ಜೈಪುರ: 52ವರ್ಷ ಆಟೋ ಚಾಲಕನ ಮೇಲೆ ಇಬ್ಬರು ತೀವ್ರ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.
ಆಟೋ ಚಾಲಕನ ಹೆಸರು ಗಪ್ಪರ್ ಅಹ್ಮದ್ ಕಚವಾ. ಇವರ ಬಳಿ ಬಂದ ಇಬ್ಬರು, ಜೈ ಶ್ರೀರಾಮ್, ಮೋದಿ ಜಿಂದಾಬಾದ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ಹಾಗೇ ಹಲ್ಲೆಯನ್ನೂ ನಡೆಸಿದ್ದಾರೆ. ಈ ಬಗ್ಗೆ ಗಪ್ಪರ್ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಇವರಿಬ್ಬರನ್ನೂ ಬಂಧಿಸಿ, ಎಫ್ಐಆರ್ ದಾಖಲು ಮಾಡಿದ್ದಾರೆ.
ಇವರಿಬ್ಬರೂ ತನ್ನ ಬಳಿ ಇದ್ದ ಹಣ ಹಾಗೂ ವಾಚ್ನ್ನು ಕಳವು ಮಾಡಿದ್ದಾರೆ ಎಂದೂ ಆಟೋ ಚಾಲಕ ದೂರಿದ್ದಾರೆ. ಹಳ್ಳಿಯೊಂದಕ್ಕೆ ಹೋಗಿ ಪ್ರಯಾಣಿಕರನ್ನು ಬಿಟ್ಟು ವಾಪಸ್ ಬರುವಾಗ ಘಟನೆ ನಡೆದಿದೆ. ಆಟೋ ಚಾಲಕನ ಹಲ್ಲು ಮುರಿದಿದ್ದು, ಕಣ್ಣು ಊದಿಕೊಂಡಿದೆ. ಕೆನ್ನೆಯ ಮೇಲೆ ಏಟು ಬಿದ್ದ ಗುರುತು ಕಾಣುತ್ತಿದೆ.
ಶುಕ್ರವಾರ ಮುಂಜಾನೆ 4 ಗಂಟೆಯ ಹೊತ್ತಿಗೆ ನನ್ನ ಅಂಕಲ್ ಹಳ್ಳಿಯೊಂದರಿಂದ ವಾಪಸ್ ಬರುತ್ತಿದ್ದರು. ಆಗ ಕಾರಿನಲ್ಲಿ ಬಂದ ಇಬ್ಬರು ಅವರನ್ನು ಅಡ್ಡಗಟ್ಟಿ, ಮೊದಲು ತಂಬಾಕು ಕೊಡುವಂತೆ ಕೇಳಿದ್ದಾರೆ. ನನ್ನ ಅಂಕಲ್ ಕೊಟ್ಟಿದ್ದಾರೆ. ಅದಾದ ಬಳಿಕ ಇಬ್ಬರೂ ಅವರ ಬಳಿ ಜೈ ಶ್ರೀರಾಮ್ ಹೇಳುವಂತೆ ಕೇಳಿದ್ದಾರೆ. ಅಷ್ಟೇ ಅಲ್ಲ, ಮೋದಿ ಜಿಂದಾಬಾದ್ ಎನ್ನುವಂತೆಯೂ ಒತ್ತಾಯಿಸಿದ್ದಾರೆ. ನಂತರ ಹಲ್ಲೆ ನಡೆಸಿದ್ದಾರೆ ಎಂದು ಕಚವಾ ಅವರ ಸಂಬಂಧಿಯೋರ್ವ ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ: ಯುವತಿಯ ಬಣ್ಣದ ಮಾತು ನಂಬಿದ ನಿವೃತ್ತ ವೈದ್ಯರಿಬ್ಬರಿಗೆ ಕಾದಿತ್ತು ಬಿಗ್ ಶಾಕ್!
ನಾನು ಜೈ ಶ್ರೀರಾಮ್ ಹೇಳಲು ನಿರಾಕರಿಸಿದೆ. ಅಷ್ಟೇ ಅಲ್ಲ ಅಲ್ಲಿಂದ ಓಡಲು ಪ್ರಯತ್ನಿಸಿದೆ. ಆಗ ನನ್ನ ಗಡ್ಡವನ್ನು ಹಿಡಿದು ಎಳೆದು, ಒದ್ದಿದ್ದಾರೆ. ಮುಖಕ್ಕೆ ಗುದ್ದಿದ ಪರಿಣಾಮ ನನ್ನ 2-3 ಹಲ್ಲುಗಳು ಮುರಿದಿವೆ. ಕೋಲಿನಿಂದಲೂ ಹೊಡೆದಿದ್ದಾರೆ. ನನ್ನ ಎಡಗಣ್ಣಿಗೆ ತುಂಬ ಏಟಾಗಿದೆ. ನಿನ್ನನ್ನು ಪಾಕಿಸ್ತಾನಕ್ಕೆ ಕಳಿಸದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಗಪ್ಪರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)