ನ್ಯೂಸ್

ಸಂಪಾದಕೀಯ: ನೇಪಾಳದ ಕಿರಿಕಿರಿ

arunakunigal

ಜಾಗತಿಕ ನಾಯಕನಾಗಬೇಕೆಂಬ ಹುಚ್ಚು ಸ್ಪರ್ಧೆಗೆ ಬಿದ್ದಿರುವ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಹಲವು ಕುತಂತ್ರಗಳನ್ನು ಹೆಣೆಯುತ್ತಲೇ ಇದೆ. ಸಣ್ಣ ರಾಷ್ಟ್ರಗಳಿಗೆ ಭಾರಿ ಮೊತ್ತದ ಸಾಲ ನೀಡಿ, ತನ್ನ ನಿಬಂಧನೆಗಳಿಗೆ ಒಳಪಡಿಸುವುದು, ಶಸ್ತ್ರಾಸ್ತ್ರಗಳ ನಿಟ್ಟಿನಲ್ಲಿ ಸಹಾಯ ಮಾಡುವುದು, ಗಡಿವಿವಾದಗಳನ್ನು ಕೆದಕುವುದು ಆ ಪೈಕಿ ಪ್ರಮುಖವಾದವು. ಪಾಕಿಸ್ತಾನ ಭಯೋತ್ಪಾದನೆಯನ್ನು ರಫ್ತು ಮಾಡುತ್ತ, ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬ ವಾಸ್ತವ ಅಂತಾರಾಷ್ಟ್ರೀಯ ವಲಯಕ್ಕೆ ಗೊತ್ತಿದ್ದರೂ, ಚೀನಾ ಪಾಕ್​ನ ಬೆಂಬಲಕ್ಕೆ ಸದಾ ನಿಲ್ಲುತ್ತದೆ. ಭಾರತದ ನೆರೆ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ನೇಪಾಳದಲ್ಲೂ ಚೀನಾ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಲೇ ಇದೆ. ಇದರ ಭಾಗವಾಗಿ, ನೇಪಾಳದ ಹಿಂದೆ ನಿಂತು ಭಾರತದೊಂದಿಗೆ ಅನಗತ್ಯ ಗಡಿವಿವಾದ ಸೃಷ್ಟಿಸಲು ಯತ್ನಿಸುತ್ತಿದೆ. ‘ಇದರಲ್ಲಿ ತನ್ನ ಪಾತ್ರವೇನೂ ಇಲ್ಲ’ ಎಂಬುದು ಚೀನಾ ಸ್ಪಷ್ಟನೆ ನೀಡಿದರೂ, ಸತ್ಯಾಂಶ ಬೇರೆಯೇ ಇದೆ.

ಭಾರತದ ಉತ್ತರಾಖಂಡದ ಕುಮಾವುನ್ ಬೆಟ್ಟ ಸಾಲುಗಳಲ್ಲಿ ಬರುವ ಕಾಲಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರ ಪ್ರದೇಶಗಳು ತನ್ನ ದೇಶಕ್ಕೆ ಸೇರಿದ್ದೆಂದು ನೇಪಾಳ ಸರ್ಕಾರ ಹೊಸ ನಕ್ಷೆ ಬಿಡುಗಡೆ ಮಾಡಿರುವುದು ಭಾರತ-ನೇಪಾಳ ನಡುವಿನ ಗಡಿ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅಲ್ಲದೆ, ಅಲ್ಲಿನ ಪ್ರಧಾನಿ ಭಾರತವನ್ನು ಅನಗತ್ಯವಾಗಿ ಟೀಕಿಸಿದ್ದು ಉದ್ವಿಗ್ನತೆಗೆ ಕಾರಣವಾಗಿದೆ. ನೇಪಾಳದ ಕಮ್ಯುನಿಸ್ಟ್ ಆಡಳಿತ ಅಧಿಕಾರದ ಅಹಂನಲ್ಲಿ ಇತಿಹಾಸದ ಪುಟಗಳನ್ನು ಮರೆತಂತೆ ಕಾಣುತ್ತಿದೆ. ಭಾರತ ನೇಪಾಳದೊಂದಿಗೆ ಸದಾ ಸೌಹಾರ್ದ ಸಂಬಂಧವನ್ನು ಹೊಂದಿದೆಯಲ್ಲದೆ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈ ಪುಟ್ಟರಾಷ್ಟ್ರಕ್ಕೆ ಹಲವು ಬಾರಿ ನೆರವಿನ ಹಸ್ತ ಚಾಚಿದ್ದಾರೆ. 2015ರಲ್ಲಿ ನೇಪಾಳ ಭೂಕಂಪದಿಂದ ನಲುಗಿ ಹೋಗಿ, ಭಾರಿ ಪ್ರಮಾಣದ ಜೀವಹಾನಿ ಮತ್ತು ಆಸ್ತಿಪಾಸ್ತಿ ಹಾನಿ ಅನುಭವಿಸಿದಾಗ ಮೊದಲು ನೆರವಿಗೆ ಧಾವಿಸಿದ್ದು ಭಾರತವೇ. ಅಲ್ಲಿನ ಪರಿಹಾರ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸಿ, ಸಾವಿರಾರು ಜನರನ್ನು ರಕ್ಷಿಸಿತ್ತು. ಅಲ್ಲದೆ, ನೇಪಾಳದೊಂದಿಗೆ ದ್ವಿಪಕ್ಷೀಯ ಬಾಂಧವ್ಯವನ್ನೂ ವೃದ್ಧಿಸಿಕೊಂಡಿತ್ತು.

ತನ್ನ ಸಾಮರ್ಥ್ಯ ಏನು, ಇತಿಹಾಸದ ವಾಸ್ತವಗಳೇನು ಎಂದು ಅರಿತುಕೊಳ್ಳದ ನೇಪಾಳ ಚೀನಾದ ಮಾತಿಗೆ ತಲೆಬಾಗಿ, ಇಲ್ಲದ ವಿವಾದವನ್ನು ಸೃಷ್ಟಿಸಿಕೊಳ್ಳುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಈ ಕುರಿತು ಭಾರತದ ವಿದೇಶಾಂಗ ಇಲಾಖೆ ತಕ್ಕ ಉತ್ತರವನ್ನೇ ನೀಡಿದ್ದು, ‘ನೇಪಾಳ ಕೃತಕ ನಕ್ಷೆಯನ್ನು ಬಿಡುಗಡೆ ಮಾಡುವ ಮೂಲಕ ಗಡಿವಿವಾದವನ್ನು ಮಾತುಕತೆ ಮುಖಾಂತರ ಬಗೆಹರಿಸಿಕೊಳ್ಳುವ ವಿವೇಚನೆಯನ್ನು ಮರೆತಿದೆ. ಮತ್ತದು ಐತಿಹಾಸಿಕ ವಾಸ್ತವ ಮತ್ತು ಸಾಕ್ಷ್ಯಗಳನ್ನು ಉಲ್ಲಂಘಿಸಿದೆ’ ಎಂದು ಹೇಳಿದೆ. ನೇಪಾಳ ಭಾರತದ ಅಖಂಡತೆಯನ್ನು ಗೌರವಿಸಬೇಕು. ಚೀನಾ ಭಾರತವಿರೋಧಿ ಮನಸ್ಸುಗಳನ್ನು ಪ್ರಚೋದಿಸುವ ಮತ್ತು ಭಾರತದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವ ಚಾಳಿಯನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ, ಈ ವಿವಾದಗಳನ್ನು ಸಮರ್ಥವಾಗಿ ಎದುರಿಸಲು ಭಾರತ ಸಿದ್ಧವಿದೆ ಎಂಬುದನ್ನು ಮರೆಯಬಾರದು.