ನ್ಯೂಸ್

ಸಂಪಾದಕೀಯ| ಕಠಿಣ ಶಿಕ್ಷೆಯಾಗಲಿ

Webdesk - Manjunatha B

ಇತ್ತೀಚಿನ ದಿನಗಳಲ್ಲಿ ವಿಮಾನಗಳಿಗೆ ಬಾಂಬ್ ಬೆದರಿಕೆಯ ಹುಸಿ ಕರೆಗಳು ಬರುವುದು ಹೆಚ್ಚಾಗಿದೆ. ಕಳೆದ ಮೂರೇ ದಿನಗಳಲ್ಲಿ ಇಂತಹ ಸುಮಾರು 25 ಕರೆಗಳು ಬಂದಿದ್ದು, ಕೆಲವು ವಿಮಾನಗಳ ಸಂಚಾರ ರದ್ದಾಗಿದ್ದರೆ, ಇನ್ನು ಕೆಲವು ವಿಮಾನಗಳನ್ನು ತುರ್ತು ಭೂಸ್ಪರ್ಶ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಿದೆ. ಕಿಡಿಗೇಡಿಗಳಿಗೆ ಇದು ಚೆಲ್ಲಾಟವಾದರೆ, ಪ್ರಯಾಣಿಕರ ಪಾಲಿಗೆ ಪ್ರಾಣಸಂಕಟ. ದೆಹಲಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಂಟು ಪ್ರಕರಣಗಳಿಗೆ ಸಂಬಂಧಿಸಿ ಎಫ್​ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಬೆದರಿಕೆ ಬಂದ ಸಾಮಾಜಿಕ ಜಾಲತಾಣ ಖಾತೆಗಳನ್ನು ಅಮಾನತುಗೊಳಿಸಲಾಗಿದೆ. ಹೊರದೇಶಗಳಿಂದ ಈ ಬೆದರಿಕೆಗಳು ಬಂದಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮತ್ತೊಂದು ಮೂಲದ ಪ್ರಕಾರ, ಅಪ್ರಾಪ್ತ ಬಾಲಕನೊಬ್ಬ ಸ್ನೇಹಿತನ ವಿರುದ್ಧ ದ್ವೇಷಕ್ಕೆ ಇಂಥ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ತನಿಖೆ ಪೂರ್ಣಗೊಂಡ ನಂತರವೇ ಸಂಪೂರ್ಣ ಸತ್ಯಾಂಶ ಗೊತ್ತಾಗಲಿದೆ.

ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿನ ಏರ್ ಮಾರ್ಶಲ್​ಗಳ ಸಂಖ್ಯೆ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಸಕಾಲಿಕ ಕ್ರಮವಾಗಿದೆ. ಕೇಂದ್ರ ಗೃಹ ಸಚಿವಾಲಯವು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಬಾಂಬ್ ಬೆದರಿಕೆ ಕರೆ ಬಂದಿರುವ ಎಲ್ಲ ಘಟನೆಗಳ ಕುರಿತಂತೆ ವಿವರವಾದ ವರದಿ ಸಲ್ಲಿಸುವಂತೆ ಕೇಂದ್ರ ವಿಮಾನಯಾನ ಸಚಿವಾಲಯ, ಸಿಐಎಸ್​ಎಫ್ ಹಾಗೂ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ಬುಧವಾರ ಸೂಚನೆ ನೀಡಿದೆ. ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಮತ್ತು ಅವರ ವಿರುದ್ಧ ಕಠೋರ ಕ್ರಮ ಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರಾದರೂ, ಮೇಲಿಂದ ಮೇಲೆ ಇಂಥ ಪ್ರಕರಣಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಲವು ವಿಮಾನಗಳ ಮಾರ್ಗ ಬದಲಾಯಿಸಲಾಗಿದ್ದರೆ, ಕೆಲ ವಿಮಾನಗಳನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.

ಈ ಬೆಳವಣಿಗೆಯ ಬಗ್ಗೆ ಅಮೆರಿಕ ಕೂಡ ಕಳವಳ ವ್ಯಕ್ತಪಡಿಸಿದ್ದು, ‘ಪ್ರಯಾಣಿಕರ ವಿಮಾನಗಳಿಗೆ ಇಂಥ ಬೆದರಿಕೆ ಒಡ್ಡುವುದು ಅಸ್ವೀಕಾರಾರ್ಹ’ ಎಂದಿದೆ. ಷಿಕಾಗೋ ಹಾಗೂ ನ್ಯೂಯಾರ್ಕ್​ಗೆ ತೆರಳುವ ಏರ್ ಇಂಡಿಯಾದ ವಿಮಾನಗಳಿಗೂ ಇತ್ತೀಚೆಗೆ ಇಂಥ ಬೆದರಿಕೆ ಒಡ್ಡಲಾಗಿತ್ತು. ಷಿಕಾಗೋಗೆ ಹೊರಟಿದ್ದ ವಿಮಾನ ಕೆನಡಾದಲ್ಲಿ ತುರ್ತು ಭೂಸ್ಪರ್ಶ ಮಾಡಿದರೆ, ಮುಂಬೈಯಿಂದ ನ್ಯೂಯಾರ್ಕ್​ಗೆ ಹೊರಟಿದ್ದ ವಿಮಾನ ವಾಪಸ್ ದೆಹಲಿಗೆ ಬಂದಿಳಿಯಿತು. ಸಿಂಗಾಪುರಕ್ಕೆ ಹೊರಟಿದ್ದ ವಿಮಾನಕ್ಕೂ ಇಂಥ ಬೆದರಿಕೆ ಬಂದಿದ್ದರಿಂದ, ಹೆಚ್ಚಿನ ಭದ್ರತೆ ಒದಗಿಸಿ ಟೇಕಾಫ್ ಮಾಡಿಸಲಾಯಿತು.

ಇಂತಹ ಕಾರ್ಯಕ್ಕೆ ಕೈಹಾಕುವ ವಿಘ್ನಸಂತೋಷಿಗಳ ಹೆಡೆಮುರಿ ಕಟ್ಟಲು ಕೇಂದ್ರ ಗೃಹ ಸಚಿವಾಲಯ, ಡಿಜಿಸಿಎ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕಿದೆ. ಈ ಸಂಬಂಧ ಕೆಲವರಿಗೆ ಶಿಕ್ಷೆ ವಿಧಿಸಿದರೆ, ಉಳಿದ ಕಿಡಿಗೇಡಿಗಳಿಗೆ ಅದು ಪಾಠವಾಗುತ್ತದೆ. ಪ್ರಯಾಣ ವ್ಯವಸ್ಥೆಯನ್ನೇ ತೊಂದರೆಗೊಳಪಡಿಸುವ ಇಂಥ ಯತ್ನಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಪ್ರಯಾಣಿಕರ ಸುರಕ್ಷತೆಯನ್ನೂ ಕಡೆಗಣಿಸುವಂತಿಲ್ಲ.