ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿದ್ದ ಐದು ಗ್ಯಾರಂಟಿಗಳನ್ನು ನಿಭಾಯಿಸಲು ತಗಲುವ ಅಪಾರ ಸಂಪನ್ಮೂಲವನ್ನು ಕ್ರೋಢಿಕರಿಸುವ ಬೃಹತ್ ಸವಾಲಿನೊಂದಿಗೆ ಸ್ವತಃ ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ ಬಜೆಟ್ ಮಂಡಿಸಲಿದ್ದಾರೆ. ಕರ್ನಾಟಕದಲ್ಲಿ ಅತಿಹೆಚ್ಚು, ಅಂದರೆ 13 ಬಜೆಟ್ ಮಂಡಿಸಿದ ಶ್ರೇಯಸ್ಸಿಗೆ ಪಾತ್ರರಾದ ದಿ. ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು 2018ರ ಫೆಬ್ರುವರಿಯಲ್ಲಿಯೇ ಸರಿಗಟ್ಟಿದ್ದ ಸಿದ್ದರಾಮಯ್ಯ ಅವರಿಂದ ಮಂಡನೆಯಾಗುತ್ತಿರುವ 14ನೇ ಬಜೆಟ್ ಇದಾಗಿದೆ.
ಅಲ್ಲದೆ, ಗಾತ್ರದಲ್ಲೂ ಅತಿದೊಡ್ಡ ಬಜೆಟ್ ಎಂಬ ದಾಖಲೆಯನ್ನು ಕೂಡ ಇದು ಬರೆಯಬಹುದಾಗಿದೆ. 2023-24ನೇ ಹಣಕಾಸು ವರ್ಷದಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 3.09 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದು ಇದುವರೆಗಿನ ಅತಿದೊಡ್ಡ ಗಾತ್ರದ ಆಯವ್ಯಯವಾಗಿದೆ. ಈಗ ಇದೇ ಸಾಲಿನಲ್ಲಿ ನೂತನ ಸರ್ಕಾರದ ಹೊಸ ಬಜೆಟ್ ಮೊತ್ತ 3.35 ಲಕ್ಷ ಕೋಟಿ ರೂಪಾಯಿಗೆ ತಲುಪುವ ಅಂದಾಜಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಗ್ಯಾರಂಟಿಯನ್ನು ಪೂರ್ಣಪ್ರಮಾಣ ದಲ್ಲಿ ಅನುಷ್ಠಾನಕ್ಕೆ ತಂದಿದೆ. ಗೃಹ ಲಕ್ಷ್ಮಿ ಯೋಜನೆ, ಉಚಿತ ವಿದ್ಯುತ್ ಯೋಜನೆಯನ್ನು ಕೆಲವು ಷರತ್ತು, ಕಡಿತಗಳೊಂದಿಗೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಯುವ ನಿಧಿ ಯೋಜನೆಯನ್ನು ಕೂಡ ಜಾರಿಗೊಳಿಸಿದೆ. 5 ಕೆಜಿ ಉಚಿತ ಅಕ್ಕಿ ಗ್ಯಾರಂಟಿ ಬದಲಾಗಿ ಹಣ ನೀಡಲು ಸಜ್ಜಾಗಿದೆ.
ಒಂದಿಷ್ಟು ಷರತ್ತು, ನಿರ್ಬಂಧಗಳ ಮೂಲಕ ಗ್ಯಾರಂಟಿಗಳನ್ನು ಜಾರಿಗೊಳಿಸಿದರೂ ಇದಕ್ಕೆ ವಾರ್ಷಿಕವಾಗಿ 59 ಸಾವಿರ ಕೋಟಿ ರೂಪಾಯಿ ಬೇಕಾಗಬಹುದೆಂದು ಅಂದಾಜಿಸಲಾಗಿದ್ದು, ಗೃಹಲಕ್ಷ್ಮಿ ಯೋಜನೆಗೆ 30 ಸಾವಿರ ಕೋಟಿ ರೂಪಾಯಿ ಮೀಸಲಿಡುವ ಸಾಧ್ಯತೆ ಇದೆ. ಬೊಮ್ಮಾಯಿ ಮಂಡಿಸಿದ್ದ 3.09 ಲಕ್ಷ ಕೋಟಿ ರೂಪಾಯಿ ಬಜೆಟ್ ಗಾತ್ರವನ್ನು ಈಗ ಸಿದ್ದರಾಮಯ್ಯ 3.35 ಲಕ್ಷ ಕೋಟಿ ರೂಪಾಯಿಗೆ ಏರಿಸಿದರೂ ಈ ಹೆಚ್ಚುವರಿ ಹಣವೆಲ್ಲ ಗ್ಯಾರಂಟಿ ಜಾರಿಗೆ ಸಾಕಾಗಲಿಕ್ಕಿಲ್ಲ. ಹೀಗಾಗಿ, ವೆಚ್ಚಗಳಲ್ಲಿ ಕಡಿತ ಮಾಡುವ ಇಲ್ಲವೇ ಹೆಚ್ಚಿನ ತೆರಿಗೆ ವಿಧಿಸುವ ಅನಿವಾರ್ಯತೆ ಎದುರಾಗಲಿದೆ. ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, ರಾಜ್ಯದ ಆರ್ಥಿಕ ಸ್ಥಿತಿ ಕೂಡ ಈಗ ಆಶಾದಾಯಕವಾಗಿರುವುದು ಸಿದ್ದರಾಮಯ್ಯ ಅವರು ಈ ಸವಾಲನ್ನು ಎದುರಿಸಲು ಒಂದಿಷ್ಟು ಅನುಕೂಲಕರವಾಗಿ ಪರಿಣಮಿಸಬಹುದು.
ಇನ್ನು ರಾಜ್ಯ ಬಜೆಟ್ ಗಾತ್ರ ಹೆಚ್ಚುತ್ತಿರುವ ರೀತಿಯಲ್ಲಿಯೇ ಸಾಲ ಪ್ರಮಾಣವೂ ಹೆಚ್ಚುತ್ತಲೇ ಸಾಗಿರುವುದು ಕಳವಳಕಾರಿ ಸಂಗತಿಯಾಗಿದೆ. 2012-13ನೇ ಸಾಲಿನಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ದಾಟಿದ್ದ ಸಾಲದ ಮೊತ್ತವು 2022-23ರ ಅಂತ್ಯಕ್ಕೆ 5 ಲಕ್ಷ ಕೋಟಿ ರೂಪಾಯಿಗೆ ಬಂದು ನಿಂತಿದೆ. ಪ್ರಸ್ತುತ ಮಂಡಿಸಲಾಗುತ್ತಿರುವ ಬಜೆಟ್ನಲ್ಲಿ 78 ಸಾವಿರ ಕೋಟಿ ರೂಪಾಯಿ ಸಾಲ ಪಡೆಯಲು ಅವಕಾಶ ಇದೆ ಎನ್ನಲಾಗಿದೆ. ಮೂಲಸೌಕರ್ಯ, ನೀರಾವರಿ, ಶಿಕ್ಷಣ, ಕೃಷಿ ಮುಂತಾದ ಆದ್ಯತೆಯ ವಲಯಗಳಿಗೆ ಹಂಚಿಕೆ ಕಡಿತಗೊಳಿಸಿದರೆ ರಾಜ್ಯದ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಬಹುದಾಗಿದೆ. ಮುಂದಿನ ವರ್ಷವೇ ಲೋಕಸಭೆ ಚುನಾವಣೆಗಳು ಇರುವುದರಿಂದ ತೆರಿಗೆ ಹೊರೆಯನ್ನು ಜನರ ಮೇಲೆ ಹಾಕುವುದು ಕಷ್ಟಕರ. ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವ ಹಣಕಾಸು ಮಂತ್ರಿ ಎಂಬ ಶ್ರೇಯ ಹೊಂದಿರುವ ಮುಖ್ಯಮಂತ್ರಿಗಳು ಈ ಎಲ್ಲ ನಿರೀಕ್ಷೆ, ಸವಾಲುಗಳನ್ನು ಹೇಗೆ ನಿಭಾಯಿಸಬಹುದು ಎಂಬುದು ಕುತೂಹಲಕಾರಿಯಾಗಿದೆ.