ನ್ಯೂಸ್

ಸಂಪಾದಕೀಯ|ಸರ್ಕಾರದ ದಿಟ್ಟ ಕ್ರಮ - ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡೆಗೂ ನ್ಯಾಯ

suchetana

ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್​ಗಳಿಗೆ ಪ್ರವೇಶ ಪಡೆಯುವುದು ಅಸಂಖ್ಯ ವಿದ್ಯಾರ್ಥಿಗಳ ಕನಸು, ನಿರೀಕ್ಷೆ. ಇದಕ್ಕಾಗಿ ಸಾಕಷ್ಟು ಶ್ರಮ ಹಾಕಿ, ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತಮ ಅಂಕವನ್ನೂ ಪಡೆದಿರುತ್ತಾರೆ. ಆದರೆ ಅನೇಕ ಕಾಲೇಜುಗಳಲ್ಲಿನ ಸೀಟ್ ಬ್ಲಾಕಿಂಗ್ ದಂಧೆ ಇಂಥ ವಿದ್ಯಾರ್ಥಿಗಳ ಅವಕಾಶವನ್ನು ಕಿತ್ತುಕೊಳ್ಳುತ್ತಿರುವುದು ವಿಪರ್ಯಾಸಕರ. ಈ ವಿದ್ಯಮಾನ ಇಂದು, ನಿನ್ನೆಯದೇನಲ್ಲ. ಹಲವು ವರ್ಷಗಳಿಂದಲೂ ಅದೆಷ್ಟೋ ಕಾಲೇಜುಗಳು ಸೀಟ್ ಬ್ಲಾಕಿಂಗ್​ನ್ನು ದುಡ್ಡು ಮಾಡುವ ದಂಧೆಯಾಗಿ ಪರಿವರ್ತಿಸಿಕೊಂಡಿರುವುದು ಶೈಕ್ಷಣಿಕ ವಲಯದ ಕಳವಳಕ್ಕೆ ಕಾರಣವಾಗಿತ್ತು. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಅಥವಾ ವ್ಯವಸ್ಥೆಯಲ್ಲಿ ಅಗತ್ಯ ಮಾರ್ಪಾಡು ಮಾಡಬೇಕು ಎಂಬ ದೀರ್ಘಾವಧಿಯ ಬೇಡಿಕೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಂಡಿದೆ.

ಪ್ರತಿಭಾವಂತರಿಗೆ ಸಿಗಬೇಕಾದ ಸೀಟುಗಳು ಶ್ರೀಮಂತ ವಿದ್ಯಾರ್ಥಿಗಳ ಪಾಲಾಗುತ್ತಿರುವುದನ್ನು ತಪ್ಪಿಸಲು ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ(ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಅಧಿನಿಯಮ 2006 ನಿಯಮಕ್ಕೆ ತಿದ್ದುಪಡಿ ತಂದು ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ(ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ನೂತನ ಅಧಿನಿಯಮ ಜಾರಿಗೆ ತರಲಾಗುತ್ತಿದೆ. ಈ ಅಧಿನಿಯಮದ ಪ್ರಕಾರ ಸೀಟ್ ಬ್ಲಾಕಿಂಗ್ ಮಾಡಿ ಕೊನೆ ಸುತ್ತಿನ ಹಂಚಿಕೆಯಲ್ಲಿ ಸೀಟು ಬಿಟ್ಟುಕೊಟ್ಟರೇ ಕೋರ್ಸ್​ಗೆ ಸರ್ಕಾರ ನಿಗದಿ ಪಡಿಸಿರುವ ಶುಲ್ಕದ ಐದು ಪಟ್ಟನ್ನು ದಂಡವಾಗಿ ವಿದ್ಯಾರ್ಥಿಯೇ ಪಾವತಿಸಬೇಕು. ಸೀಟು ಭರ್ತಿಯಾದ ಕುರಿತಂತೆ ಸರಿಯಾದ ಮಾಹಿತಿ ನೀಡದ ಕಾಲೇಜುಗಳಿಗೂ ಐದು ಪಟ್ಟು ದಂಡ ವಿಧಿಸಲಾಗುತ್ತದೆ. ಈ ಹೊಸ ಅಧಿನಿಯಮ 2020-21ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಉನ್ನತ ಶಿಕ್ಷಣ ಇಲಾಖೆ ಈ ಅಧಿನಿಯಮವನ್ನು ರೂಪಿಸಿ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ಕಲ್ಪಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೋರ್ಸ್​ಗಳಿಗೂ ಇದು ಅನ್ವಯವಾಗಲಿದೆ.

ವೈದ್ಯಕೀಯ ಕೋರ್ಸ್​ಗಳಿಗೆ ಸೀಟ್ ಬ್ಲಾಕ್ ಮಾಡುವವರ ಸಂಖ್ಯೆ ಹೆಚ್ಚು. ಇದಕ್ಕೂ ಕಡಿವಾಣ ಹಾಕಬೇಕಿದೆ. 2019ರಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೊದಲ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ 212 ವಿದ್ಯಾರ್ಥಿಗಳು ಸೀಟ್ ಬ್ಲಾಕ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿದಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹೊಸ ಅಧಿನಿಯಮ ರೂಪಿಸುವ ಮೂಲಕ ಶೈಕ್ಷಣಿಕ ವ್ಯವಸ್ಥೆಯ ದೊಡ್ಡ ಪಿಡುಗನ್ನು ನಿವಾರಿಸಲು ಮುಂದಾಗಿರುವ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ಇನ್ನಾದರೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂಥ ವಾತಾವರಣ ರೂಪುಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕಾಲೇಜುಗಳು ಹಳೆಯ ಚಾಳಿಯನ್ನು ಬಿಟ್ಟು, ಸುಧಾರಣೆ, ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಲಿ. ಸೀಟುಗಳ ಲಭ್ಯತೆಗೆ ಹಣ ಮಾನದಂಡವಾಗದೆ ಪ್ರತಿಭೆ, ವಿದ್ಯಾರ್ಥಿಗಳು ಪಡೆದ ಅಂಕಗಳು ಗಣನೆಗೆ ತೆಗೆದುಕೊಳ್ಳಲಿ.