ಭದ್ರತೆ ದೃಷ್ಟಿಯಿಂದ ಸರ್ಕಾರ ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆ ನಿಯಮ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ. ಹಳೆಯ ವಾಹನಗಳನ್ನು ಕಳವು ಮಾಡಿ ಅಪರಾಧ ಕೃತ್ಯಗಳಿಗೆ ಬಳಕೆ ಮಾಡುವುದನ್ನು ನಿಯಂತ್ರಿಸುವುದು ಈ ಕ್ರಮದ ಉದ್ದೇಶ. ಈ ನಂಬರ್ ಪ್ಲೇಟ್ ಜೋಡಣೆಯನ್ನು ವಾಹನ ಉತ್ಪಾದಕ ಕಂಪನಿಗಳ ಅಧಿಕೃತ ಡೀಲರ್ಗಳಿಗೆ ವಹಿಸಲಾಗಿದೆ. ರಾಜ್ಯದಲ್ಲಿ ನಂಬರ್ ಪ್ಲೇಟ್ ಪೂರೈಕೆ ಜವಾಬ್ದಾರಿಯನ್ನು ಏಳೆಂಟು ಕಂಪನಿಗಳಿಗೆ ನೀಡಲಾಗಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ಸುಮಾರು 4000ಕ್ಕೂ ಅಧಿಕ ಡೀಲರ್ ಪಾಯಿಂಟ್ಗಳನ್ನು ಗುರುತಿಸಲಾಗಿದೆ. ವಾಹನ ಮಾಲೀಕರು ಅಧಿಕೃತ ಡೀಲರ್ ಪಾಯಿಂಟ್ಗಳಲ್ಲೇ ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ.
ಯಾವುದೇ ವಿಚಾರದಲ್ಲಿ ನಕಲಿ ಸೃಷ್ಟಿ ಹೊಸದೇನೂ ಅಲ್ಲ. ಸರ್ಕಾರ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಕಡ್ಡಾಯಗೊಳಿಸುತ್ತಿದ್ದಂತೆ ರಾಜ್ಯದ ಹಲವೆಡೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ವ್ಯವಹಾರ ಆರಂಭವಾಗಿದೆ. ಸರ್ಕಾರದ ಈ ಕಡ್ಡಾಯ ನಿಯಮವನ್ನೇ ದುರ್ಬಳಕೆ ಮಾಡಿಕೊಂಡು ವಾಹನಗಳ ಮಾಲೀಕರಿಗೆ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಸಾರಿಗೆ ಇಲಾಖೆಯ ಆದೇಶ ಹೊರಬೀಳುತ್ತಿದ್ದಂತೆ ರಾಜ್ಯದ ಹಲವೆಡೆ ಈಗಾಗಲೇ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ತಯಾರಕರು ಹುಟ್ಟಿಕೊಂಡಿದ್ದಾರೆ. ಮೆಕಾನಿಕ್ ಶಾಪ್ಗಳು, ಏಜೆನ್ಸಿಗಳು ಹಾಗೂ ಕೆಲವೊಂದು ಸಂಸ್ಥೆಗಳು, ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳ ಹೆಸರಿನಲ್ಲಿ ನಕಲಿ ನಂಬರ್ ಪ್ಲೇಟ್ಗಳನ್ನು ಹಾಕಿ ಹಣ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ. ಇಂತಹ ನಕಲಿ ನಂಬರ್ ಪ್ಲೇಟ್ಗಳಲ್ಲಿ ಹಾಲೋಗ್ರಾಂ ಸ್ಟಿಕ್ಕರ್ಗಳನ್ನು ಅಳವಡಿಸಿ, ನಿಗದಿಪಡಿಸಿರುವ ಹಣಕ್ಕಿಂತ ಅಧಿಕ ಪ್ರಮಾಣದ ಹಣ ಪಡೆಯಲಾಗುತ್ತಿದೆ ಎಂಬ ವರದಿಗಳು ಬಂದಿವೆ. ಈ ಜಾಲ ವಿಸ್ತಾರವಾದರೆ ಸರ್ಕಾರದ ಉದ್ದೇಶ ವಿಫಲವಾಗಲಿದೆ. ನಕಲಿ ನಂಬರ್ಪ್ಲೇಟ್ ಹೊಂದಿರುವ ವಾಹನಗಳನ್ನು ಗುರುತಿಸಿ ದಂಡ ವಿಧಿಸಬಹುದು. ಆದರೆ ಸರ್ಕಾರ ಉದ್ದೇಶ ಫಲ ನೀಡದು.
ಅಸಲಿ ಎಚ್ಎಸ್ಆರ್ಪಿ ಫಲಕದ ಮೇಲೆ ಲೇಸರ್ ತಂತ್ರಜ್ಞಾನದಲ್ಲಿ ಅಕ್ಷರಗಳನ್ನು ಮುದ್ರಿಸಲಾಗಿರುತ್ತದೆ. ಪ್ರತಿಯೊಂದು ನಂಬರ್ ಪ್ಲೇಟ್ಗೂ ಒಂದು ಸೀರಿಯಲ್ ನಂಬರ್ ಕೊಡಲಾಗುತ್ತದೆ. ಆ ನಂಬರ್ ಸಾರಿಗೆ ಇಲಾಖೆಯ ವಾಹನ್-4 ತಂತ್ರಾಂಶಕ್ಕೆ ಜೋಡಣೆಯಾಗಿರುತ್ತದೆ. ಆದರೆ, ಅನಧಿಕೃತ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಖರೀದಿಸುವ ನಂಬರ್ ಪ್ಲೇಟ್ಗಳಲ್ಲಿ ಸೀರಿಯಲ್ ಸಂಖ್ಯೆಯೂ ಇರುವುದಿಲ್ಲ. ವಾಹನ್-4 ತಂತ್ರಾಂಶಕ್ಕೂ ಜೋಡಣೆ ಆಗಿರುವುದಿಲ್ಲ. ಅಸಲಿ ಯಾವುದು? ನಕಲಿ ಯಾವುದು? ಎನ್ನುವುದನ್ನು ವಾಹನಗಳ ಮಾಲೀಕರು ಕಂಡುಕೊಳ್ಳುವುದು ಕಷ್ಟವಾಗಲಿದೆ. ಸರ್ಕಾರದ ಅನುಮತಿ ಇಲ್ಲದಿದ್ದರೂ ಅನುಮತಿ ಇದೆ ಎಂದು ಹೇಳಿಕೊಂಡು ನಕಲಿ ನಂಬರ್ ಪ್ಲೇಟ್ಗಳನ್ನು ಕೊಡುವ ಚಾಣಾಕ್ಷರಿಗೆ ಕೊರತೆ ಇಲ್ಲ. ಹೀಗಾಗಿ ಸರ್ಕಾರವೇ ನಕಲಿ ನಂಬರ್ ಪ್ಲೇಟ್ ತಯಾರಕರನ್ನು ಪತ್ತೆ ಮಾಡಿ ಕ್ರಮ ಕೈಗೊಂಡರೆ ವಾಹನಗಳ ಮಾಲೀಕರಿಗೆ ಸಮಸ್ಯೆ ಇರುವುದಿಲ್ಲ. ಸರ್ಕಾರದ ಉದ್ದೇಶವೂ ಫಲ ನೀಡುತ್ತದೆ.