ನ್ಯೂಸ್

ಕೇಂದ್ರ, ರಾಜ್ಯ ಸರ್ಕಾರಗಳಿಗೆ ಆರಂಭಿಕ ಯಶಸ್ಸು

ಅಭಿವೃದ್ಧಿಯ ವೇಗಕ್ಕೂ ಕೈಗಾರಿಕೆಗಳಿಗೂ ಅವಿನಾಭಾವ ನಂಟು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಉದ್ಯೋಗಸೃಷ್ಟಿ, ಆರ್ಥಿಕತೆಯ ಚೇತರಿಕೆಯಲ್ಲಿ ಉದ್ಯಮಗಳ ಪಾತ್ರ ಮಹತ್ವದ್ದು ಎಂಬುದು ಗೊತ್ತಿರುವಂಥದ್ದೇ. ಹಾಗಾಗಿಯೇ, ‘ಬಂಡವಾಳಸ್ನೇಹಿ’ ವಾತಾವರಣ ಸ್ಥಾಪನೆಗೆ ಸರ್ಕಾರಗಳು ಹಲವು ಬಗೆಯ ಯತ್ನ ಮಾಡುತ್ತವೆ. ಕರೊನಾ ಸೋಂಕಿನ ಹಾವಳಿ ಮತ್ತು ಅದನ್ನು ನಿಯಂತ್ರಿಸಲು ವಿಧಿಸಲಾದ ಲಾಕ್​ಡೌನ್​ನಿಂದ ಕೈಗಾರಿಕಾ ವಲಯ ಭಾರಿ ನಷ್ಟ ಅನುಭವಿಸಿದ್ದು, ಅದರಿಂದ ಹಲವು ವ್ಯತಿರಿಕ್ತ ಪರಿಣಾಮಗಳು ಉಂಟಾಗಿವೆ. ಕರೊನಾ ಸೋಂಕು ಮೊದಲು ಕಾಣಿಸಿಕೊಂಡ ಚೀನಾದ ಬಗ್ಗೆ ಜಾಗತಿಕ ವಲಯದಲ್ಲಿ ಒಂದು ಬಗೆಯ ಅವಿಶ್ವಾಸ ಮೂಡಿದೆ. ಹಲವು ಬಹುರಾಷ್ಟ್ರೀಯ ಕಂಪನಿಗಳು ಚೀನಾ ಬಿಡಲು ತುದಿಗಾಲಲ್ಲಿ ನಿಂತಿವೆ. ಮತ್ತೊಂದೆಡೆ ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರವೂ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆಯೂ ಇದೆ. ಈ ಎಲ್ಲ ಸಮಸ್ಯೆ, ಸವಾಲುಗಳನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಆರಂಭಿಕ ಯಶಸ್ಸು ಸಿಗುತ್ತಿರುವುದು, ಸಕಾರಾತ್ಮಕ ಬೆಳವಣಿಗೆ.

ಭಾರತದಲ್ಲಿ ಹೂಡಿಕೆ ಮಾಡಲು ಸ್ಯಾಮ್ಂಗ್, ಆಪಲ್ ಸಹಿತ ಹಲವು ಜಾಗತಿಕ ಕಂಪನಿಗಳು ಆಸಕ್ತಿ ತೋರಿವೆ. ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಘಟಕ ಸ್ಥಾಪಿಸುವ ಕಂಪನಿಗಳಿಗೆ ಪ್ರೋತ್ಸಾಹ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಘೋಷಿಸಿದ್ದರು. ಅಲ್ಲದೆ, ತೆರಿಗೆ ವಿನಾಯಿತಿ ಸಹಿತ ಹಲವು ಕ್ರಮಗಳನ್ನೂ ಸರ್ಕಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಅಟೋಮೊಬೈಲ್, ಔಷಧ, ಜವಳಿ, ಆಹಾರ ಸಂಸ್ಕರಣಾ ಸೇರಿ ವಿವಿಧ ಕ್ಷೇತ್ರದ ಜಾಗತಿಕ ಕಂಪನಿಗಳು ಭಾರತದತ್ತ ಮುಖಮಾಡಿರುವುದು, ಉದ್ಯಮ ವಲಯದಲ್ಲಿ ಆಶಾವಾದ ಮೂಡಿಸಿದೆ. ಪ್ರಸಕ್ತ 12ಕ್ಕೂ ಹೆಚ್ಚು ಕಂಪನಿಗಳು ಹೂಡಿಕೆಗೆ ಮುಂದೆ ಬಂದಿರುವುದರಿಂದ, 11 ಸಾವಿರ ಕೋಟಿ ರೂ. ಹೂಡಿಕೆಯಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಈ ಕಂಪನಿಗಳ ಘಟಕಗಳು ಕಾರ್ಯಾರಂಭ ಮಾಡಲಿವೆ. ಕರೊನಾ ಬಳಿಕದ ನಿರಾಶಾದಾಯಕ ಪರಿಸ್ಥಿತಿಯನ್ನು ಹೊಗಲಾಡಿಸಲು, ಆರ್ಥಿಕ ಚಟುವಟಿಕೆಗಳು ವೇಗ ಪಡೆಯಲು ಇಂಥ ಕ್ರಮಗಳು ಪೂರಕವಾಗಿ ಪರಿಣಮಿಸಲಿವೆ. ಇದನ್ನೂ ಓದಿ: ಸಂಪಾದಕೀಯ- ಶಾಂತಿ ಕದಡುವುದು ಬೇಡ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ

ಕರ್ನಾಟಕದಲ್ಲಿ ಕೂಡ ಕೈಗಾರಿಕಾ ನೀತಿಗೆ ಬಲ ತುಂಬಲಾಗಿದ್ದು, ಉದ್ಯಮ ಸ್ಥಾಪನೆ ನಿಟ್ಟಿನಲ್ಲಿನ ತೊಡಕುಗಳನ್ನು ನಿವಾರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕೈಗಾರಿಕಾ ಅಭಿವೃದ್ಧಿಯಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕರ್ನಾಟಕ, ಈ ಸ್ಥಾನವನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳಲು ಮುಂದಾಗಿದೆ. ಆದರೆ, ವ್ಯವಸ್ಥೆಯ ಜಡತ್ವದಿಂದ ಸಣ್ಣ ಸಮಸ್ಯೆಗಳೂ ಪರಿಹಾರ ಕಾಣಲು ದೀರ್ಘ ಸಮಯ ತೆಗೆದುಕೊಳ್ಳುತ್ತಿವೆ. ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಲು ಸ್ಥಳೀಯ ಮಟ್ಟದಲ್ಲಿ ಕೈಗಾರಿಕಾ ಅದಾಲತ್ ಆರಂಭಿಸುತ್ತಿರುವುದು ಸೂಕ್ತವಾಗಿಯೇ ಇದೆ. ಬಹುತೇಕ ಬೆಂಗಳೂರಿಗೆ ಸೀಮಿತವಾಗಿರುವ ಕೈಗಾರಿಕೆಗಳನ್ನು, ಎರಡನೇ ಹಂತದ ನಗರಗಳಿಗೂ ವಿಸ್ತರಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಒಟ್ಟಾರೆ, ಹೂಡಿಕೆ ಹೆಚ್ಚಾಗಿ, ಕೈಗಾರಿಕಾ ಘಟಕಗಳ ಆರಂಭ ಆರ್ಥಿಕತೆಗೆ ಹೊಸ ಚೈತನ್ಯ ತುಂಬುವಂತಾಗಬೇಕು.