ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅನೌಪಚಾರಿಕವಾಗಿ ಚರ್ಚೆಯಾಗಿ, ಹೊಸ ಜಿಲ್ಲೆ ರಚನೆಗೆ ತಾತ್ವಿಕ ಒಪ್ಪಿಗೆ ನೀಡಲಾಯಿತು. ಮುಂದಿನ ಸಂಪುಟ ಸಭೆಯಲ್ಲಿ ತೀರ್ವನಿಸಿ ಅಧಿಕೃತ ಪ್ರಕಟಣೆ ಹೊರಬೀಳಬೇಕಷ್ಟೆ. ಯಾವ ಜಿಲ್ಲೆಗೆ ಯಾವ ತಾಲೂಕುಗಳು ಸೇರಬೇಕು ಎಂಬುದರ ಬಗ್ಗೆಯೂ ಸ್ಥೂಲವಾಗಿ ನಿರ್ಣಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ. ಇದರೊಂದಿಗೆ ಕರ್ನಾಟಕ 31 ಜಿಲ್ಲೆಗಳನ್ನು ಹೊಂದಿದ ರಾಜ್ಯವಾಗಲಿದೆ. ಈ ನಡುವೆ, ಹೊಸ ಜಿಲ್ಲೆ ಸೃಷ್ಟಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ನೂತನ ಜಿಲ್ಲೆ ರಚಿಸಿದ ಮಾತ್ರಕ್ಕೆ ಪ್ರಯೋಜನವಿಲ್ಲ; ಇರುವ ಜಿಲ್ಲೆಗೇ ಹೆಚ್ಚು ಸವಲತ್ತು ಕೊಡಿ, ಅಭಿವೃದ್ಧಿ ಮಾಡಿ ಎಂದು ಕೆಲವರು ವಾದಿಸುತ್ತಿದ್ದಾರೆ. ರಾಜಕೀಯ ನಾಯಕರು ಮತ್ತು ಬೇರೆ ಬೇರೆ ಸ್ತರದ ಜನಪ್ರತಿನಿಧಿಗಳು ಸಹ ಭಿನ್ನ ಅನಿಸಿಕೆಗಳನ್ನು ಹೊರಹಾಕುತ್ತಿದ್ದಾರೆ. ಯಾವುದೇ ವಿಷಯವಿರಲಿ, ಪ್ರಜಾಪ್ರಭುತ್ವದಲ್ಲಿ ಇಂಥ ಅಭಿಪ್ರಾಯಭೇದಗಳು ಸಾಮಾನ್ಯವೇ. ಜನಪ್ರತಿನಿಧಿಗಳು ಇಂಥ ಸನ್ನಿವೇಶದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಲು ಅಥವಾ ರಾಜಕೀಯಗೊಳ್ಳುವದಕ್ಕೆ ಆಸ್ಪದ ಕೊಡದೆ ಸಮಚಿತ್ತದ ನಿಲುವು ಪ್ರದರ್ಶಿಸಬೇಕಾಗುತ್ತದೆ. ಭೌಗೋಳಿಕವಾಗಿ ದೊಡ್ಡ ಪ್ರದೇಶಗಳಿದ್ದರೆ ಆಡಳಿತಾತ್ಮಕವಾಗಿ ಕಷ್ಟ ಎಂಬುದು ಒಪ್ಪತಕ್ಕ ವಿಷಯವೇ.
ಹೀಗಾಗಿಯೇ, ಸ್ವಾತಂತ್ರ್ಯ ನಂತರದಲ್ಲಿ ಭಾಷಾವಾರು ಪ್ರಾಂತಗಳನ್ನು ರಚಿಸಿದ ಮೇಲೂ, ತರುವಾಯದ ವರ್ಷಗಳಲ್ಲಿ ದೊಡ್ಡ ರಾಜ್ಯಗಳನ್ನು ವಿಭಜಿಸಿದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಸರ್ಕಾರದ ಸವಲತ್ತುಗಳು ಮತ್ತು ಅವಕಾಶಗಳು ಎಲ್ಲರಿಗೂ ದೊರೆಯಬೇಕು ಎಂಬುದು ನಿಜ. ಆದರೆ ಪ್ರಾದೇಶಿಕ, ಭೌಗೋಳಿಕ ಭಿನ್ನತೆ ಅಥವಾ ಬೇರೆ ಯಾವುದೋ ಕಾರಣದಿಂದ ಇದು ಎಲ್ಲ ಸಂದರ್ಭಗಳಲ್ಲಿಯೂ ಸಾಕಾರವಾಗುವುದಿಲ್ಲ. ಆಗ ಸಹಜವಾಗಿ ಆಯಾ ಭಾಗದ ಜನರಿಂದ ಬೇಡಿಕೆಗಳು, ಆಗ್ರಹಗಳು ಹೊರಹೊಮ್ಮುತ್ತವೆ. ಆಳುವವರು ಈ ಬೇಡಿಕೆಗೆ ಕಿವಿಯಾಗದಿದ್ದಾಗ ಎಷ್ಟೋ ಸಲ ಇಂಥ ಆಗ್ರಹ ಹಿಂಸೆಗೆ ತಿರುಗಿದ ನಿದರ್ಶನವೂ ನಮ್ಮ ಮುಂದಿದೆ.
ಇದೇನೇ ಇದ್ದರೂ, ಹೊಸ ಜಿಲ್ಲೆ ಅಥವಾ ತಾಲೂಕು ರಚನೆ ಘೋಷಣೆ ಮಾಡಿದ ಮಾತ್ರಕ್ಕೆ ಎಲ್ಲವೂ ಮುಗಿಯಿತು ಎಂದಲ್ಲ. ವಾಸ್ತವವಾಗಿ ಅದು ಆರಂಭ ಮಾತ್ರ. ಏಕೆಂದರೆ, ಇವತ್ತಿನ ಕಾಲದಲ್ಲಿ ಯಾವುದೇ ಹೊಸ ವ್ಯವಸ್ಥೆ ಸೃಜಿಸಲು ಅಪಾರ ಹಣಕಾಸು ಮತ್ತು ಮಾನವ ಸಂಪನ್ಮೂಲದ ಬಲ ಬೇಕಾಗುತ್ತದೆ. ಉದಾಹರಣೆಗೆ ನೋಡುವುದಾದರೆ- ಸರ್ಕಾರ ಈ ಹಿಂದೆ ಹಲವು ಹೊಸ ತಾಲೂಕುಗಳ ಘೋಷಣೆ ಮಾಡಿತ್ತಾದರೂ ಕಾಲಮಿತಿಯಲ್ಲಿ ಅಲ್ಲಿಗೆ ಎಲ್ಲ ಸವಲತ್ತುಗಳನ್ನು ಕಲ್ಪಿಸಲು ಆಗಿರಲಿಲ್ಲ. ಹೀಗಾದಲ್ಲಿ ಉದ್ದೇಶ ಈಡೇರದು. ಜನರಿಗೂ ಭ್ರಮನಿರಸನವಾಗುತ್ತದೆ. ಆದ್ದರಿಂದ ಹೊಸ ಘೋಷಣೆಗಳ ಜತೆಗೆ ಅವನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಮುಖ್ಯವಾಗುತ್ತದೆ. ಅದರಲ್ಲೂ, ಈಗಂತೂ ಕರೊನಾ ಕಾರಣಕ್ಕಾಗಿ ರಾಜ್ಯದ ಆರ್ಥಿಕ ಸ್ಥಿತಿ ಏರುಪೇರು ಆಗಿದೆ; ದೊಡ್ಡ ಮೊತ್ತದ ಹಣ ಅಪೇಕ್ಷಿಸುವ ಹೊಸ ಯೋಜನೆಗಳ ಘೋಷಣೆಗೆ ಬ್ರೇಕ್ ಬಿದ್ದಿದೆ. ಇಂಥ ಸನ್ನಿವೇಶದಲ್ಲಿ, ಸರ್ಕಾರ ವಿರೋಧದ ದನಿಗಳನ್ನು ಹೇಗೆ ಮನವೊಲಿಸುತ್ತದೆ ಎಂಬುದರ ಜತೆಗೆ ಹೇಗೆ ಹಣ ಹೊಂದಿಸುತ್ತದೆ ಎಂಬುದು ಸಹ ಮುಖ್ಯವಾಗುತ್ತದೆ.