ ಬಳಿಕ ಈ ಅಪರೂಪದ ಮುಖವಾಡ ಇತ್ತು. ಸದ್ಯ ಪ್ರಕರಣ ಕೋರ್ಟ್​ನಲ್ಲಿ ನಡೆಯುತ್ತಿದೆ. ಆದರೆ ನಿಮ್ಸ್‌ನ ನ್ಯಾಯಾಲಯವು ದಂಪತಿಯ ಪ್ರಕರಣವನ್ನು 'ತಾತ್ವಿಕವಾಗಿ ಉತ್ತಮವಾಗಿ ಸ್ಥಾಪಿಸಲಾಗಿದೆ ಎಂದು ತೋರುತ್ತದೆ' ಎಂದು ತೀರ್ಪು ನೀಡಿದೆ. (ಏಜೆನ್ಸೀಸ್​)