ನ್ಯೂಸ್

ಸಂಪಾದಕೀಯ| ಚೀನಾದ ಕುತಂತ್ರ ಬಯಲು..ನಂಬಲರ್ಹ ರಾಷ್ಟ್ರವಲ್ಲವೇ ಅಲ್ಲ..

lakshmihegde

ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳಲು ನಿರಂತರ ಯತ್ನಿಸುತ್ತಲೇ ಇರುವ, ಒಪ್ಪಂದಗಳನ್ನೆಲ್ಲ ಮುರಿದು ಉದ್ವಿಗ್ನತೆ ಸೃಷ್ಟಿಸುತ್ತಿರುವ ಚೀನಾ ಭಾರತದೊಳಗಿನ ಬೆಳವಣಿಗೆಗಳನ್ನೂ ಬೇಹುಗಾರಿಕಾ ಕಣ್ಣುಗಳಿಂದ ನೋಡಲು ಯತ್ನಿಸುತ್ತಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದ್ದು, ಅದು ನಂಬಲರ್ಹವಲ್ಲದ ರಾಷ್ಟ್ರವಾಗಿ ಮುಜುಗರಕ್ಕೆ ಒಳಗಾಗಿದೆ. ತನ್ನ ಪ್ರಾಬಲ್ಯ ಸಾಧಿಸಲು, ವಿರೋಧಿಗಳನ್ನು ಹಣಿಯಲು ಎಷ್ಟು ಕೆಳಮಟ್ಟಿಗಾದರೂ ಹೋಗಬಲ್ಲೆ ಎಂಬುದನ್ನು ಆ ರಾಷ್ಟ್ರ ಸಾಬೀತು ಮಾಡಿದೆ. ಭಾರತ ಇತ್ತೀಚೆಗಷ್ಟೇ ಭದ್ರತಾ ಕಾರಣಗಳಿಂದ ಚೀನಾದ 200ಕ್ಕೂ ಅಧಿಕ ಆಪ್​ಗಳನ್ನು ನಿಷೇಧಿಸಿದಾಗ ಕೆಲವರು ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಆಪ್​ಗಳನ್ನು ನಿಷೇಧಿಸುವ ನಿರ್ಧಾರ ಅತ್ಯಂತ ಸೂಕ್ತ, ಸಕಾಲಿಕ ಎಂಬುದು ಈಗ ಸ್ಪಷ್ಟಗೊಂಡಿದೆ. 4ಜಿ ಮತ್ತು 5ಜಿ ತರಂಗಾಂತರ ಹಂಚಿಕೆಯಲ್ಲೂ ಚೀನೀ ಕಂಪನಿಗಳು ಭಾಗವಹಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಆಮದು ಮೇಲಿನ ಅವಲಂಬನೆಯನ್ನು ತಗ್ಗಿಸಲು ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡಲಾಗಿದೆ. ಕೇಂದ್ರದ ಈ ಕಠಿಣ ಕ್ರಮಗಳು ಮತ್ತು ಗಡಿಯಲ್ಲಿ ನೀಡಿದ ತಕ್ಕ ಪ್ರತ್ಯುತ್ತರ ಆ ದೇಶವನ್ನು ಮತ್ತಷ್ಟು ಹತಾಶವಾಗಿಸಿದೆ ಎನ್ನಲು ಈ ಬೆಳವಣಿಗೆಗಳೇ ಸಾಕ್ಷಿ.

ಭಾರತದ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು, ನ್ಯಾಯಮೂರ್ತಿಗಳ ಸಹಿತ 10 ಸಾವಿರಕ್ಕೂ ಅಧಿಕ ಭಾರತೀಯರ ಮೇಲೆ ಚೀನಾ ಬೇಹುಗಾರಿಕೆ ನಡೆಸುತ್ತಿರುವ ಸಂಗತಿ, ಅದರ ಮುಖವಾಡವನ್ನು ಬಯಲು ಮಾಡಿದೆ. ಚೀನಾ ಸರ್ಕಾರಕ್ಕೆ ಸಂಬಂಧಿಸಿದ ಜೆನ್​ಹುವಾ ಎಂಬ ಖಾಸಗಿ ಮಾಹಿತಿ ತಂತ್ರಜ್ಞಾನ ಕಂಪನಿ ಈ ಮೋಸದಾಟದಲ್ಲಿ ನಿರತವಾಗಿದೆ ಎಂದು ಹೇಳಲಾಗಿದೆ. ಹಲವು ವಿದೇಶಿ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಅದು ಕೆಲಸ ಮಾಡುತ್ತಿದ್ದು, ಇಂಟರ್​ನೆಟ್ ಖಾತೆಗಳಿಗೆ ಕನ್ನ ಹಾಕಿ ಮಾಹಿತಿ ಕದಿಯುವುದು ಪ್ರಮುಖ ಕಾರ್ಯತಂತ್ರವಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬಸ್ಥರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ನ್ಯಾಯಮೂರ್ತಿಗಳು, ವಿಜ್ಞಾನಿಗಳು, ಪತ್ರಕರ್ತರು, ಅಧಿಕಾರಿಗಳು, ನಟ-ನಟಿಯರು, ಕ್ರೀಡಾಪಟುಗಳು, ಧಾರ್ವಿುಕ ನಾಯಕರು ಮತ್ತು ಹೋರಾಟಗಾರರ ಬೇಹುಗಾರಿಕೆಗೆ ಚೀನಾ ಯತ್ನಿಸಿದೆ. ಇದನ್ನೂ ಓದಿ: ಐಪಿಎಲ್​ಗೆ ಮುನ್ನ ನವೀಕರಣಗೊಂಡ ಶಾರ್ಜಾ ಕ್ರೀಡಾಂಗಣಕ್ಕೆ ಮನಸೋತ ಸೌರವ್ ಗಂಗೂಲಿ

ಭಾರತದ ಪ್ರಮುಖ ರಾಜಕಾರಣಿಗಳು ಮತ್ತು ಶಾಸಕಾಂಗ ವ್ಯಕ್ತಿಗಳ ಚಟುವಟಿಕೆಗಳನ್ನು ಗಮನಿಸುವ ಮೂಲಕ ಇಲ್ಲಿನ ಕಾರ್ಯತಂತ್ರಗಳನ್ನು ಅರಿಯುವುದು, ಆ ಮೂಲಕ ಸಮರ ಅಥವಾ ಮಾತುಕತೆಗಳಲ್ಲಿ ಮೇಲುಗೈ ಸಾಧಿಸುವ ಹುನ್ನಾರ ಚೀನಾದ್ದು. ಭಾರತ ಮಾತ್ರವಲ್ಲದೆ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಯುಎಇ, ಕೆನಡಾ, ಜರ್ಮನಿ ಮುಂತಾದ ದೇಶಗಳ ಪ್ರಮುಖರ ಮೇಲೂ ಅದು ಬೇಹುಗಾರಿಕೆ ನಡೆಸುತ್ತಿದೆಯಂತೆ. ಚೀನಾದ ನೈಜಮುಖ ಈಗ ಬಯಲಿಗೆ ಬಂದಿದೆ. ಭಾರತ ಸೇರಿ ಅಂತಾರಾಷ್ಟ್ರೀಯ ವಲಯ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇಂಥ ಉದ್ಧಟತನಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಬೇಕು. ಅದರ ವಿಸ್ತರಣಾವಾದದ ಮಹತ್ವಾಕಾಂಕ್ಷೆಗೂ ಬಲವಾದ ಪೆಟ್ಟು ನೀಡಲು ಇದು ಸಕಾಲ.