ಭಾರತ ಮುಂಚಿನಂತಿರದೆ ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ವಿದೇಶಾಂಗ ನೀತಿಯಂತೂ ವಿಶ್ವದ ಗಮನ ಸೆಳೆದಿದೆ ಎಂಬುದು ಭಾರತ-ಆಸ್ಟ್ರೇಲಿಯಾ ಶೃಂಗಸಭೆ ಮೂಲಕ ಮತ್ತೊಮ್ಮೆ ಸಾಬೀತುಗೊಂಡಿದೆ. ಜಗತ್ತು ಕರೊನಾ ಸೋಂಕಿನ ಹಾವಳಿಯ ವಿರುದ್ಧ ಹೋರಾಟದಲ್ಲಿ ಮಗ್ನವಾಗಿದೆ. ಈ ಹೊತ್ತಲ್ಲಿ ಮೊದಲ ಆನ್ಲೈನ್ ಶೃಂಗಸಭೆ ನಡೆಸಿರುವ ಭಾರತ ಮತ್ತು ಆಸ್ಟ್ರೇಲಿಯಾ ಮಹತ್ವದ ಏಳು ಒಪ್ಪಂದಗಳಿಗೆ ಸಹಿ ಹಾಕಿರುವುದಲ್ಲದೆ, ಪರಸ್ಪರ ವಿಶ್ವಾಸ, ಸ್ನೇಹವೃದ್ಧಿಗೆ ಬದ್ಧತೆ ತೋರಿವೆ. ಈ ಆನ್ಲೈನ್ ಶೃಂಗಸಭೆ ಜಗತ್ತಿನ ಹಲವು ರಾಷ್ಟ್ರಗಳ ಗಮನ ಸೆಳೆದಿದೆ. ಜಗತ್ತಿನ ಬಲಿಷ್ಠ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಸದೃಢಗೊಳಿಸುತ್ತಿರುವ ಭಾರತ ಆಸ್ಟ್ರೇಲಿಯಾ ಜತೆಗಿನ ಸ್ನೇಹವರ್ಧನೆ ಮೂಲಕ ಚೀನಾದ ತಂತ್ರಗಳಿಗೂ ತಕ್ಕ ಉತ್ತರವನ್ನು ನೀಡಿದೆ.
ಚೀನಾ ಇತ್ತೀಚೆಗೆ ಗಡಿಯಲ್ಲಿ ಉದ್ವಿಗ್ನಸ್ಥಿತಿ ನಿರ್ವಿುಸಿದ್ದಲ್ಲದೆ, ಯುದ್ಧೋತ್ಸಾಹಕ್ಕೂ ಸಿದ್ಧವಾದಂತೆ ತೋರಿತು. ಭಾರತದ ನೆರೆರಾಷ್ಟ್ರಗಳಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ವಿವಿಧ ಮಾರ್ಗ ಅನುಸರಿಸುತ್ತಿರುವ, ಆ ರಾಷ್ಟ್ರಗಳನ್ನು ಸಾಲದ ಸುಳಿಗೆ ಸಿಲುಕಿಸುತ್ತಿರುವ ಚೀನಾ ಲಡಾಖ್ ಗಡಿಯಲ್ಲಿ ಕಾಲುಕೆದರಿ ಜಗಳಕ್ಕೆ ಬಂದದ್ದು ಅತಿರೇಕದ ಕ್ರಮವೇ ಆಗಿತ್ತು. ಭಾರತವೂ ಈ ಉಪಟಳಗಳಿಗೆಲ್ಲ ಸೂಕ್ತ ಉತ್ತರ ನೀಡಿದ ಬಳಿಕ ಮೆತ್ತಗಾದ ಚೀನಾ ‘ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವ ದಾರಿ ಪ್ರಶಸ್ತವಾಗಿದೆ’ ಎಂದಿತು. ಅದರಲ್ಲೂ, ಅಮೆರಿಕ ಭಾರತದ ಬೆನ್ನಿಗೆ ನಿಂತಾಗ ಚೀನಾದ ವರಸೆ ಬದಲಾಯಿತು.
ಆಸ್ಟ್ರೇಲಿಯಾದ ರಫ್ತಿನಲ್ಲಿ ಚೀನಾ ದೊಡ್ಡ ಗ್ರಾಹಕ ರಾಷ್ಟ್ರ. ಆದರೆ, ಇತ್ತೀಚಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಬಿಕ್ಕಟ್ಟು ಸೃಷ್ಟಿಯಾಗಿದೆ ಮತ್ತು ಕರೊನಾ ಸೋಂಕು ಪ್ರಸರಣ ವಿಚಾರದಲ್ಲಿ ಚೀನಾದ ವಿರುದ್ಧ ಜಾಗತಿಕ ಅಭಿಪ್ರಾಯ ರೂಪಿಸಲು ಆಸ್ಟ್ರೇಲಿಯಾ ಪ್ರಯತ್ನಿಸುತ್ತಿದೆ. ಹೀಗಿರುವಾಗ, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ರಕ್ಷಣೆ, ತಂತ್ರಜ್ಞಾನ ವಿನಿಮಯ, ವೈದ್ಯಕೀಯ ಸೇವೆ ಬಳಕೆ ಸೇರಿ ಏಳು ಒಪ್ಪಂದಗಳಿಗೆ ಅಂಕಿತ ಬಿದ್ದಿದೆ. ಈ ಪೈಕಿ ತುಂಬ ಮುಖ್ಯವಾದದ್ದು ‘ಮ್ಯೂಚುವಲ್ ಲಾಜಿಸ್ಟಿಕ್ಸ್ ಸಪೋರ್ಟ್ ಅಗ್ರಿಮೆಂಟ್’ (ಎಂಎಲ್ಎಸ್ಎ). ಈ ಒಪ್ಪಂದದ ಅಡಿಯಲ್ಲಿ ಎರಡೂ ದೇಶಗಳು ಯುದ್ಧ ವಿಮಾನಗಳ ದುರಸ್ತಿ, ಇಂಧನ ಮರುಪೂರಣ ಮತ್ತು ರಕ್ಷಣಾ ಸಾಮಗ್ರಿಗಳ ಸಾಗಣೆಗಾಗಿ ಪರಸ್ಪರ ತಮ್ಮ ಸೇನಾನೆಲೆಗಳನ್ನು ಬಳಸಿಕೊಳ್ಳಬಹುದಾಗಿದೆ. ಹಾಗಾಗಿಯೇ, ಇದು ರಕ್ಷಣಾ ವಲಯದ ಮಹತ್ವದ ಒಪ್ಪಂದ ಎಂದು ವಿಷಯತಜ್ಞರು ವಿಶ್ಲೇಷಿಸಿದ್ದಾರೆ. ಭಾರತವು ಅಮೆರಿಕ, ಫ್ರಾನ್ಸ್ ಮತ್ತು ಸಿಂಗಾಪುರ ಜತೆಗೂ ಈ ಬಗೆಯ ಒಪ್ಪಂದ ಮಾಡಿಕೊಂಡಿದೆ ಎಂಬುದು ಗಮನಾರ್ಹ. ಜಿ-7 ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸುವ ಪ್ರಸ್ತಾಪವನ್ನು ಅಮೆರಿಕ ಇತ್ತೀಚೆಗೆ ಮಾಡಿರುವುದು ಕೂಡ ಮಹತ್ವದ ಬೆಳವಣಿಗೆ.
ಇದನ್ನೂ ಓದಿ: ದಾವೂದ್ ಇಬ್ರಾಹಿಂ ಮತ್ತು ಪತ್ನಿಗೆ ಕೋವಿಡ್ 19 ಸೋಂಕು?
ಚೀನಾಕ್ಕೆ ತನ್ನ ಸೇನಾಸಾಮರ್ಥ್ಯದ ಮೇಲೆ ಅತಿಯಾದ ವಿಶ್ವಾಸವಿದೆ ಮತ್ತು ಅದು ಭಾರತವನ್ನು ಈಗಲೂ ‘ದುರ್ಬಲ ರಾಷ್ಟ್ರ’ ಎಂದು ಭಾವಿಸಿದಂತಿದೆ. ಆದರೆ, ಚೀನಾದ ಎಲ್ಲ ತಂತ್ರಗಳಿಗೂ ಸರಿಯಾದ ಉತ್ತರವನ್ನೇ ನೀಡುತ್ತಿರುವ ಭಾರತ ಆಸ್ಟ್ರೇಲಿಯಾ ಜತೆ ಸ್ನೇಹಸಂಬಂಧದ ಬೆಸುಗೆ ಮಾಡಿಕೊಂಡಿರುವುದು ಭವಿಷ್ಯದ ದಾರಿಗೂ ಉತ್ತಮ.