ಖಾಸಗಿ, ಸಹಕಾರಿ ಬ್ಯಾಂಕುಗಳ ಹಗರಣ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ನೆಮ್ಮದಿಗೆ ಭಂಗ ತಂದಿವೆ. ಹತ್ತಾರು ವರ್ಷಗಳ ಕಾಲ ದುಡಿದು ಉಳಿಸಿದ್ದನ್ನು, ನಾಳೆಗಳಿಗಾಗಲಿ ಎಂದುಕೊಂಡು ಠೇವಣಿ ಇಡುವವರು, ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಸಣ್ಣ ಮೊತ್ತವನ್ನೇ ಠೇವಣಿ ರೂಪದಲ್ಲಿ ಪೇರಿಸುತ್ತ ಹೋಗುವವರು, ಹೀಗೆ ಜನಸಾಮಾನ್ಯರದು ಒಂದೊಂದು ಅನಿವಾರ್ಯತೆ. ಬ್ಯಾಂಕುಗಳಲ್ಲಿ ದುಡ್ಡು ಇಟ್ಟರೆ ಸುರಕ್ಷಿತ ಎಂಬ ಭಾವದಿಂದ ಶ್ರೀಸಾಮಾನ್ಯರೆಲ್ಲ ಹೆಚ್ಚು ಯೋಚಿಸದೆ ಅಲ್ಲಿ ಹಣ ಇರಿಸುತ್ತಾರೆ. ಆದರೆ, ರಾತ್ರೋರಾತ್ರಿ ಬಾಗಿಲು ಹಾಕುವ, ಇಲ್ಲವೆ ದೊಡ್ಡ ಹಗರಣಗಳಲ್ಲಿ ಸಿಲುಕಿ ಠೇವಣಿದಾರರನ್ನು ಹೈರಾಣು ಮಾಡುವ ಬ್ಯಾಂಕುಗಳು ಹೆಚ್ಚುತ್ತಿರುವುದರಿಂದ ಜನರ ಹಿತರಕ್ಷಣೆ ಸರ್ಕಾರದ ಜವಾಬ್ದಾರಿಯೂ ಆಗುತ್ತದೆ. ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ‘ಅನಿಯಂತ್ರಿತ ಠೇವಣಿ ಸಂಗ್ರಹ (ನಿಯಂತ್ರಣ) ಕಾಯ್ದೆ’ ಜಾರಿಗೆ ತರಲು ನಿರ್ಧರಿಸಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಇದಕ್ಕೆ ಸಮ್ಮತಿಯೂ ದೊರೆತಿದೆ. ಸಾವಿರಾರು ಕೋಟಿ ಅವ್ಯವಹಾರದಿಂದ ಕುಖ್ಯಾತಿಯಾಗಿರುವ ಐಎಂಎ ಸೇರಿ ಇಂಥ ಯಾವುದೇ ಸಂಸ್ಥೆಗಳು ಹೀಗೆ ಜನರಿಂದ ಹಣ/ಠೇವಣಿ ಸಂಗ್ರಹಿಸುವುದಕ್ಕೆ ಈ ಕಾಯ್ದೆ ಮುಖಾಂತರ ತಡೆ ಬೀಳಲಿದೆ. ಭವಿಷ್ಯದಲ್ಲಿ ಐಎಂಎಯಂಥ ಅವ್ಯವಹಾರಗಳನ್ನು ತಡೆಯಲು ಇಂಥ ಕಾಯ್ದೆ ಜಾರಿ ಸೂಕ್ತವಾಗಿದೆ.
ಖಾಸಗಿ/ಸಹಕಾರಿ ಬ್ಯಾಂಕುಗಳ ಎಲ್ಲ ವ್ಯವಹಾರಗಳನ್ನು ರಿಸರ್ವ್ ಬ್ಯಾಂಕ್ ಪರಿಧಿಯಲ್ಲಿಡುವ ‘ಬ್ಯಾಂಕಿಂಗ್ ನಿಯಂತ್ರಕ ತಿದ್ದುಪಡಿ ಮಸೂದೆ-2020’ಕ್ಕೆ ಸಂಸತ್ತು ಕಳೆದು ತಿಂಗಳಷ್ಟೇ ಅನುಮೋದನೆ ನೀಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದೇಶದ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ತರುವ ನಿಟ್ಟಿನಲ್ಲಿ ಬ್ಯಾಂಕಿಂಗ್ ನಿಯಂತ್ರಕ ತಿದ್ದುಪಡಿ ಮಸೂದೆ ಮಹತ್ವದ್ದಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ದೇಶದಲ್ಲೀಗ 1934 ಸಹಕಾರಿ ಬ್ಯಾಂಕುಗಳಿದ್ದು, ಕಳೆದೆರೆಡು ದಶಕಗಳಲ್ಲಿ ಅವ್ಯವಹಾರ, ಹಣಕಾಸು ಕೊರತೆ ಕಾರಣಗಳಿಗಾಗಿ 430 ಸಹಕಾರಿ ಬ್ಯಾಂಕ್ಗಳ ಪರವಾನಗಿ ರದ್ದುಪಡಿಸಲಾಗಿದೆ. 2019-20 ಹಣಕಾಸು ವರ್ಷದಲ್ಲಿ 277 ಬ್ಯಾಂಕ್ಗಳು ನಷ್ಟದಲ್ಲಿದ್ದವು.
ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್, ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್, ಮಾಧವಪುರ ಮರ್ಚೆಂಟೈಲ್ ಕೋ ಆಪರೇಟಿವ್ ಬ್ಯಾಂಕ್, ಕೃಷಿ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್, ಚಾರ್ವಿುನಾರ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್, ನಾಗ್ಪುರ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಹೀಗೆ ಹಲವು ಬ್ಯಾಂಕ್ಗಳು ಹಗರಣದಲ್ಲಿ ಸಿಲುಕಿಕೊಂಡಿವೆ. ಇವುಗಳನ್ನು ನಂಬಿದ್ದ ಗ್ರಾಹಕರೀಗ ಕೋರ್ಟು-ಕಚೇರಿ ಅಲೆಯುವಂತಾಗಿದೆ. ಇದರಿಂದ ಎಚ್ಚೆತ್ತುಕೊಂಡ ಕೇಂದ್ರ ಹೊಸ ಕಾಯ್ದೆಯನ್ನು ರೂಪಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರವು ಠೇವಣಿ ನಿಯಂತ್ರಣಕ್ಕೆ ಮುಂದಾಗಿರುವುದು ಮತ್ತು ಆ ಮುಖೇನ ಅವ್ಯವಹಾರಗಳನ್ನು ಕೊನೆಗಾಣಿಸಲು ಹೊರಟಿರುವುದು ಉತ್ತಮ ಬೆಳವಣಿಗೆ.