ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಗಣನೀಯ ಸುಧಾರಣೆ ಮಾಡಲಾಗಿದೆ. ಹಲವು ಮಾರ್ಗಗಳಲಿ ್ಲ ಹೊಸ ರೈಲುಗಳ ಸಂಚಾರ ಆರಂಭಿಸಲಾಗಿದ್ದು, ಪ್ರಯಾಣದ ಅವಧಿ ಕಡಿಮೆ ಮಾಡಲು ವಂದೇ ಮಾತರಂ ಸೇರಿದಂತೆ ಹಲವು ರೈಲುಗಳನ್ನೂ ಪರಿಚಯಿಸಲಾಗಿದೆ. ಮುಂದಿನ ವರ್ಷದಿಂದ ವಂದೇ ಮಾತರಂ ರೈಲಿನಲ್ಲಿ ಸ್ಲೀಪರ್ ಕೋಚ್ ಕೂಡ ಆರಂಭಿಸುವ ಉದ್ದೇಶ ಹೊಂದಿರುವುದು ಒಳ್ಳೆಯ ಬೆಳವಣಿಗೆ. ಆದರೆ ರೈಲ್ವೆ ಇಲಾಖೆ ಆರ್ಥಿಕ ಸ್ಥಿತಿವಂತರು ಮಾತ್ರ ಪ್ರಯಾಣಿಸಬಹುದಾದ ರೈಲುಗಳ ಸುಧಾರಣೆಯೊಂದಿಗೆ ಜನಸಾಮಾನ್ಯರು ಪ್ರಯಾಣಿಸುವ ರೈಲುಗಳ ಕಡೆಗೂ ಗಮನ ಹರಿಸಬೇಕಿದೆ. ರೈಲ್ವೆ ಜಾಲ ವಿಸ್ತರಣೆ, ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಸೇರಿದಂತೆ ಇಲಾಖೆಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಬೇಕಿದೆ.
ಹಲವು ಮಾರ್ಗಗಳಲ್ಲಿ ಇಂಟರ್ಸಿಟಿ, ಜನಶತಾಬ್ಧಿ ರೈಲುಗಳ ಸಂಚಾರ ಆರಂಭಿಸಲಾಗಿದೆ. ಈ ರೈಲುಗಳ ಪಟ್ಟಿಗೆ ವಂದೇ ಮಾತರಂ ರೈಲುಗಳು ಸೇರ್ಪಡೆಯಾಗಿವೆ. ಈ ರೈಲುಗಳ ಸಂಚಾರದಿಂದ ತುಂಬಾ ಅನುಕೂಲವಾಗಿದೆ. ಆದರೆ ಈ ಅನುಕೂಲತೆ ಮೇಲ್ಮಧ್ಯಮ ವರ್ಗ ಮತ್ತು ಆರ್ಥಿಕ ಸ್ಥಿತಿವಂತರಿಗೆ ಮಾತ್ರ ಸಿಕ್ಕಿದೆ. ಜನಸಾಮಾನ್ಯರಿಗೆ ಇನ್ನೂ ಸುಧಾರಿತ ರೈಲ್ವೆ ಸೌಲಭ್ಯಗಳು ತಲುಪಿಲ್ಲ.
ಎಕ್ಸ್ಪ್ರೆಸ್ ರೈಲುಗಳನ್ನು ಹೊರತು ಪಡಿಸಿದರೆ ಪ್ಯಾಸೆಂಜರ್ ರೈಲುಗಳು ಸೇರಿ ಇತರ ಹಲವು ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸುತ್ತಿಲ್ಲ. ಎರಡು ಮೂರು ತಾಸು ವಿಳಂಬ ಸಾಮಾನ್ಯ ಎನ್ನುವಂತಾಗಿದೆ. ಈ ರೈಲುಗಳಲ್ಲಿ ಸ್ವಚ್ಛತೆಯೂ ಅಷ್ಟಕ್ಕಷ್ಟೆ ಎನ್ನುವಂತಿದೆ. ಜನಸಾಮಾನ್ಯರು ಕಡಿಮೆ ಪ್ರಯಾಣ ದರ ಇರುವ ಪ್ಯಾಸೆಂಜರ್ ರೈಲುಗಳ ಮೇಲೆ ಅವಲಂಬಿತವಾಗಿರುತ್ತಾರೆ. ಈ ರೈಲುಗಳು ಸಾಮಾನ್ಯವಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಸಂಚರಿಸುವುದಿಲ್ಲ. ಕ್ರಾಸಿಂಗ್ ಸೇರಿದಂತೆ ಹಲವು ಕಾರಣಗಳಿಂದ ಈ ರೀತಿ ವಿಳಂಬವಾಗುತ್ತಿರಬಹುದು. ಇಂತಹ ಸಾಮಾನ್ಯ ರೈಲುಗಳ ವ್ಯವಸ್ಥೆಯನ್ನೂ ಸುಧಾರಣೆ ಮಾಡುವ ಕಡೆ ರೈಲ್ವೆ ಇಲಾಖೆ ಗಮನ ಹರಿಸುವ ಅಗತ್ಯವಿದೆ. ಕೆಲವೆಡೆ ಕೈಗೊಂಡಿರುವ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೆ ವಿಳಂಬ ಸಂಚಾರದ ಸಮಸ್ಯೆಗೆ ಪರಿಹಾರ ಸಿಗಬಹುದು. ಹೀಗಾಗಿ ಇಂಥ ಕಾಮಗಾರಿಗಳಿಗೆ ವೇಗ ನೀಡಬೇಕು.
ಮಹಾನಗರಗಳ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿದಂತೆ ಇತರ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಕಡೆ ಗಮನಹರಿಸಬೇಕು. ರಾಜ್ಯದ ಹಲವು ಜಿಲ್ಲಾ ಕೇಂದ್ರಗಳ ರೈಲ್ವೆ ನಿಲ್ದಾಣಗಳಲ್ಲೇ ವಾಹನಗಳ ರ್ಪಾಂಗ್ ವ್ಯವಸ್ಥೆ ಇಲ್ಲ. ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಮೀಸಲಿರುವ ಕೊಠಡಿಗಳು ಅವ್ಯವಸ್ಥೆಯಿಂದ ಕೂಡಿವೆ. ವ್ಯವಸ್ಥಿತ ಶೌಚಗೃಹಗಳು ಇಲ್ಲ. ಇಂತಹ ಲೋಪಗಳನ್ನು ಗಂಭೀರವಾಗಿ ಪರಿಗಣಿಸಿ ಸರಿಪಡಿಸುವ ಕಡೆ ಗಮನಹರಿಸಬೇಕು.
ರೈಲ್ವೆ ಜಾಲ ವಿಸ್ತರಣೆ ಮತ್ತು ಸವಲತ್ತು ಹೆಚ್ಚಳದಿಂದ ರಸ್ತೆ ಮೇಲಿನ ಒತ್ತಡ ಕಡಿಮೆಯಾಗಲಿದೆ. ಸಹಜವಾಗಿ ರಸ್ತೆ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಲಿದೆ. ಹೀಗಾಗಿ ಘೋಷಿತ ನೂತನ ರೈಲ್ವೆ ಮಾರ್ಗಗಳನ್ನೂ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಿದೆ.