ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ, ಪರಿಹಾರ ಒದಗಿಸುವುದು ಪ್ರಭುತ್ವದ ಕರ್ತವ್ಯವೇ ಹೌದು. ಎಷ್ಟೋ ಬಾರಿ ಜನರು ತಮ್ಮದಲ್ಲದ ತಪ್ಪಿಗೆ ಹಲವು ವರ್ಷಗಳ ಕಾಲ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ. ಸರ್ಕಾರ ಎಷ್ಟು ಬಾರಿ ಎಚ್ಚರಿಕೆ ಕೊಟ್ಟರೂ, ಸ್ಥಳೀಯ ಆಡಳಿತಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ, ಸ್ಥಳೀಯವಾಗಿ ಪರಿಹಾರವಾಗಬಹುದಾದ ಸಮಸ್ಯೆಗಳನ್ನು ಹೊತ್ತುಕೊಂಡು ಜನರು ರಾಜಧಾನಿ ಬೆಂಗಳೂರಿನವರೆಗೆ ಬರುವಂತಾಗುತ್ತದೆ. ಮುಖ್ಯಮಂತ್ರಿಗಳು ನಡೆಸುವ ಜನತಾ ದರ್ಶನದ ವೇಳೆ ಇಂಥ ನಿದರ್ಶನಗಳು ಪ್ರತಿ ಬಾರಿಯೂ ಕಂಡುಬರುತ್ತವೆ. ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮಸ್ಯೆಗಳೇ ಹೆಚ್ಚಾಗಿ ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲಾಧಿಕಾರಿಗಳು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಬೇಕೆಂಬ ಸೂಚನೆಯೇನೋ ಇದೆ; ಅದಿನ್ನೂ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕಿದೆ.
ಈ ನಡುವೆ, ರಾಜ್ಯಾದ್ಯಂತ ಕಂದಾಯ ಅದಾಲತ್ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಕಂದಾಯ ಅದಾಲತ್ ನಡೆಸಿದಾಗ, ಅದಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿತ್ತಲ್ಲದೆ, ಜನರ ಸಾಕಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿತ್ತು, ವರ್ಷಗಳಿಂದ ಇತ್ಯರ್ಥ ಕಾಣದ ವಿವಾದಗಳು ಕೂಡ ಸುಖಾಂತ್ಯ ಕಂಡಿದ್ದವು ಎಂಬುದು ಗಮನಾರ್ಹ. ಕಂದಾಯ ಇಲಾಖೆಗೆ ಸಂಬಂಧಿಸಿ ಈಗಲೂ ಸಾಕಷ್ಟು ಸಮಸ್ಯೆಗಳಿದ್ದು, ಜನರು ದೂರನ್ನು ಹೊತ್ತು ಸಂಬಂಧಿತ ಕಚೇರಿಗಳಿಗೆ ಅಲೆಯುವುದು ಸಾಮಾನ್ಯವಾಗಿದೆ.
ಈ ನಿಟ್ಟಿನಲ್ಲಿ, ಒಂದೇ ಸೂರಿನಲ್ಲಿ ಪಹಣಿ ತಿದ್ದುಪಡಿ ಸೇರಿ ಜನಸಾಮಾನ್ಯರ ಸಮಸ್ಯೆ ಬಗೆಹರಿಸುವ ಕಂದಾಯ ಅದಾಲತ್ಗೆ ಶೀಘ್ರದಲ್ಲೇ ದಿನಾಂಕ ಘೊಷಿಸಲಾಗುವುದು ಮತ್ತು ಈ ಕಾರ್ಯಕ್ರಮದಡಿಯಲ್ಲಿ ಆಕಾರ್ ಬಂದ್ ಮತ್ತು ಪಹಣಿ ಕಾಲಂ 3 ಮತ್ತು 9ರ ನಮೂದಿನಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ದೋಷಪೂರಿತ ಪಹಣಿಗಳನ್ನು ಸರಿಪಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿರುವುದು ಹೊಸ ನಿರೀಕ್ಷೆ ಹುಟ್ಟಿಸಿದೆ. ಅಲ್ಲದೆ, ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಬೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಸರ್ಕಾರ, ಮುಂದಿನ ಭಾಗವಾಗಿ ಸರ್ಕಾರಿ ದಾರಿಗಳ ಒತ್ತುವರಿ ತೆರವು ಮಾಡಿಸಲು ಕ್ರಮ ಕೈಗೊಳ್ಳಲಿದೆ.
‘ಸರ್ಕಾರದ ಆದೇಶದಲ್ಲಿ ಗಣಕೀಕೃತ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ರಾಜ್ಯಾದ್ಯಂತ ಮತ್ತೊಮ್ಮೆ ಕಂದಾಯ ಅದಾಲತ್ ಆಂದೋಲನ ಕೈಗೊಳ್ಳಬೇಕು. ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು’ ಎಂದು ಸಚಿವರು ಸೂಚನೆ ನೀಡಿದ್ದು, ಹೆಚ್ಚು ದೂರುಗಳು ಇರುವ ಕೊಡಗು ಜಿಲ್ಲೆಗೆ ತಾವೇ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಮುಖ್ಯವಾಗಿ, ಗ್ರಾಮೀಣ ಪ್ರದೇಶದಲ್ಲಿ ಮತ್ತು ತಾಲೂಕು ಕೇಂದ್ರಗಳಲ್ಲಿ ಸಮಸ್ಯೆಯ ತೀವ್ರತೆ ಹೆಚ್ಚಿದ್ದು, ರೈತರ ಜಮೀನುಗಳಿಗೆ ಸಂಬಂಧಿಸಿದ ಪಹಣಿಗಳು ತಿದ್ದುಪಡಿಯಾಗದೆ, ಇತ್ಯರ್ಥವಾಗದೆ ಉಳಿದಿವೆ. ಕಂದಾಯ ಅದಾಲತ್ ಆಶಯ ಉತ್ತಮವಾಗಿದ್ದು, ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಇದನ್ನು ಕಾಟಾಚಾರಕ್ಕೆ ನಡೆಸಬಾರದು. ಜನರಿಗೆ ಸ್ಪಂದಿಸುವ ಇಚ್ಛಾಶಕ್ತಿ ತೋರ್ಪಡಿಸಿದರೆ ಮಾತ್ರ ಇಂಥ ಉಪಕ್ರಮಗಳು ಯಶಸ್ವಿಯಾಗಲು ಸಾಧ್ಯ.