ಕರೊನಾದ ಭಾರಿ ಪೆಟ್ಟು ರಾಷ್ಟ್ರೀಯ ಅರ್ಥವ್ಯವಸ್ಥೆಗೆ ಬಿದ್ದಿರುವಂತೆಯೇ, ರಾಜ್ಯದ ಆರ್ಥಿಕತೆಯೂ ನಲುಗಿದೆ. ಈಗಷ್ಟೇ ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಾಣುತ್ತಿದ್ದರೂ, ಎರಡು ತಿಂಗಳಿಗೂ ಅಧಿಕ ಕಾಲದ ಲಾಕ್ಡೌನ್ನಿಂದ ಆದ ಹಾನಿಯ ಪ್ರಮಾಣ ತೀವ್ರವಾದದ್ದು. ಅಲ್ಲದೆ, ಲಾಕ್ಡೌನ್ ಹೊತ್ತಲ್ಲಿ ಅಗತ್ಯ ವಲಯಗಳಿಗೆ ತುರ್ತು ನೆರವನ್ನು ಘೋಷಿಸಿದ್ದು, ಅದರ ಬೆನ್ನಲ್ಲೇ ನೆರೆ ಮತ್ತಷ್ಟು ಹಾನಿಯನ್ನು ಸೃಷ್ಟಿಸಿದ್ದು-ಆರ್ಥಿಕ ಪರಿಸ್ಥಿತಿಯನ್ನು ಶೋಚನೀಯವಾಗಿಸಿದೆ. ಜಿಎಸ್ಟಿ ಅನುಷ್ಠಾನದಿಂದ ಉಂಟಾಗಿರುವ ಆದಾಯ ಕೊರತೆಯೂ ಈಗಿನ ಸ್ಥಿತಿಗೆ ಪ್ರಮುಖ ಕಾರಣ. ಅಷ್ಟಕ್ಕೂ, ಕರೊನಾ ಸೋಂಕಿನ ಹಾವಳಿ ಅಂತ್ಯಗೊಂಡಿಲ್ಲ. ಕರೊನಾದ ಜತೆಗೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಯಲ್ಲಿ ಜನಜೀವನ ಸಹಜತೆಗೆ ಮರಳುತ್ತಿದೆ. ಹೀಗಾಗಿ ಆರ್ಥಿಕತೆ ಹಳಿಗೆ ಬರಲು ಇನ್ನೂ ಕೆಲ ತಿಂಗಳಾದರೂ ಬೇಕು ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ರಾಜ್ಯದ ಬೊಕ್ಕಸ ಬರಿದಾಗುತ್ತಿದೆ. ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡಲು ಪರದಾಡುವಂಥ ಸ್ಥಿತಿ ಸೃಷ್ಟಿಯಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಗ್ರಹಣ ಹಿಡಿದಿದ್ದರೆ, ಅನುದಾನದ ಕೊರತೆ ಎಲ್ಲ ಇಲಾಖೆಗಳಿಗೂ ಬಾಧಿಸುತ್ತಿದೆ. ಇದನ್ನೂ ಓದಿ: ಅಲಿಬಾಬಾ ಸರ್ವರ್‌ಗಳಿಂದ ಭಾರತೀಯ ಡೇಟಾ ಕಳವು, ಚೀನಾಕ್ಕೆ ರವಾನೆ!
ಪರಿಹಾರದ ಹಾದಿಯನ್ನು ಶೋಧಿಸುತ್ತಿರುವ ರಾಜ್ಯ ಸರ್ಕಾರ ಜಿಎಸ್ಟಿ ಅನುಷ್ಠಾನದಿಂದ ಉಂಟಾಗಿರುವ ಕೊರತೆ ನೀಗಿಸಿಕೊಳ್ಳಲು ಸಾಲ ಮಾಡುವ ಆಯ್ಕೆಯನ್ನು ಆದ್ಯತೆಯಾಗಿ ಪರಿಗಣಿಸಿದೆ. 33 ಸಾವಿರ ಕೋಟಿ ಸಾಲ ಪಡೆಯುವ ಸಂಬಂಧ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದ ಒಟ್ಟು ಉತ್ಪನ್ನದ(ಜಿಎಸ್ಡಿಪಿ) ಶೇಕಡ 2ರಷ್ಟು ಅಂದರೆ 36 ಸಾವಿರ ಕೋಟಿ ಹೆಚ್ಚುವರಿ ಸಾಲ ಯಾವುದೇ ಷರತ್ತಿಗೆ ಒಳಪಡದೇ ಪಡೆಯಲು ಸಾಧ್ಯ. ಅದರ ಆಧಾರದ ಮೇಲೆ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ 33 ಸಾವಿರ ಕೋಟಿ ರೂ. ಸಾಲ ಪಡೆಯಲಾಗುತ್ತಿದೆ. ರಾಜ್ಯಕ್ಕೆ ಜಿಎಸ್ಟಿ ಪರಿಹಾರವಾಗಿ 11 ಸಾವಿರ ಕೋಟಿ ರೂ. ಬರಬೇಕಿದೆ. ಸದ್ಯದ ಅವಧಿಯಲ್ಲಿ ಕೇಂದ್ರವೂ ಅಸಹಾಯಕವಾಗಿದ್ದು, ಸಾಲ ಮಾಡುವುದು ರಾಜ್ಯದ ಪಾಲಿಗೆ ಅನಿವಾರ್ಯವಾಗಿ ಪರಿಣಮಿಸಿದೆ.
ರಾಜಸ್ವ ಸಂಗ್ರಹದಲ್ಲಿ ಕ್ರಮೇಣ ಚೇತರಿಕೆ ಕಾಣಬಹುದು. ಆದರೆ, ಈ ಸಾಲದ ಮೊತ್ತ ಸದ್ವಿನಿಯೋಗವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಮುಖ್ಯವಾಗಿ, ಕರೊನಾ ಬಿಕ್ಕಟ್ಟನ್ನೂ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆ ಕುರಿತಾಗಿ ಕೆಲ ಕ್ರಮಗಳನ್ನೂ ಕೈಗೊಂಡಿದ್ದಾರೆ. ಅದರಂತೆ, ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಉತ್ಪಾದನಾ ವಲಯವನ್ನು ಬಲಪಡಿಸಲಾಗುತ್ತಿದೆ. ರಾಜ್ಯವೂ ಇಂಥ ಅವಕಾಶಗಳನ್ನು ಗಮನಿಸಿ, ಸದ್ಬಳಕೆ ಮಾಡಿಕೊಳ್ಳಬೇಕು. ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕು. ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ತರಲು ಸೂಕ್ತ ನೀಲಿನಕ್ಷೆ ಹಾಕಿಕೊಂಡು, ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಈ ಸಂಕಷ್ಟದ ದಿನಗಳಿಂದ ರಾಜ್ಯ ಆದಷ್ಟು ಬೇಗ ಹೊರಬರಬಹುದು. ಅಂಥ ಪ್ರಬಲ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಲಿ. ಕೇಂದ್ರ ಕೂಡ ಜಿಎಸ್ಟಿ ಪರಿಹಾರ ಬಿಡುಗಡೆಗೆ ಮನಸ್ಸು ಮಾಡಲಿ.