ನ್ಯೂಸ್

ಸ್ವಾವಲಂಬನೆಯತ್ತ ಹೆಜ್ಜೆ: ರಕ್ಷಣಾ ರಫ್ತು 9 ವರ್ಷಗಳಲ್ಲಿ 23 ಪಟ್ಟು ಹೆಚ್ಚಳ

Webdesk - Ravikanth

ಭಾರತದ ರಕ್ಷಣಾ ರಫ್ತು 2013-14ನೇ ಹಣಕಾಸು ವರ್ಷದಲ್ಲಿ ಕೇವಲ 686 ಕೋಟಿ ರೂ. ಇದ್ದುದು 2022-23ರಲ್ಲಿ 16,000 ಕೋಟಿ ರೂ. ಮೌಲ್ಯದ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿ, ಒಂಬತ್ತು ವರ್ಷಗಳಲ್ಲಿ 23 ಪಟ್ಟು ಹೆಚ್ಚಳ ಕಂಡಿರುವುದು ಗಮನಾರ್ಹ ಸಾಧನೆಯಾಗಿದೆ. ಜಾಗತಿಕ ರಕ್ಷಣಾ ಉತ್ಪಾದನಾ ವಲಯದಲ್ಲಿ ಭಾರತದ ಪ್ರಗತಿಯ ಸಂಕೇತವಾಗಿ ಇದು ಗೋಚರಿಸುತ್ತದೆ. ಈ ಹಿಂದೆ ರಕ್ಷಣಾ ಸಾಧನಗಳ ಆಮದುದಾರ ಎಂದೇ ಕರೆಯಲ್ಪಡುತ್ತಿದ್ದ ಭಾರತವು ಈಗ ಡಾರ್ನಿಯರ್-228 ವಿಮಾನಗಳು, ಫಿರಂಗಿಗಳು, ಬ್ರಹ್ಮೋಸ್ ಕ್ಷಿಪಣಿಗಳು, ಪಿನಾಕಾ ರಾಕೆಟ್​ಗಳು, ರಾಡಾರ್​ಗಳು, ಸಿಮ್ಯುಲೇಟರ್​ಗಳು, ಶಸ್ತ್ರಸಜ್ಜಿತ ವಾಹನಗಳಂತಹ ಪ್ರಮುಖ ಸಾಮಗ್ರಿಗಳನ್ನು ರಫ್ತು ಮಾಡುತ್ತಿದ್ದು, ಲಘು ಯುದ್ಧ ವಿಮಾನ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್, ಏರ್​ಕ್ರಾಫ್ಟ್ ಕ್ಯಾರಿಯರ್ ಮುಂತಾದ ಭಾರತದ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಹೆಚ್ಚುತ್ತಿದೆ ಎಂಬುದು ಸ್ವಾಗತಾರ್ಹ ಸಂಗತಿಯಾಗಿದೆ.

ದೇಶದ 100 ಸಂಸ್ಥೆಗಳು 85ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಿವೆ. ರಫ್ತು ಕಾರ್ಯವಿಧಾನಗಳ ಸರಳೀಕರಣ, ಉದ್ಯಮ ಸ್ನೇಹಿ ವಾತಾವರಣ ನಿರ್ವಣ, ವಿಳಂಬಗತಿ ಕಡಿತ ಮುಂತಾದ ಕ್ರಮಗಳ ಮೂಲಕ ರಕ್ಷಣಾ ರಫ್ತಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನೀಡಿದ ಉತ್ತೇಜನ ಪ್ರತಿಫಲ ಇದಾಗಿದೆ. ‘ಆತ್ಮನಿರ್ಭರ ಭಾರತ’ ಯೋಜನೆಯು ರಕ್ಷಣಾ ಸಾಧನಗಳ ದೇಶೀಯ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ ಉತ್ತೇಜಿಸಲು ಸಾಕಷ್ಟು ನೆರವಾಗಿದೆ. ದೇಶೀಯವಾಗಿಯೇ ರಕ್ಷಣಾ ಉತ್ಪನ್ನಗಳು ಇದೇ ರೀತಿಯಲ್ಲಿ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತ ಸಾಗಿದರೆ ದೀರ್ಘಾವಧಿಯಲ್ಲಿ ರಕ್ಷಣಾ ಉಪಕರಣಗಳ ಆಮದು ಅವಲಂಬನೆ ಕಡಿಮೆಯಾಗುತ್ತದೆ. 2018-19ನೇ ಹಣಕಾಸು ವರ್ಷದಲ್ಲಿ ಒಟ್ಟಾರೆ ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣವು ಶೇ. 46ರಷ್ಟಿತ್ತು. ಇದು 2022ರ ಡಿಸೆಂಬರ್​ನಲ್ಲಿ ಶೇ. 36.7ರಷ್ಟಾಗಿದೆ. ಎರಡ್ಮೂರು ವರ್ಷಗಳಲ್ಲಿ ಅಂದಾಜು ಶೇ. 10ರಷ್ಟು ಆಮದು ತಗ್ಗಿರುವುದು ಬಹುದೊಡ್ಡ ಸಾಧನೆಯೇ ಆಗಿದೆ.

2022-23 ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ರಕ್ಷಣಾ ವೆಚ್ಚಗಳಿಗೆ ಮೀಸಲಿಟ್ಟಿರುವ ಹಣ 5,25,166 ಕೋಟಿ ರೂಪಾಯಿ. ಅಮೆರಿಕ, ಚೀನಾ ಹಾಗೂ ರಷ್ಯಾ ನಂತರ ಸೇನೆಗಾಗಿ ಅತಿಹೆಚ್ಚು ವ್ಯಯ ಮಾಡುವ ರಾಷ್ಟ್ರ ಭಾರತವಾಗಿದೆ. ರಷ್ಯಾ, ಫ್ರಾನ್ಸ್, ಇಸ್ರೇಲ್, ಅಮೆರಿಕ, ಇಂಗ್ಲೆಂಡ್ ದೇಶಗಳಿಂದ ಬಹುಪಾಲು ರಕ್ಷಣಾ ಸಾಧನಗಳನ್ನು ಭಾರತ ಆಮದು ಮಾಡಿಕೊಳ್ಳುತ್ತ ಬಂದಿದೆ. ಗಡಿ ತಂಟೆ ತೆಗೆಯುವ ಚೀನಾದಿಂದಲೂ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂಬುದು ಭದ್ರತೆ ದೃಷ್ಟಿಯಿಂದ ಪ್ರಶ್ನಾರ್ಹವಾಗಿದೆ. 2021ನೇ ಸಾಲಿನಲ್ಲಿ ಜಗತ್ತಿನ ಒಟ್ಟಾರೆ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತದ ಪಾಲು ಶೇ. 17.2 ರಷ್ಟು ಇತ್ತು. ಶಸ್ತ್ರಾಸ್ತ್ರ ಖರೀದಿಗಾಗಿ ವಿದೇಶಗಳ ಮೇಲೆ ಅವಲಂಬಿತವಾಗಿರುವುದು ಹಲವು ದೃಷ್ಟಿಕೋನಗಳಿಂದ ಅನಾನುಕೂಲಕರ ಸಂಗತಿಯಾಗಿದ್ದು, ಇದು ವಿದೇಶಿ ವಿನಿಮಯ ಸಂಗ್ರಹ ಅಪಾರ ಪ್ರಮಾಣದಲ್ಲಿ ಕರಗಿ ಆರ್ಥಿಕ ಹೊರೆಯನ್ನುಂಟು ಮಾಡುತ್ತದೆ. ನಮಗೆ ಅಗತ್ಯವಿದ್ದ ಸಮಯದಲ್ಲಿ ಹಾಗೂ ನಾವು ಬಯಸುವಂತಹ ಶಸ್ತ್ರಾಸ್ತ್ರಗಳು ಲಭಿಸುವ ಸಾಧ್ಯತೆಗಳೂ ಇರುವುದಿಲ್ಲ. ಈ ಎಲ್ಲ ಅಂಶಗಳನ್ನು ಮನಗಂಡ ಕೇಂದ್ರ ಸರ್ಕಾರವು ರಕ್ಷಣಾ ಸಾಮಗ್ರಿಗಳ ದೇಶೀಯ ಉತ್ಪಾದನೆಗೆ ಬೆಂಬಲ ನೀಡುತ್ತಿರುವುದು ಸಾಕಷ್ಟು ಫಲ ನೀಡುತ್ತಿದೆ ಎಂಬುದನ್ನು ಪ್ರಸ್ತುತ ಅಂಕಿ-ಅಂಶಗಳು ತೋರಿಸುತ್ತವೆ. ದೇಶದಲ್ಲೇ ರಕ್ಷಣಾ ಉಪಕರಣಗಳ ಉತ್ಪಾದನೆ ಹೆಚ್ಚಿದರೆ ಸಾಕಷ್ಟು ಉದ್ಯೋಗ ಸೃಷ್ಟಿಯೂ ಆಗುತ್ತದೆ.