ನ್ಯೂಸ್

ಕಣ್ಣೊರೆಸುವ ತಂತ್ರವಾಗದಿರಲಿ: ಗಂಗಾ ಕಲ್ಯಾಣದಲ್ಲಿ ಯಾರದ್ದೋ ಕಲ್ಯಾಣ

ಗಂಗಾ ಕಲ್ಯಾಣ ಕೊಳವೆ ಬಾವಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ವಿಶೇಷ ತಂಡ ಕೂಡ ರಚನೆಯಾಗಿದೆ. ಸರ್ಕಾರದ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡವರಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶ ಮಾಡಿರುವುದು ಒಳ್ಳೆಯದೇ. ಆದರೆ ಇದುವರೆಗಿನ ಇಂತಹ ಅಪರಾಧ ಕೃತ್ಯಗಳಲ್ಲಿ ಎಷ್ಟು ಜನ ಅಪರಾಧಿಗಳಿಗೆ ಶಿಕ್ಷೆಯಾಗಿದೆ ಎನ್ನುವುದನ್ನು ಅವಲೋಕನ ಮಾಡಿದರೆ ತನಿಖೆಗಳು ಬಹುತೇಕ ಕಣ್ಣೊರೆಸುತ ತಂತ್ರಗಳಿರಬಹುದೇ ಎನ್ನುವ ಅನುಮಾನವನ್ನು ಪುಷ್ಠೀಕರಿಸುತ್ತವೆ.

ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಗಳು ಯೋಜನೆಗಳನ್ನು ರೂಪಿಸಿ ದೊಡ್ಡ ಮೊತ್ತದ ಅನುದಾನವನ್ನು ಹಂಚಿಕೆ ಮಾಡುತ್ತವೆ. ಗಂಗಾ ಕಲ್ಯಾಣ ಕೂಡ ಇಂತಹ ಯೋಜನೆಗಳಲ್ಲಿ ಒಂದು. ಕೊಳವೆ ಬಾವಿ ಕೊರೆದು ಪಂಪ್​ಸೆಟ್ ಅಳವಡಿಸಿ ನೀರಾವರಿ ಸೌಲಭ್ಯ ಕಲ್ಪಿಸುವುದು ಗಂಗಾ ಕಲ್ಯಾಣ ಯೋಜನೆಯ ಉದ್ದೇಶ.

ಈ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ ಮಾಡಿ ಅಧಿಕಾರಿಗಳು ಗುತ್ತಿಗೆದಾರರಿಗೆ ನೆರವಾದ ಆರೋಪ ಕೇಳಿಬಂದಿದೆ. ಕೋಲಾರ, ರಾಯಚೂರು, ಬಳ್ಳಾರಿ, ಹಾಸನ, ಮಡಿಕೇರಿ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇತರ ಜಿಲ್ಲೆಗಳಲ್ಲಿ ಇದೇ ರೀತಿಯ ಅಕ್ರಮಗಳು ನಡೆದಿಲ್ಲ ಎಂದು ಹೇಳಲಾಗದು. ಸಣ್ಣ ಮತ್ತು ಅತಿ ಸಣ್ಣ ರೈತರ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗಂಗಾ ಕಲ್ಯಾಣದ ಹೆಸರಿನಲ್ಲಿ ಯಾರ್ಯಾರದ್ದೋ ಕಲ್ಯಾಣ ಆಗಿದೆ. ರೈತರ ಕಲ್ಯಾಣ ಹೆಸರಿನಲ್ಲೇ ಉಳಿದಿದೆ.

ಸರ್ಕಾರದ ಯೋಜನೆಗಳ ದುರ್ಬಳಕೆ ಸೇರಿದಂತೆ ಹಲವಾರು ಅಪರಾಧ ಕೃತ್ಯಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಕೆಲವು ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ಅಂತಿಮವಾಗಿ ಎಷ್ಟು ಅಪರಾಧಿಗಳಿಗೆ ಶಿಕ್ಷೆಯಾಗಿದೆ ಎನ್ನುವುದನ್ನು ಗಮನಿಸಿದರೆ ಆಡಳಿತ ನಡೆಸುವವರ ಮೇಲೂ ಅನುಮಾನಗಳು ಮೂಡುತ್ತವೆ. ಒತ್ತಡಗಳಿಗೆ ಮಣಿದು ಪ್ರಕರಣಗಳ ತನಿಖೆಗೆ ಆದೇಶ ಮಾಡಿ ನಂತರ ತನಿಖೆಯನ್ನು ದುರ್ಬಲಗೊಳಿಸಿ ಅಪರಾಧಿಗಳನ್ನು ರಕ್ಷಣೆ ಮಾಡುವ ಅನುಮಾನಗಳು ದಟ್ಟವಾಗುತ್ತಿವೆ. ಈ ಅನುಮಾನವನ್ನು ನಿವಾರಣೆ ಮಾಡಬೇಕಾದ ಹೊಣೆ ಸರ್ಕಾರದ ಮೇಲಿದೆ.

ಕೆಲವು ಪ್ರಕರಣಗಳನ್ನು ರಾಜಕೀಯ ಕಾರಣಗಳಿಗೆ ಬಳಕೆ ಮಾಡಿಕೊಳ್ಳಲು ಜೀವಂತವಾಗಿಡುವ ಪ್ರವೃತ್ತಿ ಎಲ್ಲ ಸರ್ಕಾರಗಳ ಅವಧಿಯಲ್ಲೂ ಕಂಡುಬಂದಿದೆ. ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಡ್ರಗ್ಸ್ ಪ್ರಕರಣ, ಬಿಟ್ ಕಾಯಿನ್ ಪ್ರಕರಣ, ಪೊಲೀಸ್ ಸಬ್ ಇನ್ಸ್​ಪೆಕ್ಟರ್ ನೇಮಕಾತಿ ಹಗರಣಗಳ ತನಿಖೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಾಗಿದೆ ಎಂಬ ಅನುಮಾನಗಳು ಕಾಡುತ್ತಿವೆ. ಸಿಐಡಿ ತನಿಖೆ, ನ್ಯಾಯಾಂಗ ತನಿಖೆ ಸೇರಿದಂತೆ ಯಾವುದೇ ಏಜನ್ಸಿಗೆ ಅಪರಾಧ ಪ್ರಕರಣಗಳ ತನಿಖೆ ಜವಾಬ್ದಾರಿ ವಹಿಸಿದರೆ ರ್ತಾಕ ಅಂತ್ಯ ಕಾಣಿಸಬೇಕು. ಮಧ್ಯಂತರ ವರದಿ ಸಲ್ಲಿಸಿ ಅಲ್ಲಿಗೆ ಕಡತ ಮುಚ್ಚಿಡುವ ಪರಿಸ್ಥಿತಿ ಬರಬಾರದು. ಇಲ್ಲವಾದರೆ ಇಂಥ ತನಿಖೆಗಳಿಗೆ ಅರ್ಥ ಇರುವುದಿಲ್ಲ.