ನ್ಯೂಸ್

ರಣರಂಗವಾದ ದಂಡಕಾರಣ್ಯ..ಎನ್​ಕೌಂಟರ್​ನಲ್ಲಿ 8 ಮಾವೋವಾದಿಗಳ ಹತ್ಯೆ!

ರಾಯ್ಪುರ: ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭಾರಿ ಎನ್ ಕೌಂಟರ್ ನಡೆದಿದೆ. ಶನಿವಾರ ಬೆಳಗ್ಗೆ ನಡೆದ ಈ ಎನ್‌ಕೌಂಟರ್‌ನಲ್ಲಿ ಎಂಟು ಮಾವೋವಾದಿಗಳನ್ನು ಹತ್ಯೆಮಾಡಲಾಗಿದೆ. ಒಬ್ಬ ಭದ್ರತಾ ಸಿಬ್ಬಂದಿ ಕೂಡ ಮೃತಪಟ್ಟಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ನಾರಾಯಣಪುರ, ಕಂಕೇರ್, ದಾಂತೇವಾಡ, ಕೊಂಡಗಾಂವ್ ಜಿಲ್ಲೆಗಳ ಭದ್ರತಾ ಪಡೆಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸುತ್ತಿರುವುದು ತಿಳಿದ ಸಂಗತಿಯೇ. ಈ ನಡುವೆ ನಾರಾಯಣಪುರ ಜಿಲ್ಲೆಯ ಅಬುಜ್ಮದ್(ದಂಡಕಾರಣ್ಯ) ಅರಣ್ಯದಲ್ಲಿ ಶನಿವಾರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಎನ್‌ಕೌಂಟರ್ ನಡೆದಿದೆ. ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ದಂಡಕಾರಣ್ಯ ರಣರಂಗವಾಗಿ ಮಾರ್ಪಟ್ಟಿದೆ. ಮಾವೋವಾದಿಗಳನ್ನು ಗುರಿಯಾಗಿಸಲು ಭದ್ರತಾ ಪಡೆಗಳು ಕಗರ್ ಕಾರ್ಯಾಚರಣೆ ನಡೆಸುತ್ತಿವೆ. ಅಬುಜಮುದ್ ಅರಣ್ಯವನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ಜನವರಿಯಿಂದ ಶೋಧ ನಡೆಸುತ್ತಿವೆ. ಏಪ್ರಿಲ್ 16 ರಂದು ಕಂಕೇರ್ ಎನ್‌ಕೌಂಟರ್‌ನಲ್ಲಿ 29 ಮಾವೋವಾದಿಗಳು ಹತ್ಯೆಯಾಗಿದ್ದರು. ನಂತರ ನಡೆದ ಕೊರ್ಚೋಲಿ ಎನ್‌ಕೌಂಟರ್‌ನಲ್ಲಿ 13 ಜನರು ಪ್ರಾಣ ಕಳೆದುಕೊಂಡರು. ಮೇ 11 ರಂದು ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 12 ಮಾವೋವಾದಿಗಳು ಕೊಲ್ಲಲ್ಪಟ್ಟಿದ್ದರು. ನಾರಾಯಣಪುರ ಎನ್‌ಕೌಂಟರ್‌ನಲ್ಲಿ 10 ಜನರು ಸಾವನ್ನಪ್ಪಿದ್ದರೆ, ನಾರಾಯಣಪುರ ಜಿಲ್ಲೆಯಲ್ಲಿ ಶನಿವಾರ(ಜೂ.15) ನಡೆದ ಎನ್‌ಕೌಂಟರ್‌ನಲ್ಲಿ 8 ಜನರು ಸಾವನ್ನಪ್ಪಿದ್ದಾರೆ.

ಭಾರೀ ಪ್ರಾಣಹಾನಿ:

ಸರಣಿ ಎನ್‌ಕೌಂಟರ್‌ಗಳಿಂದ ಮಾವೋವಾದಿಗಳು ಭಾರಿ ಕಷ್ಟನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿಯೇ ಅವರು ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಮಾವೋವಾದಿಗಳ ಕಾರಣದಿಂದ ಬುಡಕಟ್ಟು ಜನ ವಾಸಿಸುವ ಪ್ರದೇಶಗಳ ಮೇಲೆ ಹೆಲಿಕಾಪ್ಟರ್ ಮತ್ತು ಡ್ರೋನ್‌ಗಳ ಮೂಲಕ ಬಾಂಬ್ ದಾಳಿ ನಡೆಸಲಾಗುತ್ತಿದೆ ಎಂದು ಮಾವೋವಾದಿಗಳು ಆರೋಪಿಸಿದ್ದಾರೆ. ಈ ಕುರಿತು ಪತ್ರ ಬಿಡುಗಡೆ ಮಾಡಲಾಗಿದೆ. ಮತ್ತೊಂದೆಡೆ, ಛತ್ತೀಸ್‌ಗಢ ದಂಡಕಾರಣ್ಯದಲ್ಲಿ ಕೇಂದ್ರ ಸರ್ಕಾರ ನರಮೇಧ ನಡೆಸುತ್ತಿದೆ ಎಂದು ನಾಗರಿಕ ಹಕ್ಕುಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.